ದಾವಣಗೆರೆ : ಕೋತಿ ಪ್ರೀತಿ (Monkey love) ಎಂದರೆ ಹೇಗಿರುತ್ತದೆ ಎಂದು ತಿಳಿಯಬೇಕು ಅಂತಿದ್ದರೆ ನೀವು ದಾವಣಗೆರೆಯ ಚನ್ನಗಿರಿ (Davanagere News) ತಾಲೂಕಿನ ಬೆಳ್ಳಿಗನೂಡು ಗ್ರಾಮಕ್ಕೆ ಬರಬೇಕು. ಇಲ್ಲೊಂದು ಕೋತಿ ಮಕ್ಕಳ ಜತೆ ಮಕ್ಕಳಂತೆ ಆಟವಾಡುತ್ತದೆ (Monkey play with children), ಹಿರಿಯರ ಜತೆ ಅತ್ಯಂತ ಪ್ರೀತಿಯಿಂದ ನಡೆದುಕೊಳ್ಳುತ್ತದೆ. ಜತೆಗೆ ಯುವಕರ ಕೈಲಿ ಮೊಬೈಲ್ ಕಂಡರೆ ನಂಗೂ ತೋರ್ಸು ಎಂದು ಕಟ್ಟುಬೀಳುತ್ತೆ!
ಕಳೆದ ಏಳು ಎಂಟು ತಿಂಗಳ ಹಿಂದೆ ಎಲ್ಲಿಂದ ಬಂತೋ ಈ ಕೋತಿ ಇಡೀ ಊರಿನ ಮಗುವಿನಂತಿದೆ. ಎಲ್ಲರ ಜತೆಗೆ ಅತ್ಯಂತ ಪ್ರೀತಿಯಿಂದ ಬೆರೆಯುತ್ತಾ, ಮನುಷ್ಯರಿಗಿಂತಲೂ ಹೆಚ್ಚು ಅಕ್ಕರೆಯನ್ನು ಉಣಬಡಿಸುತ್ತದೆ. ಹೀಗಾಗಿ ಈ ಕೋತಿಯನ್ನು ಕಂಡರೆ ಇಡೀ ಗ್ರಾಮದ ಜನರಿಗೆ ಎಲ್ಲಿಲ್ಲದ ಪ್ರೀತಿ.
ಬೆಳ್ಳಿಗನೂಡು ಗ್ರಾಮದಲ್ಲಿರುವ ಮುಷ್ಯಾ ಮಕ್ಕಳೊಂದಿಗೆ ಅದೆಷ್ಟು ಚೆನ್ನಾಗಿ ಚಿನ್ನಾಟ ಆಡುತ್ತದೆ ಎಂದರೆ ಒಂದು ಮಕ್ಕಳ ಗುಂಪಿನಲ್ಲಿ ತಾನೂ ಒಬ್ಬ ಎಂಬಂತೆ ಇರುತ್ತದೆ. ಮಕ್ಕಳು ಕೂಡಾ ಅದನ್ನು ತಮ್ಮದೇ ಗುಂಪಿನ ಸದಸ್ಯ ಎಂಬಂತೆ ಭಾವಿಸಿದ್ದಾರೆ.
ಮಕ್ಕಳೊಂದಿಗೆ ಅದರ ಆಟ ಎಷ್ಟೊಂದು ಮಜವಾಗಿರುತ್ತದೆ ಎಂದರೆ ಮಕ್ಕಳು ಆಟವಾಡುತ್ತಿದ್ದರೆ ಅದು ಓಡಿ ಬಂದು ಹೆಗಲೇರಿ ಕುಳಿತುಕೊಳ್ಳುತ್ತದೆ. ಇಳಿಸಿದಷ್ಟು ಸರ್ತಿ ಅದು ಮತ್ತೆ ಹೆಗಲೇರುತ್ತದೆ. ಹಾಗೆ ಮಾಡುವಾಗ ಒಂದು ಸಣ್ಣ ಭಯವಾಗದಂತೆ, ನೋವಾಗದಂತೆ ನೋಡಿಕೊಳ್ಳುತ್ತದೆ.
ಊರಿನ ಯುವಕರಿಗೂ ಈ ಕೋತಿ ಅಂದರೆ ಅಚ್ಚುಮೆಚ್ಚು. ಯುವಕರ ಜತೆಗೇ ಸ್ವಲ್ಪ ಪ್ರಬುದ್ಧತೆಯಿಂದ ವರ್ತಿಸುವ ಅದು ಅವರು ಮೊಬೈಲ್ ನೋಡುತ್ತಿದ್ದರೆ ತನಗೂ ತೋರಿಸು ಅನ್ನುತ್ತದೆ. ಅವರ ಆಟಗಳಲ್ಲಿ ತಾನೂ ಇರುತ್ತೇನೆ ಎಂದು ಹಠ ಹಿಡಿಯುತ್ತದೆ.
ಮಕ್ಕಳು ಶಾಲೆಗೆ ಹೋದ ಮೇಲೆ, ಯುವಜನರು ಕೆಲಸಕ್ಕೆ ಹೋದ ಮೇಲೆ ಅದು ಹಿರಿಯರ ಜತೆಗೆ ತನ್ನ ಚಿನ್ನಾಟ ಮುಂದುವರಿಸುತ್ತದೆ. ಅವರ ಜತೆಗಿನ ನಡವಳಿಕೆಯೇ ಬೇರೆ. ಅವರಿಗೆ ಯಾವ ರೀತಿಯಲ್ಲೂ ಕಿರಿಕಿರಿ ಮಾಡದೆ ತನ್ನದೇ ಆಟದ ಮೂಲಕ ಅವರನ್ನು ಎಂಗೇಜ್ ಮಾಡುತ್ತದೆ.
ನೀವು ನಂಬಲೇಬೇಕು.. ಇದು ಮನುಷ್ಯರ ಜತೆ ಮಾತ್ರವಲ್ಲ, ಊರಿನ ನಾಯಿ, ನಾಯಿಮರಿಗಳ ಜತೆಗೂ ಅಷ್ಟೇ ಪ್ರೀತಿಯಿಂದ ಬೆರೆಯುತ್ತದೆ. ಅವುಗಳನ್ನು ಆಟವಾಡಿಸುತ್ತದೆ. ಅವುಗಳನ್ನು ತಾಯಿಯಂತೆ ಮುದ್ದು ಮಾಡುತ್ತದೆ. ಯಾವ ಕಾರಣಕ್ಕೂ ನೋವಾಗದಂತೆ ನೋಡಿಕೊಳ್ಳುತ್ತದೆ.
ಪ್ರತಿಯೊಂದು ಮನೆ, ಅಂಗಡಿ ಮುಂದೆ ಹೋಗುತ್ತದೆ. ಮಾತನಾಡಿಸಿ ಮುಂದೆ ಹೋಗುತ್ತದೆ. ಈ ರೀತಿ ಎಲ್ಲರ ಜತೆಗೆ ಬೆರೆಯುವ, ಮೆರೆಯುವ ಈ ಮಂಗನಿಗೆ ಗ್ರಾಮಸ್ಥರು ಹನುಮ ಎಂದು ಹೆಸರಿಟ್ಟಿದ್ದಾರೆ. ಮನುಷ್ಯ-ಪ್ರಾಣಿಗಳ ಸಂಘರ್ಷದ ನಡುವೆ ಇಲ್ಲೊಂದು ಪ್ರೀತಿ ಹಂಚುವ ಘಟನೆ ಎಲ್ಲರ ಕುತೂಹಲ ಕೆರಳಿಸಿದೆ.
ಮನುಷ್ಯ ಮತ್ತು ಕೋತಿಯ ಪ್ರೀತಿ ಬಾಂಧವ್ಯ ಇಡೀ ಊರಿಗೇ ಒಂದು ರೀತಿಯಲ್ಲಿ ಹೆಮ್ಮೆ ತಂದಿದೆ. ಅವರೆಲ್ಲರೂ ಈ ಕೋತಿ ನಮ್ಮ ಊರಿದ್ದು ಎಂದು ಹೆಮ್ಮೆಯಿಂದ ಹೇಳುತ್ತಾರೆ. ಅದನ್ನು ಚೆನ್ನಾಗಿ ಸಾಕಬೇಕು ಎನ್ನುತ್ತಾರೆ.
ಇದನ್ನೂ ಓದಿ : Death of a monkey | ಪ್ರೀತಿಯಿಂದ ಸಾಕಿದ ಕೋತಿಯ ಸಾವಿಗೆ ಮನೆ ಮಾತ್ರವಲ್ಲ ಇಡೀ ಗ್ರಾಮವೇ ಕಣ್ಣೀರು ಹಾಕಿತು!