ಮಹಿಳೆಯರು ಜೀವನದಲ್ಲಿ ‘ಅಮ್ಮ’ ಎಂಬ ಪಟ್ಟಕ್ಕೆ ಏರಿದ ಮೇಲೆ, ಅದಕ್ಕಿಂತಲೂ ಮಿಗಿಲಾಗಿ ಇನ್ನೇನೂ ಇಲ್ಲ ಎಂದೇ ಭಾವಿಸುತ್ತಾರೆ. ಅದು ಸಹಜವಾದ ಭಾವನೆ ಕೂಡ. 9 ತಿಂಗಳು ಹೊಟ್ಟೆಯಲ್ಲಿ ಹೊತ್ತು-ಹೆತ್ತ ಅಮ್ಮನಿಗೆ ತನ್ನ ಮಗುವಿನೊಂದಿಗೆ ಹೊಸ ಲೋಕವೇ ಸೃಷ್ಟಿಯಾಗಿರುತ್ತದೆ. ನಮ್ಮಲ್ಲಿ ಹೊರಗೆ ದುಡಿಯುವ ಅನೇಕ ಮಹಿಳೆಯರು ಮಗು ಹುಟ್ಟಿ, ಅದನ್ನು ಬಿಟ್ಟು ಕೆಲಸಕ್ಕೆ ಹೋಗುವಾಗಲೇ ಇನ್ನಿಲ್ಲದ ಸಂಕಟಪಡುತ್ತಿರುತ್ತಾರೆ. ಅಂಥದ್ದರಲ್ಲಿ ಇಲ್ಲೊಬ್ಬರು ಯೋಧೆ 10 ತಿಂಗಳ ಹಸುಗೂಸನ್ನು ಬಿಟ್ಟು, ದೇಶ ಕಾಯಲು ಹೋಗಿದ್ದಾರೆ. ತಮಗೆ ತಮ್ಮ ಕರುಳಕುಡಿಗಿಂತಲೂ, ಭಾರತಾಂಬೆಯೇ ಮುಖ್ಯ ಎಂಬುದನ್ನು ತೋರಿಸಿದ್ದಾರೆ. ಪುಟ್ಟ ಮಗು, ಪತಿ, ಕುಟುಂಬದವರನ್ನು ಬಿಟ್ಟು ಹೋಗುವಾಗ ಆಕೆ ಅಳುತ್ತ, ಕಣ್ಣೀರು ಸುರಿಸುತ್ತ..ರೈಲು ಹತ್ತುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ವೈರಲ್ ಆಗುತ್ತಿದೆ. ಆ ಅಮ್ಮಂಗೆ ನೆಟ್ಟಿಗರು ಸೆಲ್ಯೂಟ್ ಹೊಡೆಯುತ್ತಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ನಂದಗಾಂವ್ನ ವರ್ಷಾರಾಣಿ ಪಾಟೀಲ್ ಅವರು ಭಾರತೀಯ ಸೇನೆಯ ಗಡಿ ಭದ್ರತಾ ಪಡೆಯಲ್ಲಿ (BSF) ಕೆಲಸ ಮಾಡುತ್ತಿದ್ದಾರೆ. ಅವರು ರಜೆಗೆ ಬಂದಿದ್ದರೋ ಅಥವಾ ಹೆರಿಗೆ, ತಾಯ್ತನದ ರಜೆ ಮುಗಿಸಿ ವಾಪಸ್ ಹೋಗುತ್ತಿದ್ದಾರೋ ಸ್ಪಷ್ಟವಾಗಿಲ್ಲ. ಆದರೆ ಪುಟ್ಟ ಮಗು, ಪತಿ-ಇಡೀ ಕುಟುಂಬಕ್ಕಿಂತಲೂ ಭಾರತ ಮಾತೆಯ ಸೇವೆಯೇ ಮುಖ್ಯ ಎಂದು ಹೊರಟ ಹೊತ್ತಲ್ಲಿ, ಅಲ್ಲಿ ನಮ್ಮ ಕಣ್ಣಲ್ಲೂ ನೀರು ಉಕ್ಕಿಸುವ ಭಾವನಾತ್ಮಕ ಸನ್ನಿವೇಶ ಸೃಷ್ಟಿಯಾಗಿತ್ತು.
ವರ್ಷಾರಾಣಿಯ ಪತಿ, ತಾಯಿ-ತಂದೆ, ಗಂಡನಮನೆಯವರೆಲ್ಲ ಆಕೆಯನ್ನು ಬೀಳ್ಕೊಡಲು ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ರೈಲೂ ಬಂದು ನಿಂತಿದೆ. ಆದರೆ ವರ್ಷಾರಾಣಿ ತನ್ನ ಮಗುವನ್ನು ಎತ್ತಿ ಮುದ್ದಾಡಿ, ಪತಿಯನ್ನು, ತಾಯಿ-ತಂದೆಯನ್ನು ಅಪ್ಪಿಕೊಂಡು ಅಳುತ್ತಿದ್ದಾರೆ. ಆದರೆ ದೇಶಸೇವೆಗೆ ಹೋಗಲೇಬೇಕು ಎಂಬ ತುಡಿತವೂ ಅವರಲ್ಲಿದೆ. ಆಕೆಯ ಕಣ್ಣೀರನ್ನು ಪತಿ ಒರೆಸುತ್ತಾರೆ. ಬಳಿಕ ರೈಲು ಹತ್ತಿ, ಅದರ ಬಾಗಿಲಲ್ಲಿ ನಿಂತು ಅಳುತ್ತಲೇ ಕುಟುಂಬದವರತ್ತ ಕೈ ಬೀಸುತ್ತಾರೆ. ಆಕೆಯ ಮುಖದಲ್ಲಿ ಒಂದು ದಯನೀಯ ಭಾವನೆಯಿದೆ. ರೈಲು ಮುಂದೆ ಸಾಗುತ್ತಿದ್ದಂತೆ, ವರ್ಷಾರಾಣಿಯೂ ಕೈ ಬೀಸುತ್ತ ಹೋಗುತ್ತಾರೆ. ವಿಡಿಯೊ ಮಾತ್ರ ಸಿಕ್ಕಾಪಟೆ ವೈರಲ್ ಆಗುತ್ತಿದ್ದು, ನೆಟ್ಟಿಗರೂ ಕಂಬನಿ ಮಿಡಿದಿದ್ದಾರೆ. ಇಲ್ಲಿದೆ ನೋಡಿ, ಇಂಟರ್ನೆಟ್ನಲ್ಲಿ ಸೆನ್ಸೇಶನ್ ಸೃಷ್ಟಿಸಿರುವ ಭಾವನಾತ್ಮಕ ವಿಡಿಯೊ..