ಮುಂಬಯಿ: ಬಿಲಿಯನೇರ್ (Billionaire) ಮುಕೇಶ್ ಅಂಬಾನಿ (Mukesh Ambani) ಅವರ ಪತ್ನಿ ನೀತಾ ಅಂಬಾನಿ (Nita Ambani) ಇತ್ತೀಚೆಗೆ ʼವಿಶ್ವ ಸುಂದರಿʼ (Miss World) ಸ್ಪರ್ಧೆಯ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರು ಧರಿಸಿದ್ದ ತೋಳುಬಂದಿ (ಭುಜದಲ್ಲಿ ಧರಿಸುವ ಆಭರಣ) ಎಲ್ಲರ ಕಣ್ಣು ಕುಕ್ಕಿತ್ತು. ಇದನ್ನು ಎಲ್ಲಾದರೂ ಮೊಗಲ್ ದೊರೆ ಶಹಜಹಾನ್ (Mughal Emporer Shahjahan) ನೋಡಿದ್ದರೆ ʼವಾಹ್, ತಾಜ್!ʼ ಎಂದು ಉದ್ಗರಿಸುತ್ತಿದ್ದನೋ ಏನೋ!
ಹೀಗೆ ಹೇಳಲೂ ಕಾರಣವಿದೆ, ನೀತಾ ಅಂಬಾನಿ ಧರಿಸಿದ್ದ ವಜ್ರದ ಈ ಭುಜಬಂದಿ ಮೊಗಲ್ ದೊರೆ ಶಹಜಹಾನನಿಗೇ ಸೇರಿದ್ದು. ಇದನ್ನು ಆತನ ಪತ್ನಿ ಮುಮ್ತಾಜ್ ಧರಿಸುತ್ತಿದ್ದಳು ಎಂದೂ ದಂತಕತೆಯಿದೆ. ಇದು ಮೌಲ್ಯ , ಉಸಿರು ಬಿಗಿಹಿಡಿಯಿರಿ, 200 ಕೋಟಿ ರೂ.!
ಅಂಬಾನಿಗಳ ವಿಷಯಕ್ಕೆ ಬಂದರೆ ಐಷಾರಾಮಿ ಎಂಬ ಪದಕ್ಕೇ ಅರ್ಥವಿಲ್ಲ. ಶ್ರೀಸಾಮಾನ್ಯನಿಗೆ ಯಾವುದು ಐಷಾರಾಮಿಯೋ ಅಂಬಾನಿ ಫ್ಯಾಮಿಲಿಗೆ ಅದು ಕಡಲೆಬೀಜ ಅಷ್ಟೆ. ಮೊನ್ನೆ ಅನಂತ್ ಅಂಬಾನಿ ವಿವಾಹಪೂರ್ವ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ತಮ್ಮ ಎಲ್ಲ ಆಭರಣ ಧರಿಸಿ ಖಾಲಿ ಮಾಡಿದ್ದಾರೆ ಎಂದು ನೀವು ಭಾವಿಸಿದ್ದರೆ ತಪ್ಪು. ಅವರ ಬಳಿ ಇನ್ನೂ ಸಾಕಷ್ಟು ಸ್ಟಾಕ್ ಇದೆ.
ನೀತಾ ಅಂಬಾನಿ ಇತ್ತೀಚೆಗೆ ವಿಶ್ವ ಸುಂದರಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಆಕೆಗೆ ʻಬ್ಯೂಟಿ ವಿತ್ ಪರ್ಪಸ್ ಹ್ಯುಮಾನಿಟೇರಿಯನ್’ ಎಂಬ ಪ್ರಶಸ್ತಿಯನ್ನು ಸಹ ನೀಡಲಾಯಿತು. ಅವರ ಯಾವ ಪರೋಪಕಾರಿ ಕಾರ್ಯಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ ಅಂತ ಕೇಳಬೇಡಿ ಮತ್ತೆ. ಅಂತೂ ಪ್ರಶಸ್ತಿ ಕೊಡಲಾಗಿದೆ.
ನೀತಾ ಅಂಬಾನಿ ʼಮಿಸ್ ವರ್ಲ್ಡ್ʼ ಈವೆಂಟ್‌ನಲ್ಲಿ ಸ್ವದೇಶದ ಬನಾರಸಿ ಸೀರೆಯಲ್ಲಿ ಮತ್ತು ಮೊಘಲ್-ಯುಗದ ಸ್ಪೈನಲ್ ಟರ್ಬನ್ ಆಭರಣ ಲಕಲಕಿಸುವ ಬಾಜುಬಂಧ್ ಧರಿಸಿ ಮಿಂಚಿದರು. ಇದಕ್ಕಾಗಿ ನೀತಾ ಅವರು ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಅವರು ವಿನ್ಯಾಸಗೊಳಿಸಿದ ಸ್ವದೇಶ್ ಬನಾರಸಿ ಜಂಗ್ಲಾ ಸೀರೆ ಧರಿಸಿದ್ದರು. ಆದರೆ ಎಲ್ಲರ ಗಮನ ಸೆಳೆದದ್ದು ಬಾಹುಬಂದಿ.
ಇದು ಮೊಘಲ್ ಚಕ್ರವರ್ತಿ ಶಹಜಹಾನ್‌ಗೆ ಸೇರಿದ, ಮಾಣಿಕ್ಯ ಮತ್ತು ವಜ್ರಗಳನ್ನು ಸ್ಟಡ್ ಮಾಡಲಾದ ಸರ್ಪೆಚ್. ಇದೊಂದು ಅಸಾಮಾನ್ಯ ಬಾಜುಬಂಧ್. ವರದಿಗಳ ಪ್ರಕಾರ ಇದನ್ನು ಕೊನೆಯದಾಗಿ ಸಾರ್ವಜನಿಕವಾಗಿ ಎಲ್ಲರೂ ನೋಡಿದ್ದು 2019ರಲ್ಲಿ. ಅಂತಾರಾಷ್ಟ್ರೀಯ ಹರಾಜು ಕಟ್ಟೆ ಕ್ರಿಸ್ಟೀಸ್, ʼಜ್ಯುವೆಲ್ಸ್ ಅಲ್ ಥಾನಿ ಕಲೆಕ್ಷನ್ ಫ್ರಂ ದಿ ಗ್ರೇಟ್ ಮೊಘಲ್ ಟು ಮಹಾರಾಜಾಸ್ʼ ಹರಾಜು ಏರ್ಪಡಿಸಿದಾಗ. ಅಲ್ಲಿಂದ ಬಹುಶಃ ಮುಕೇಶ್ ಅಂಬಾನಿ ಇದನ್ನು ಖರೀದಿಸಿರಬಹುದು. ಅದರ ಬಗ್ಗೆ ಮಾಹಿತಿ ಇಲ್ಲ.
ಇದು 13.7 ಸೆಂಮೀ ಉದ್ದ ಮತ್ತು 19.8 ಸೆಂಮೀ ಅಗಲದ್ದು. ಇದೊಂದು ಇತಿಹಾಸದ ತುಣುಕು. ಚಿನ್ನದಿಂದ ಮಾಡಲ್ಪಟ್ಟಿದೆ. ವಜ್ರಗಳು, ಮಾಣಿಕ್ಯಗಳನ್ನು ಕೂರಿಸಲಾಗಿದೆ. 12 ವಜ್ರಗಳನ್ನು ಇದರಲ್ಲಿ ಹೊಂದಿಸಲಾಗಿದೆ. 200 ಕೋಟಿ ರೂಪಾಯಿ ಬೆಲೆ ಸುಮ್ಮನೇ ಅಲ್ಲ.
ಇದನ್ನೂ ಓದಿ: Nita Ambani: ವಿಶೇಷ ಪ್ರಶಸ್ತಿ ಸ್ವೀಕರಿಸಿ ಸತ್ಯಂ ಶಿವಂ ಸುಂದರಂ ಎಂದ ನೀತಾ ಅಂಬಾನಿ!