ಏನೇ ಆದರೂ ಪ್ರಯತ್ನ ಬಿಡಬಾರದು, ಒಂದಲ್ಲ ಒಂದು ದಿನ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದು ದೊಡ್ಡವರು ಒಂದು ಮಾತು ಹೇಳುತ್ತಾರೆ. ಆ ಮಾತು ಪಂಜಾಬ್ನ 88 ವರ್ಷದ ವೃದ್ಧನ ವಿಷಯದಲ್ಲಿ ಸತ್ಯವಾಗಿದೆ. ಕಳೆದ 35-40 ವರ್ಷಗಳಿಂದ ನಿರಂತರವಾಗಿ ಲಾಟರಿ ಟಿಕೆಟ್ ಖರೀದಿಸುತ್ತಿದ್ದ ಮಹಾಂತ ದ್ವಾರಕಾ ದಾಸ್ ಎಂಬುವರಿಗೆ ಈಗ 88ನೇ ವರ್ಷದಲ್ಲಿ ಅದೃಷ್ಟ ಮನೆಬಾಗಿಲಿಗೆ ಬಂದಿದೆ. ಲೊಹ್ರಿ ಮಕರ ಸಂಕ್ರಾಂತಿ ನಿಮಿತ್ತ ದ್ವಾರಕಾ ದಾಸ್ ಖರೀದಿಸಿದ್ದ ಲಾಟರಿಗೆ ಪ್ರಥಮ ಬಹುಮಾನ ಲಭಿಸಿದ್ದು, ಬರೋಬ್ಬರಿ 5 ಕೋಟಿ ರೂಪಾಯಿ ಹಣ ಬಂದಿದೆ.
ದ್ವಾರಕಾ ದಾಸ್ ಅವರು ಕುಟುಂಬ ಸಹಿತ, 1947ರಲ್ಲಿ ಪಾಕಿಸ್ತಾನದಿಂದ ವಲಸೆ ಬಂದು ಪಂಜಾಬ್ನಲ್ಲಿ ನೆಲೆಸಿದ್ದಾರೆ. ಕಳೆದ 35-40 ವರ್ಷಗಳಿಂದಲೂ ಅವರು ಲಾಟರಿ ಟಿಕೆಟ್ ಖರೀದಿ ಮಾಡುತ್ತಲೇ ಇದ್ದಿದ್ದರು. ಆದರೆ ಹಣವೇನೂ ಬಂದಿರಲಿಲ್ಲ. ಮರಳಿ ಪ್ರಯತ್ನ ಮಾಡುತ್ತಲೇ ಇದ್ದವರು ಈಗ ಇಳಿವಯಸ್ಸಿನಲ್ಲಿ ಕೋಟ್ಯಧಿಪತಿಯಾಗಿದ್ದಾರೆ. ನಾನು ಈ ಹಣವನ್ನು ನನ್ನಿಬ್ಬರು ಮಕ್ಕಳಿಗೆ ಕೊಡುತ್ತೇನೆ ಎಂದೂ ಅವರು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸ್ಥಳೀಯವಾಗಿ ಅವರೊಂದು ಡೇರಾ (ಸಾಮಾಜಿಕ-ಧಾರ್ಮಿಕ ಸಂಸ್ಥೆ)ವನ್ನು ನಡೆಸುತ್ತಿದ್ದು, ಅದಕ್ಕಾಗಿಯೂ ಹಣ ಬಳಸಿಕೊಳ್ಳುವುದಾಗಿ ತಿಳಿಸಿದ್ದಾರೆ.
ತಂದೆಗೆ 5 ಕೋಟಿ ರೂಪಾಯಿ ಹಣ ಬಂದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರ ಪುತ್ರ ನರೇಂದ್ರ ಕುಮಾರ್ ಶರ್ಮಾ ‘ಈ ಸಲ ನನ್ನ ತಂದೆ ಅವರಾಗಿಯೇ ಹೋಗಿ ಲಾಟರಿ ಟಿಕೆಟ್ ಖರೀದಿ ಮಾಡಿಲ್ಲ. ಬದಲಿಗೆ ಮೊಮ್ಮಗನಿಗೆ ದುಡ್ಡು ಕೊಟ್ಟು, ಟಿಕೆಟ್ ತರುವಂತೆ ಹೇಳಿದ್ದರು. ಫಲಿತಾಂಶ ಬಂದಾಗ ಅವರಿಗೆ ಮೊದಲ ಬಹುಮಾನ ಲಭಿಸಿತ್ತು. ನಮಗೆಲ್ಲರಿಗೂ ಇದು ತುಂಬ ಖುಷಿಯಾಗಿದೆ’ ಎಂದು ಹೇಳಿದ್ದಾರೆ.
ಮಹಾಂತ ದ್ವಾರಕಾ ದಾಸ್ ಅವರಿಗೆ 5 ಕೋಟಿ ರೂಪಾಯಿ ಲಾಟರಿ ಹಣ ಬಂದಿದ್ದರೂ, ಅವರೇನೂ ಸಂಪೂರ್ಣ ಹಣ ಪಡೆಯುವುದಿಲ್ಲ. ಶೇ.30ರಷ್ಟು ತೆರಿಗೆ ಹಣ ಕಡಿತಗೊಂಡು ಉಳಿದ ಹಣ ಅವರ ಕೈ ಸೇರುತ್ತದೆ. ಅದೇನೆ ಇದ್ದರೂ ಕೋಟಿಗೇನೂ ಮೋಸವಾಗುವುದಿಲ್ಲ. 88ನೇ ವರ್ಷದಲ್ಲಿ ಕೋಟ್ಯಧಿಪತಿಯಾದ ಈ ಅಜ್ಜನಿಗೀಗ ಶುಭಾಶಯಗಳ ಸುರಿಮಳೆಯೇ ಬರುತ್ತಿದೆ.
ಇದನ್ನೂ ಓದಿ: Viral Video: ಕಾಶ್ಮೀರದ ಚಳಿಗೆ ನಡುಗಿದ ರಾಹುಲ್ ಗಾಂಧಿ; ಕೊನೆಗೂ ಜಾಕೆಟ್ ಧರಿಸಿಯೇ ಪಾದಯಾತ್ರೆ ನಡೆಸಿದರು!