ಹೊಸದಿಲ್ಲಿ: ಮಾಜಿ ಕಾಂಗ್ರೆಸ್ ನಾಯಕ (Congress leader) ಬಾಬಾ ಸಿದ್ದಿಕ್ ಅವರ ಪುತ್ರ ಮತ್ತು ಇತ್ತೀಚೆಗೆ ಪಕ್ಷದ ಮುಂಬೈ ಘಟಕದ ಯುವ ಘಟಕದ ಅಧ್ಯಕ್ಷ (Mumbai Youth Congress president) ಸ್ಥಾನದಿಂದ ಪದಚ್ಯುತಗೊಂಡ ಜೀಶನ್ ಸಿದ್ದಿಕ್ (Zeeshan Siddique) ಅವರು ಪಕ್ಷದಲ್ಲಿ ತಾವು ಎದುರಿಸಿದ ವಿಚಿತ್ರ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಒಮ್ಮೆ ಅವರು ರಾಹುಲ್ ಗಾಂಧಿ (Rahul Gandhi) ಅವರನ್ನು ಭೇಟಿಯಾಗಲು ಬಯಸಿದಾಗ, ʼನಿನ್ನ ಮೈತೂಕ ಹತ್ತು ಕಿಲೋದಷ್ಟು ಇಳಿಸುʼ ಎಂಬ ಆದೇಶ ರಾಹುಲ್ ಆಪ್ತರಿಂದ ಬಂದಿತಂತೆ!
ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಕಾಂಗ್ರೆಸ್‌ನ ʼಭಾರತ್ ಜೋಡೋ ಯಾತ್ರೆ’ ನಡೆದಿದ್ದ ಸಂದರ್ಭದಲ್ಲಿ, ರಾಹುಲ್ ಅವರನ್ನು ಭೇಟಿಯಾಗುವ ಅವಕಾಶವನ್ನು ಸಿದ್ದಿಕ್ ಕೇಳಿಕೊಂಡಿದ್ದರು. ಆದರೆ ಅದಕ್ಕೆ ಮೊದಲು 10 ಕಿಲೋಗ್ರಾಂಗಳಷ್ಟು ತೂಕವನ್ನು ಇಳಿಸುವಂತೆ ರಾಹುಲ್ ಗಾಂಧಿಯ ನಿಕಟವರ್ತಿಗಳು ನನಗೆ ತಿಳಿಸಿದರು ಎಂದು ಸಿದ್ದಿಕ್ ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ವಿರುದ್ಧದ ಸಿದ್ದಿಕ್ ಅವರ ಆರೋಪಗಳು ಇನ್ನೂ ಇವೆ. “ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತ ಮುಖಂಡರು ಮತ್ತು ಕಾರ್ಯಕರ್ತರನ್ನು ನಡೆಸಿಕೊಳ್ಳುತ್ತಿರುವ ರೀತಿ ದುರದೃಷ್ಟಕರ. ಕಾಂಗ್ರೆಸ್ ಮತ್ತು ಮುಂಬೈ ಯೂತ್ ಕಾಂಗ್ರೆಸ್‌ನಲ್ಲಿರುವ ಕೋಮುವಾದದ ಪ್ರಮಾಣ ಬೇರೆಲ್ಲೂ ಇಲ್ಲ. ಕಾಂಗ್ರೆಸ್‌ನಲ್ಲಿ ಮುಸ್ಲಿಂ ಆಗಿರುವುದು ಪಾಪವೇ? ಪಕ್ಷ ಉತ್ತರಿಸಬೇಕು. ನಾನು ಯಾಕೆ ಗುರಿಯಾಗುತ್ತಿದ್ದೇನೆ? ನಾನು ಮುಸ್ಲಿಂ ಎಂಬ ಕಾರಣಕ್ಕಾಗಿಯೇ?” ಎಂದು ಅವರು ಆಕ್ರೋಶಿಸಿದ್ದಾರೆ.
50 ವರ್ಷಗಳ ಕಾಲ ಪಕ್ಷದೊಂದಿಗೆ ಸಂಬಂಧ ಹೊಂದಿದ್ದ ಅವರ ತಂದೆ ಬಾಬಾ ಸಿದ್ದಿಕ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ, ಸಿದ್ದಿಕ್ ಅವರನ್ನು ಮುಂಬೈ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಬುಧವಾರ ತೆಗೆದುಹಾಕಲಾಯಿತು. ನಂತರ ಅವರು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಸೇರಿದ್ದಾರೆ.
ವಂಡ್ರೆ ಪೂರ್ವದ ಶಾಸಕ ಜೂನಿಯರ್ ಸಿದ್ದಿಕ್, ಮುಂಬೈ ಯುವ ಕಾಂಗ್ರೆಸ್ ಮುಖ್ಯಸ್ಥ ಸ್ಥಾನದಿಂದ ತನ್ನನ್ನು ತೆಗೆದುಹಾಕಿದ ಬಗ್ಗೆ ಅಧಿಕೃತವಾಗಿ ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ. ಈ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶೇ.90ರಷ್ಟು ಮತಗಳನ್ನು ಪಡೆದಿದ್ದರೂ ಪಕ್ಷವು ಅವರನ್ನು ಆ ಸ್ಥಾನಕ್ಕೆ ನೇಮಿಸಲು ಒಂಬತ್ತು ತಿಂಗಳು ಬೇಕಾಯಿತು ಎಂದಿದ್ದಾರೆ.
“ಮಲ್ಲಿಕಾರ್ಜುನ ಖರ್ಗೆ ಅಂತಹ ಹಿರಿಯ ನಾಯಕರಾದರೂ ಅವರ ಕೈ ಕೂಡ ಪಕ್ಷದಲ್ಲಿ ಕಟ್ಟಿಹಾಕಲ್ಪಟ್ಟಿದೆ. ರಾಹುಲ್ ಗಾಂಧಿ ಅವರ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಸುತ್ತಲಿನ ಜನರು ಕಾಂಗ್ರೆಸ್ ಅನ್ನು ಮುಗಿಸಲು ಇತರ ಪಕ್ಷಗಳಿಂದ ಸುಪಾರಿ ತೆಗೆದುಕೊಂಡಂತೆ ತೋರುತ್ತಿದೆ” ಎಂದ ಅವರು, ಉದ್ಧವ್ ಠಾಕ್ರೆ ಅವರ ಶಿವಸೇನೆ ಬಣದ ಜೊತೆಗೆ ಕಾಂಗ್ರೆಸ್ ಪಕ್ಷದ ಮೈತ್ರಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Rahul Gandhi: ಐಶ್ವರ್ಯಾ ರೈರನ್ನು ಅವಮಾನಿಸಿದ ರಾಹುಲ್ ಗಾಂಧಿಗೆ ಬಿಜೆಪಿ ತರಾಟೆ