Site icon Vistara News

Gender Change: ನಾಪತ್ತೆಯಾಗಿದ್ದ ಗಂಡ ಹೆಣ್ಣಾಗಿ ಪತ್ತೆ; ಆಘಾತಗೊಂಡು ಮೂರ್ಛೆ ಹೋದ ಹೆಂಡತಿ!

gender change 1

ರಾಮನಗರ: ನಾಪತ್ತೆಯಾಗಿದ್ದ ವಿವಾಹಿತ ವ್ಯಕ್ತಿಯೊಬ್ಬ ಹೆಣ್ಣಾಗಿ ಪತ್ತೆಯಾದ ಘಟನೆ ನಗರದಲ್ಲಿ ನಡೆದಿದೆ. 2017ರಲ್ಲಿ ಮನೆ ಬಿಟ್ಟು ಹೋಗಿದ್ದ ಗಂಡ, ಇದೀಗ ಹೆಣ್ಣಾಗಿರುವುದನ್ನು ಕಂಡ ಕುಟುಂಬಸ್ಥರು ಆಘಾತಗೊಂಡಿದ್ದು, ಗಂಡನನ್ನು ಆ ರೂಪದಲ್ಲಿ ಕಂಡು ಹೆಂಡತಿ ಮೂರ್ಛೆ ಹೋಗಿದ್ದಾಳೆ.

ಚಿಕನ್ ಅಂಡಗಿಯಲ್ಲಿ ಕೆಲಸ ಮಾಡಿಕೊಂಡಿದ್ದ ಲಕ್ಷ್ಮಣರಾವ್ ಎಂಬುವರು 2015 ರಲ್ಲಿ ಮದುವೆಯಾಗಿ ಪತ್ನಿಯೊಂದಿಗೆ ರಾಮನಗರಲ್ಲಿ ನೆಲೆಸಿದ್ದ. ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಮದುವೆ ಆದ ಎರಡೇ ವರ್ಷಕ್ಕೆ ಅಂದರೆ 2017ರಲ್ಲಿ ಲಕ್ಷ್ಮಣ್ ಮನೆಯಿಂದ ನಾಪತ್ತೆಯಾಗಿದ್ದ. ಆತ ಸಾಲದ ವಿಚಾರಕ್ಕೆ ಜಿಗುಪ್ಸೆಗೊಂಡಿದ್ದ ಎನ್ನಲಾಗಿದೆ. ಗಂಡನ ಬಗ್ಗೆ ಯಾವುದೇ ಸುಳಿವು ಸಿಗದ ಕಾರಣ ಐಜೂರು ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದಳು.

ಸುಳಿವು ಕೊಟ್ಟ ಬಿಗ್ ಬಾಸ್ ಕಾರ್ಯಕ್ರಮ

ಬರೋಬ್ಬರಿ ಆರು ವರ್ಷಗಳ ಬಳಿಕ ಇದೀಗ ಲಕ್ಷ್ಮಣ್ ರಾವ್ ಸುಳಿವು ಪತ್ತೆಯಾಗಿದೆ. ಆದರೆ, ಆತನನ್ನು ಕಂಡು ತನಿಖೆ ನಡೆಸುತ್ತಿದ್ದ ಪೊಲೀಸರೇ ಶಾಕ್‌ ಆಗಿದ್ದಾರೆ. ಇನ್ನು ಬಿಗ್ ಬಾಸ್ ಕಾರ್ಯಕ್ರಮ ವ್ಯಕ್ತಿಯ ಪತ್ತೆಗೆ ಸುಳಿವು ನೀಡಿದೆ. ಮೈಸೂರಿನಲ್ಲಿ ತೃತೀಯ ಲಿಂಗಿಗಳು, ಬಿಗ್ ಬಾಸ್ ಸ್ಪರ್ಧಿ ನೀತು ವನಜಾಕ್ಷಿ ಅವರ ಸ್ವಾಗತಕ್ಕೆ ತೆರಳಿ ಸನ್ಮಾನಿಸಿದ್ದರು. ಈ ವೇಳೆ ತೃತೀಯ ಲಿಂಗಿ ರಶ್ಮಿಕಾ ಮಾಡಿದ್ದ ರೀಲ್ಸ್‌ನಲ್ಲಿ ಲಕ್ಷ್ಮಣ್ ಹೆಣ್ಣಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ | Abuse case : ಯುವತಿ ಎದುರಿಗೆ ಹಸ್ತಮೈಥುನ ಮಾಡಿಕೊಂಡ ವಿಕೃತಿ ಅರೆಸ್ಟ್‌

ವೈರಲ್ ಆಗಿದ್ದ ರೀಲ್ಸ್‌ನಲ್ಲಿ ಲಕ್ಷ್ಮಣ್ ಮುಖದ ಸ್ಪಷ್ಟ ಹೋಲಿಕೆ ಇತ್ತು. ಹೀಗಾಗಿ ಕುಟುಂಬಸ್ಥರಿಗೂ ಲಕ್ಷ್ಮಣ್ ಇರಬಹುದು ಎಂಬ ಅನುಮಾನ ಮೂಡಿದೆ. ತೃತೀಯ ಲಿಂಗಿಗಳ ಸಾಮಾಜಿಕ ಹೋರಾಟಗಾರ್ತಿ ರಶ್ಮಿಕಾ ಹೆಸರಿನ ರೀಲ್ಸ್ ಪ್ರೊಫೈಲ್ ಪರಿಶೀಲಿಸಿದಾಗ ಐಜೂರು ಪೊಲೀಸರು ಲಕ್ಷ್ಮಣ್ ರಾವ್ ವಿಚಾರ ಪ್ರಸ್ತಾಪಿಸಿದ್ದಾರೆ. ಹಿನ್ನೆಲೆ ಗೊತ್ತಿಲ್ಲವಾದರೂ ವಿಳಾಸ ಕೊಡುವುದಾಗಿ ರಶ್ಮಿಕಾ ಹೇಳಿದ್ದಾರೆ. ವಿಳಾಸ ಅನುಸರಿಸಿ ತೆರಳಿದ್ದ ಪೊಲೀಸರಿಗೆ ಶಾಕ್ ಎದುರಾಗಿದ್ದು, ಪೊಲೀಸರ ಬಳಿ ಇದ್ದ ಫೋಟೋಗೂ ಎದುರಿಗಿದ್ದ ಹೆಣ್ಣಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಆದರೆ, ಮುಖ ಮಾತ್ರ ಪೂರ್ಣ ಹೋಲಿಕೆಯಾಗುತ್ತಿತ್ತು.

ಪೊಲೀಸರು ನೀವು ಲಕ್ಷ್ಮಣ್ ಅಲ್ಲವೇ ಎಂದು ಕೇಳಿದಾಗ, ನಾನು ಲಕ್ಷ್ಮಣ್ ರಾವ್ ಅಲ್ಲ, ನಾನು ವಿಜಯಲಕ್ಷ್ಮೀ ಎಂದು ಉತ್ತರಿಸಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ತಾನು ವಿಜಯಲಕ್ಷ್ಮೀ ಎಂದು ಲಕ್ಷ್ಮಣ್ ಪಟ್ಟು ಹಿಡಿದಿದ್ದು, ಪೊಲೀಸರೂ ಒಂದು ಹಂತದಲ್ಲಿ ಬೇರೆಯೇ ಅಭಿಪ್ರಾಯಕ್ಕೆ ಬಂದಿದ್ದಾರೆ. ಲಕ್ಷ್ಮಣ್ ನಿಮ್ಮ ಹಾಗೆಯೇ ಕಾಣಿಸಿದ ಕಾರಣ ವಿಚಾರಿಸಲು ಬಂದೆವು. ನೀವು ವಾಪಾಸ್ ಹೋಗಿ ಎಂದು ಪೊಲೀಸರು ಹೇಳಿದ್ದಾರೆ. ವಾಪಾಸ್ ಹೋಗೊ ವೇಳೆ, ಜೋರಾಗಿ ಲಕ್ಷ್ಮಣ್ ಎಂದು ಇನ್ಸ್ ಪೆಕ್ಟರ್ ಕೂಗಿದ್ದಾರೆ. ಕೂಡಲೇ ಹಾಂ… ಎಂಬ ಪ್ರತ್ಯುತ್ತರ ವಿಜಯಲಕ್ಷ್ಮೀ ಬಾಯಿಯಿಂದ ಬಂದಿದೆ!.

ಪೊಲೀಸರಿಗೆ ಎಲ್ಲವೂ ಖಾತ್ರಿಯಾಗಿ ಐಜೂರು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. 2017ರಲ್ಲಿ ರಾಮನಗರ ಬಿಟ್ಟು ಹೋಗಿದ್ದ ಲಕ್ಷ್ಮಣ್ ಲಿಂಗ ಪರಿವರ್ತನೆ ಮಾಡಿಸಿಕೊಂಡಿರುವುದು ತಿಳಿದುಬಂದಿದೆ. ಹೀಗಾಗಿ ಕುಟುಂಬಸ್ಥರನ್ನು ಪೊಲೀಸರು ಠಾಣೆಗೆ ಕರೆಸಿದ್ದಾರೆ. ಠಾಣೆಗೆ ಆಗಮಿಸಿದಾಗ ಗಂಡ ಹೆಣ್ಣಾಗಿ ಪರಿವರ್ತನೆ ಆಗಿದ್ದನ್ನು ಕಂಡು ಪತ್ನಿ ಮೂರ್ಛೆ ಹೋಗಿದ್ದಾರೆ. ಇನ್ನು ತಂದೆಯ ಅವತಾರ ಕಂಡ ಪುಟ್ಟ ಮಕ್ಕಳು ಏನು ನಡೆಯುತ್ತಿದೆ ಎನ್ನುವುದನ್ನೂ ತಿಳಿಯದಂತಾಗಿದ್ದಾರೆ. ಅದೇ ರೀತಿ ಅಳಿಯನ ಅವತಾರ ಕಂಡು ಮಾವ ಪೇಚಾಡಿ ಮಗಳ ಬಾಳು ಹಾಳಾಯಿತು ಎಂದು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ | Bike Accident: ಎರಡು ಬೈಕ್‌ಗಳ ನಡುವೆ ಡಿಕ್ಕಿಯಾಗಿ ವಿದ್ಯಾರ್ಥಿ ದುರ್ಮರಣ

‘ನಿನಗೆ ಹೆಂಡತಿ ಮಕ್ಕಳು ಬೇಡವೇ” ಎಂದು ಪ್ರಶ್ನಿಸಿದಾಗ, ‘ನನಗೆ ನನ್ನ ತೃತೀಯ ಲಿಂಗಿಗಳ ಕುಟುಂಬವೇ ಇಷ್ಟ. ಹೆಂಡತಿ ಮಕ್ಕಳು ಬೇಡ, ನಿಮ್ಮ ತಂಟೆಗೆ ಬರುವುದಿಲ್ಲ. ನನ್ನನ್ನು ಬಿಟ್ಟು ಬಿಡಿ’ ಎಂದು ಬೇಡಿಕೊಂಡಿದ್ದಾನೆ. ಪೊಲೀಸರು ಮುಚ್ಚಳಿಕೆ ಪತ್ರ ಬರೆಸಿಕೊಂಡು ನಾಪತ್ತೆ ಪ್ರಕರಣ ಇತ್ಯರ್ಥ ಗೊಳಿಸಿದ್ದಾರೆ.

Exit mobile version