ಮದುವೆ ಎನ್ನುವುದು ಜೀವನದ ಒಂದು ಸುಂದರ ಹಂತ. ಆದರೆ ಕೆಲವರು ಅದೇ ವಿಷಯದಲ್ಲಿ ಕಷ್ಟವನ್ನು ಮೈಮೇಲೆ ಎಳೆದುಕೊಂಡುಬಿಡುತ್ತಾರೆ. ಇಲ್ನೋಡಿ, ನೊಯ್ಡಾದ 28ವರ್ಷದ ಇಂಜಿನಿಯರ್ವೊಬ್ಬ ಒಂದು ಸಾಲದ್ದಕ್ಕೆ, ಮತ್ತೊಂದು ಮದುವೆಯಾಗಿ ಪೇಚಾಟಕ್ಕೆ ಸಿಲುಕಿ, ಅಂತೂ ಕೊನೆಗೊಂದು ದಾರಿ ಕಂಡುಕೊಂಡು ಪಾರಾಗಿದ್ದಾರೆ. ಇಬ್ಬರು ಹೆಂಡತಿಯರು ಮತ್ತು ಪತಿಯ ಮಧ್ಯೆ ಒಂದು ವಿಚಿತ್ರ ಒಪ್ಪಂದವಾಗಿ, ಇವರ ವೈವಾಹಿಕ ಜೀವನ ಸುಖಾಂತ್ಯ ಕಂಡಿದೆ. ಒಪ್ಪಂದದ ಅನ್ವಯ ಈ ಇಂಜಿನಿಯರ್ ವಾರದ ಮೊದಲ ಮೂರು ದಿನ ಒಬ್ಬಳು ಹೆಂಡತಿಯೊಂದಿಗೆ, ಮತ್ತೆ ಮೂರು ದಿನ ಇನ್ನೊಬ್ಬಳು ಪತ್ನಿಯೊಂದಿಗೆ ಕಾಲ ಕಳೆಯಬೇಕು. ಭಾನುವಾರ ಅವನ ‘ಪತಿ’ ಜವಾಬ್ದಾರಿಗೆ ರಜೆ..!
ಎಂಥಾ ಕತೆಯಿದು?
ನೊಯ್ಡಾ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಈತ. ಗುರುಗ್ರಾಮದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. 2018ರ ಮೇ ತಿಂಗಳಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ನ ಯುವತಿಯನ್ನು ಮದುವೆಯಾದ. 2020ರಲ್ಲಿ ಆಕೆ ಗರ್ಭಿಣಿಯಾದರು. ಅಷ್ಟೇ ಹೊತ್ತಿಗೆ ಕೊರೊನಾ ಸೋಂಕು ಬಂತು. ಆಕೆ ಗರ್ಭಿಣಿಯಾಗಿದ್ದರಿಂದ, ತುಂಬ ಎಚ್ಚರಿಕೆಯಿಂದ ಇರಬೇಕು ಎಂಬ ಕಾರಣಕ್ಕೆ ಸಾಫ್ಟವೇರ್ ಇಂಜಿಯರ್ ತನ್ನ ಪತ್ನಿಯನ್ನು ಗ್ವಾಲಿಯರ್ನಲ್ಲಿರುವ ತವರು ಮನೆಯಲ್ಲಿ ಬಿಟ್ಟ. ಲಾಕ್ಡೌನ್ ಆದ ಮೇಲಂತೂ ಪ್ರಯಾಣವೆಲ್ಲ ನಿರ್ಬಂಧಗೊಂಡಿತು. ಹೀಗಾಗಿ ಆಕೆ ತವರು ಮನೆಯಲ್ಲೇ ಇರುವಂತಾಯಿತು. ಗಂಡುಮಗುವಿಗೆ ಜನ್ಮವನ್ನೂ ಕೊಟ್ಟಳು. ಇನ್ನು ತಾನು ಗುರುಗ್ರಾಮದಲ್ಲೇ ಉಳಿದು, ತನ್ನ ಕೆಲಸ ಮುಂದುವರಿಸಿದ್ದ ಈತ ಒಮ್ಮೆಯೂ ಗ್ವಾಲಿಯರ್ಗೆ ಹೋಗಿರಲಿಲ್ಲ. ಅದಾಗಲೇ ಅವನಿಗೆ ತನ್ನ ಕಂಪನಿಯಲ್ಲೇ ಕೆಲಸ ಮಾಡುವ ಸಹೋದ್ಯೋಗಿಯೊಬ್ಬಳೊಂದಿಗೆ ಪ್ರೀತಿ ಬೆಳೆದಿತ್ತು. ಅವಳನ್ನು ಮದುವೆಯನ್ನೂ ಮಾಡಿಕೊಂಡ. 2021ರ ಜುಲೈನಲ್ಲಿ ಆ ಯುವತಿ (ಎರಡನೇ ಪತ್ನಿ) ಹೆಣ್ಣುಮಗುವಿಗೆ ಜನ್ಮ ನೀಡಿದಳು. ಅಲ್ಲಿಗೆ ಆತ ಎರಡನೇ ಬಾರಿಗೆ ಅಪ್ಪನಾದ. ಇತ್ತ ಮೊದಲ ಪತ್ನಿ, ಒಮ್ಮೆಯೂ ತನ್ನ ಗಂಡ ಗ್ವಾಲಿಯರ್ಗೆ ಬರಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡಿದ್ದಳು. ವಾಪಸ್ ಬರುವಂತೆ ಕೇಳುತ್ತಿದ್ದಳು. ಆದರೆ ಅವನು ಮಾತ್ರ ಆಕೆಗೆ ಒಂದಲ್ಲ ಒಂದು ನೆಪ ಹೇಳುತ್ತಲೇ ಇದ್ದ. ಅಲ್ಲಿಗೆ ಹೋಗುತ್ತಿರಲಿಲ್ಲ.
2022ನೇ ಇಸ್ವಿಯೆಲ್ಲ ಹೀಗೇ ಕಳೆದು ಹೋಯಿತು. ಆದರೆ 2023ರ ಜನವರಿಯಲ್ಲಿ ಇಂಜಿನಿಯರ್ನ ಮೊದಲ ಪತ್ನಿ, ಏನಾದರೂ ಆಗಲಿ ಎಂದು ತನ್ನ ಪತಿ ಇದ್ದಲ್ಲಿಗೆ ಅಂದರೆ ನೊಯ್ಡಾಕ್ಕೆ ಆಗಮಿಸಿದಳು. ಆದರೆ ಆಕೆಗೆ ದಿಗಿಲು ಕಾದಿತ್ತು. ಪತಿ ಇನ್ನೊಬ್ಬ ಮಹಿಳೆಯೊಟ್ಟಿಗೆ ವಾಸಿಸುತ್ತಿದ್ದ. ಒಂದು ಮಗುವೂ ಕಣ್ಣೆದುರು ಇತ್ತು. ಅದನ್ನು ನೋಡಿ ಕೆಂಡಾಮಂಡಲಳಾದ ಮೊದಲ ಪತ್ನಿ, ಪತಿಯೊಂದಿಗೆ ವಾಗ್ವಾದಕ್ಕೆ ಇಳಿದಳು. ಇಬ್ಬರ ನಡುವೆಯೂ ದೊಡ್ಡಮಟ್ಟದ ಜಗಳವೇ ನಡೆಯಿತು. ಆಕೆ ಕೂಡಲೇ ಸ್ಥಳೀಯ ಠಾಣೆಗೆ ಹೋಗಿ ದೂರು ದಾಖಲಿಸಿದಳು. ಆದರೆ ಎಫ್ಐಆರ್ ದಾಖಲಾಗಲಿಲ್ಲ. ಅದೇ ಜನವರಿ ತಿಂಗಳಲ್ಲೇ ಮೊದಲ ಪತ್ನಿ ಗ್ವಾಲಿಯರ್ನಲ್ಲಿರುವ ಒಂದು ಕೌಟುಂಬಿಕ ಕೋರ್ಟ್ನಲ್ಲಿ ಪತಿ ವಿರುದ್ಧ ದೂರು ದಾಖಲಿಸಿ, ಜೀವನಾಂಶಕ್ಕೆ ಬೇಡಿಕೆ ಇಟ್ಟಳು. ಕೋರ್ಟ್ ತನ್ನ ನಿಯಮದಂತೆ ದಂಪತಿಗೆ ಕೌನ್ಸಿಲಿಂಗ್ನ್ನು ಶಿಫಾರಸು ಮಾಡಿತು ಮತ್ತು ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವುದಕ್ಕೂ ಮೊದಲು, ದಂಪತಿ ಮಧ್ಯೆ ರಾಜಿ ಮಾಡಿಸಲು ಯತ್ನಿಸುವಂತೆ ವಕೀಲ/ಕೌನ್ಸಿಲರ್ ಹರೀಶ್ ಧವನ್ ಎಂಬುವರಿಗೆ ಸೂಚಿಸಿತು.
ಕೌನ್ಸಿಲರ್ ಕೊಟ್ಟ ಸಲಹೆ ಏನು?
ದಂಪತಿಯ ಕೇಸ್ ತಮ್ಮ ಬಳಿ ಬರುತ್ತಿದ್ದಂತೆ ಹರೀಶ್ ದೇವನ್ ಅವರು ಮೊದಲಿಗೆ ಸಮಸ್ಯೆಯ ಸ್ವರೂಪವನ್ನು ತಿಳಿದುಕೊಂಡರು. ಈ ಬಗ್ಗೆ ಅವರೇ ಹೇಳಿಕೆ ನೀಡಿದ್ದಾರೆ. ‘ಇಬ್ಬರು ಪತ್ನಿಯರು ಮತ್ತು ಪತಿಯನ್ನು ಕೂರಿಸಿಕೊಂಡು ವಿಚಾರಿಸಿದೆ. ಮೊದಲ ಪತ್ನಿಗೆ ತನ್ನ ಪತಿ ಜೈಲಿಗೆ ಹೋಗುವುದು ಬೇಕಾಗಿರಲಿಲ್ಲ. ತನ್ನ ಮಗನಿಗೆ ಜೀವನಾಂಶ ಬೇಕು ಎಂಬುದೇ ಆಕೆಯ ಪ್ರಮುಖ ಬೇಡಿಕೆಯಾಗಿತ್ತು. ಇನ್ನು ಎರಡನೇ ಪತ್ನಿಯಂತೂ, ತಾನು ತನ್ನ ಅಕ್ಕನ ಜತೆ ಅಂದರೆ, ಪತಿಯ ಮೊದಲ ಹೆಂಡತಿಯೊಂದಿಗೆ ಬದುಕಲು ಸಿದ್ಧಳಿದ್ದೇನೆ ಎಂದು ಹೇಳಿದಳು. ಆದರೆ ಆ ಪತಿಗೆ ತನ್ನ ಮೊದಲ ಪತ್ನಿಯೊಂದಿಗೆ ಜೀವಿಸಲು ಇಷ್ಟವೇ ಇರಲಿಲ್ಲ.
ಭಾರತದಲ್ಲಿ ಕಾನೂನು ಪ್ರಕಾರ, ಮೊದಲ ಪತ್ನಿಯೊಂದಿಗೆ ಡಿವೋರ್ಸ್ ಆಗದೆ, ಎರಡನೇ ಮದುವೆಯಾಗುವುದು ಊರ್ಜಿತವಲ್ಲ. ಆದರೆ ತುಂಬ ಕೇಸ್ಗಳಲ್ಲಿ ಇದಾಗುತ್ತಿದೆ. ಹೀಗಾದಾಗ ಪರಸ್ಪರ ಅರ್ಥ ಮಾಡಿಕೊಂಡು ಅನ್ಯೋನ್ಯತೆಯಿಂದ ಬದುಕಲು ಒಂದು ಅವಕಾಶವಿದೆಯಷ್ಟೇ. ಅದಾಗದೆ ಇದ್ದಾಗ ಕಾನೂನು ಕ್ರಮ ಅನಿವಾರ್ಯ ಎಂದು ಹೇಳಿರುವ ಹರೀಶ್ ದೇವನ್ ತಾವು ಈ ಕೇಸ್ ಬಗೆಹರಿಸಿದ ರೀತಿಯನ್ನು ಹೇಳಿಕೊಂಡಿದ್ದಾರೆ.
‘ಮೊದಲ ಪತ್ನಿ ಬೇಡ ಎಂದು ಹೇಳಿದ ಇಂಜಿನಿಯರ್ಗೆ ನಾನು ಮೊದಲು ದ್ವಿಪತ್ನಿತ್ವ ಕಾನೂನು ಪ್ರಕಾರ ಹೇಗೆ ತಪ್ಪು ಎಂಬುದನ್ನು ವಿವರಿಸಿದೆ. ಅವರು ಮೂರು ಜನ ಕುಳಿತು, ಸಮಸ್ಯೆ ಇತ್ಯರ್ಥ ಮಾಡಿಕೊಂಡು ಬದುಕುವ ಅನಿವಾರ್ಯತೆಯನ್ನೂ ಹೇಳಿದೆ. ಆಗ ಒಂದು ಒಪ್ಪಂದಕ್ಕೆ ಬರಲು ಆತ ಒಪ್ಪಿದ ಎಂದು ಹೇಳಿದ್ದಾರೆ.
ಇದನ್ನೂ ಓದಿ: Swara Bhaskar: ನಟಿ ಸ್ವರಾ ಭಾಸ್ಕರ್-ಫಹಾದ್ ಪುನರ್ ವಿವಾಹ; ಇನ್ವಿಟೇಶನ್ ಕಾರ್ಡ್ ವೈರಲ್!
ಏನಿದು ವಿಚಿತ್ರ ಒಪ್ಪಂದ?
ಈ ಸಾಫ್ಟ್ವೇರ್ ಇಂಜಿನಿಯರ್ಗೆ ತಿಂಗಳಿಗೆ 1.5ಲಕ್ಷ ರೂಪಾಯಿ ಸಂಬಳ ಬರುತ್ತದೆ. ಅದರಲ್ಲಿ ಸರಿಯಾಗಿ ಅರ್ಧರ್ಧ ಮಾಡಿ ಇಬ್ಬರೂ ಪತ್ನಿಯರಿಗೆ ಆತ ಕೊಡಬೇಕು. ಅವನಿಗೆ ಎರಡು ಫ್ಲ್ಯಾಟ್ಗಳಿದ್ದು, ಅದರಲ್ಲಿ ಒಂದನ್ನು ಮೊದಲ ಪತ್ನಿಗೆ, ಮತ್ತೊಂದನ್ನು ಎರಡನೇ ಪತ್ನಿಗೆ ನೀಡಬೇಕು. ಅದೆಲ್ಲಕ್ಕಿಂತ ಮುಖ್ಯವಾಗಿ ಅವನನ್ನೇ ಅವನು ಇಬ್ಬರು ಪತ್ನಿಯರಿಗೆ ಹಂಚಬೇಕು. ಅಂದರೆ ವಾರದಲ್ಲಿ ಸೋಮವಾರದಿಂದ ಬುಧವಾರದವರೆಗೆ ಮೊದಲ ಪತ್ನಿಯೊಂದಿಗೆ, ಗುರುವಾರದಿಂದ-ಶನಿವಾರದವರೆಗೆ ಎರಡನೇ ಪತ್ನಿಯೊಂದಿಗೆ ಕಾಲಕಳೆಯಬೇಕು. ಭಾನುವಾರ ಒಂದಿನ ಅವನು ಫ್ರೀ ಆಗಿ ಇರಬಹುದು. ಅಂದರೆ ಆತನ ಮನಸಿಗೆ ಬಂದಂತೆ ಮಾಡಬಹುದು. ಅವತ್ತು ಆತ ಇಬ್ಬರು ಹೆಂಡತಿಯರಲ್ಲಿ, ತನಗಿಷ್ಟ ಬಂದವರ ಜತೆ ಇರಬಹುದು ಎಂಬುದು ಒಪ್ಪಂದದ ಸಾರಾಂಶ. ಹಾಗೊಮ್ಮೆ, ಒಪ್ಪಂದವನ್ನು ಪತಿ ಮುರಿದಿದ್ದೇ ಆದಲ್ಲಿ, ಮೊದಲ ಪತ್ನಿ ಆತನ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದೂ ಅಗ್ರಿಮೆಂಟ್ನಲ್ಲಿ ಹೇಳಲಾಗಿದೆ. ಇಷ್ಟವೋ-ಕಷ್ಟವೋ ಒಪ್ಪಂದಕ್ಕೆ ಆತ ಅಸ್ತು ಅಂದಿದ್ದಾನೆ. ಇಬ್ಬರು ಪತ್ನಿಯರೂ ಒಕೆ ಅಂದಿದ್ದಾರೆ. ತಪ್ಪಿದರೆ ಇಂಜಿನಿಯರ್ಗೆ ಜೈಲು ಶಿಕ್ಷೆ ಗ್ಯಾರೆಂಟಿ..!