Site icon Vistara News

Video: ಸತ್ತು ಹೋದ ಮರಿಯನ್ನು ಎಚ್ಚರಗೊಳಿಸಲು ಅಮ್ಮ ಆನೆಯ ಹರಸಾಹಸ; ಮನ ಮಿಡಿಯುವ ದೃಶ್ಯ

Mother Elephant Tries To Revive Dead Calf

#image_title

ಅಮ್ಮನ ಜೀವ ಅದರ ಮಕ್ಕಳಲ್ಲೇ ಇರುತ್ತದೆ. ಮಾತೃ ಹೃದಯವೆಂದರೆ ಅದು ಬಹುಶಃ ಮನುಷ್ಯರಿಗೆ ಮಾತ್ರ ಇರುವಂಥದ್ದಲ್ಲ. ಪ್ರಾಣಿಗಳಿಗೂ ತಮ್ಮ ಮಕ್ಕಳ ಬಗ್ಗೆ ಪ್ರೀತಿ, ಮಮಕಾರ, ವಾತ್ಸಲ್ಯ ಇದ್ದೇ ಇರುತ್ತದೆ. ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಆನೆಯ ವಿಡಿಯೊ ನೋಡಿದರೆ, ಪ್ರಾಣಿಗಳು ತಮ್ಮ ಮರಿ/ಕರುಗಳಿಗಾಗಿ ಹೇಗೆಲ್ಲ ಮಿಡಿಯುತ್ತವೆ ಎಂಬುದು ಗೊತ್ತಾಗುತ್ತದೆ.

ಈ ವಿಡಿಯೊ ಅಸ್ಸಾಂನ ಕಾಡೊಂದರಲ್ಲಿ ಚಿತ್ರೀಕರಣವಾಗಿದ್ದು. ಸಣ್ಣದಾದ ತೊರೆ ಹರಿಯುತ್ತಿದೆ. ಅಲ್ಲಿ ಎರಡು ಆನೆಗಳು ಇದ್ದಾವೆ. ಹಾಗೆ ಪುಟ್ಟ ಮರಿ ಆನೆಯೊಂದು ಶವವಾಗಿ ಬಿದ್ದಿದೆ. ಅದನ್ನು ಎಬ್ಬಿಸಲು ಅಮ್ಮ ಆನೆ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದೆ. ಮುದ್ದಾದ ಆನೆ ಮರಿ ಜೀವವಿಲ್ಲದೆ ಬಿದ್ದಿರುವುದು, ಅದನ್ನು ಹೇಗಾದರೂ ಎಚ್ಚರ ಗೊಳಿಸಲು ಅಮ್ಮ ಆನೆ ಕಣ್ತುಂಬಿಕೊಂಡು ಪ್ರಯತ್ನ ಮಾಡುತ್ತಿರುವುದನ್ನು ನೋಡಿ ಅನೇಕ ನೆಟ್ಟಿಗರು ಕಂಬನಿಮಿಡಿದಿದ್ದಾರೆ. ಆನೆ ಮರಿ ನೀರಿನಲ್ಲಿಯೇ ಬಿದ್ದಿದೆ. ಆದರೂ ಅದರ ಅಮ್ಮ ತನ್ನ ಸೊಂಡಿಲಲ್ಲಿ ಸ್ವಲ್ಪ ನೀರನ್ನು ತೆಗೆದು, ಅದರ ಮೈಮೇಲೆ ಸಿಂಪಡಿಸುತ್ತದೆ. ಎಚ್ಚರ ತಪ್ಪಿ ಬಿದ್ದಿದ್ದರೆ ಅದು ಏಳಲಿ ಎಂಬ ಆಸೆ, ಆ ತಾಯಿ ಜೀವಕ್ಕೆ.
ಈ ವಿಡಿಯೊವನ್ನು ಭಾರತದ ಅರಣ್ಯಾಧಿಕಾರಿ ಸುಸಾಂತಾ ನಂದಾ ಅವರು ಶೇರ್ ಮಾಡಿಕೊಂಡಿದ್ದಾರೆ.

ಆನೆ ಮರಿ ಸತ್ತು ಒಂದು ದಿನವೇ ಕಳೆದಿದ್ದರೂ, ಅದು ಬದುಕಿ ಬರಲೆಂಬ ಆಸೆ ಅಮ್ಮ ಆನೆಗೆ ತೀರುತ್ತಿಲ್ಲ. ಅದರ ಮೃತದೇಹವನ್ನು ಬಿಟ್ಟು ಕದಲುತ್ತಿಲ್ಲ. ಆನೆ ಮರಿ ಮೃತಪಟ್ಟಿದ್ದು ಬೇರೆ ಜಾಗದಲ್ಲಿ. ಅದನ್ನು ಅಮ್ಮ ಆನೆ ಎರಡು ಕಿಮೀ ದೂರ ತೆಗೆದುಕೊಂಡು ಬಂದು ಈ ತೊರೆಯ ಬಳಿ ಹಾಕಿಕೊಂಡಿದೆ. ಅದನ್ನು ಎಚ್ಚರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಸುಸಾಂತಾ ನಂದಾ ತಿಳಿಸಿದ್ದಾರೆ. ‘ಈ ದೃಶ್ಯ ನನ್ನ ಹೃದಯವನ್ನೇ ಮರುಗಿಸಿತು. ಮರಿ ಮೃತಪಟ್ಟಿದೆ, ಆದರೆ ಅಮ್ಮ ಅದನ್ನು ಬಿಟ್ಟು ಹೋಗುತ್ತಿಲ್ಲ’ ಎಂದಿದ್ದಾರೆ. ವಿಡಿಯೊ ನೋಡಿದ ನೆಟ್ಟಿಗರು ಕೂಡ ಬೇಸರ ವ್ಯಕ್ತಪಡಿಸಿ ಕಮೆಂಟ್ ಮಾಡುತ್ತಿದ್ದಾರೆ.

ಆಂಧ್ರಪ್ರದೇಶದಲ್ಲಿ 3 ಆನೆಗಳ ಸಾವು
ಆಂಧ್ರಪ್ರದೇಶದ ಚಿತ್ತೂರ್​ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಟ್ರಕ್​ ಡಿಕ್ಕಿಯಾಗಿ ಮೂರು ಆನೆಗಳು ಮೃತಪಟ್ಟಿವೆ. ಚಿತ್ತೂರ್​-ಪಾಲಾಮನೇರು ರಾಷ್ಟ್ರೀಯ ಹೆದ್ದಾರಿಯಲ್ಲಿ, ಜಗಮರ್ಲಾ ಎಂಬಲ್ಲಿ ಆನೆಗಳು ರಸ್ತೆ ದಾಟುತ್ತಿದ್ದವು. ಇದೇ ವೇಳೆ ಜೋರಾಗಿ ಬಂದ ಲಾರಿ ಆನೆಗಳಿಗೆ ಡಿಕ್ಕಿ ಹೊಡೆದಿದೆ. ಕೂಡಲೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಲಾರಿ ಚಾಲಕನ ಅಜಾಗರೂಕತೆಯ ಡ್ರೈವಿಂಗ್​​ನಿಂದಾಗಿ ಮೂಕಪ್ರಾಣಿಗಳ ಜೀವ ಹೋಗಿದೆ. ನಾವು ಕೇಸ್​ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version