2000 ರೂಪಾಯಿ ನೋಟನ್ನು ಆರ್ಬಿಐ ಹಿಂಪಡೆದ ಬೆನ್ನಲ್ಲೇ, ಎಲ್ಲರೂ ತಮ್ಮ ಬಳಿ ಇರುವ ನೋಟನ್ನು ಹೇಗಾದರೂ ದಾಟಿಸಬೇಕು ಎಂದೇ ಪ್ರಯತ್ನ ಮಾಡುತ್ತಿದ್ದಾರೆ. 2000 ರೂಪಾಯಿ ನೋಟನ್ನು (Rs 2,000 Notes) ಬದಲಿಸಿಕೊಳ್ಳಲು/ಬ್ಯಾಂಕ್ನಲ್ಲಿ ಡಿಪೋಸಿಟ್ ಇಡಲು ಆರ್ಬಿಐ ಸೆಪ್ಟೆಂಬರ್ 30ರವರೆಗೆ ಸಮಯ ನೀಡಿದೆ. ಆದರೂ ಕೆಲವರು ಅಂಗಡಿಗಳಲ್ಲೋ, ಪೆಟ್ರೋಲ್ ಬಂಕ್ಗಳಲ್ಲೋ ಅದನ್ನು ನಿಧಾನವಾಗಿ ದಾಟಿಸಲು ಪ್ಲ್ಯಾನ್ ಮಾಡುತ್ತಿದ್ದಾರೆ. ಆದರೆ ಈ ಉಪಾಯ ಮಾಡಲು ಹೋದವನೊಬ್ಬನಿಗೆ ಪೆಟ್ರೋಲ್ ಬಂಕ್ ಸಿಬ್ಬಂದಿಯೊಬ್ಬ ತಿರುಗೇಟು ನೀಡಿದ ಘಟನೆ ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ನಡೆದಿದೆ.
ಜಲೌನ್ನಲ್ಲಿರುವ ಪೆಟ್ರೋಲ್ ಬಂಕ್ ಒಂದಕ್ಕೆ ತನ್ನ ಸ್ಕೂಟರ್ ತೆಗೆದುಕೊಂಡು ಹೋದವನೊಬ್ಬ ಪೆಟ್ರೋಲ್ ಹಾಕಿಸಿದ್ದಾನೆ. ಪೆಟ್ರೋಲ್ ಹಾಕಿಯಾದ ಬಳಿಕ 2000 ರೂಪಾಯಿ ನೋಟು ಕೊಡಲು ಯತ್ನಿಸಿದ. ಆದರೆ ಅದನ್ನು ತೆಗೆದುಕೊಳ್ಳಲು ಪೆಟ್ರೋಲ್ ಬಂಕ್ನಲ್ಲಿದ್ದ ಪರಿಚಾರಕ ನಿರಾಕರಿಸಿದ. ಆದರೆ ಈತ ನನ್ನ ಬಳಿ ಬೇರೆ ಹಣವೇ ಇಲ್ಲ ಎಂದು ವಾದಿಸಿದ. ಆಗ ಪೆಟ್ರೋಲ್ ಬಂಕ್ ಪರಿಚಾರಕ ಅವನನ್ನು ತಡೆದಿದ್ದಲ್ಲದೆ, ಆತನ ಸ್ಕೂಟರ್ಗೆ ಆಗಷ್ಟೇ ಹಾಕಿದ್ದ ಪೆಟ್ರೋಲ್ನ್ನು ವಾಪಸ್ ತೆಗೆದಿದ್ದಾನೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸರು ಅದನ್ನು ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಂಡಿದ್ದಾರೆ.
ಇದನ್ನೂ ಓದಿ: Shivamogga News: ಪೆಟ್ರೋಲ್ ಟ್ಯಾಂಕರ್ ಪಲ್ಟಿ; 29 ಸಾವಿರ ಲೀಟರ್ ಪೆಟ್ರೋಲ್ ಮಣ್ಣುಪಾಲು
ಮೊದಲಿನಿಂದಲೂ ಹೀಗೊಂದು ಕ್ರಮ ಇದೆ. ದೊಡ್ಡಮೊತ್ತದ ನೋಟುಗಳಿಗೆ ಚಿಲ್ಲರೆ ಬೇಕು ಎಂದರೆ ಪೆಟ್ರೋಲ್ ಬಂಕ್ನಲ್ಲಿ ಕೊಡಬೇಕು ಎಂದು. ಇಷ್ಟು ದಿನಗಳವರೆಗೆ ಪೆಟ್ರೋಲ್ ಬಂಕ್ಗಳಲ್ಲಿ ಈ 2000 ರೂಪಾಯಿ ನೋಟು ಸ್ವೀಕೃತವಾಗಿತ್ತು. ಆದರೆ ಅದು ಚಲಾವಣೆ ಇನ್ನು ಇರುವುದಿಲ್ಲ ಎಂದು ಗೊತ್ತಾದ ಮೇಲೆ ಕೆಲವು ಪೆಟ್ರೋಲ್ ಬಂಕ್ಗಳೂ ಸ್ವೀಕರಿಸುತ್ತಿಲ್ಲ. ಇನ್ನೊಂದೆಡೆ ಮುಂಬಯಿ, ಬೆಂಗಳೂರು, ಕೋಲ್ಕತ್ತ ಮತ್ತು ಇತರ ಮಹಾನಗರದಗಳ ಹಲವು ಪೆಟ್ರೋಲ್ಬಂಕ್ಗಳಲ್ಲಿ ಈಗ ಜನರು 2000 ರೂಪಾಯಿ ನೋಟು ಪಾವತಿಸಲು ಮುಂದಾಗುತ್ತಿದ್ದಾರೆ. 200-300 ರೂಪಾಯಿ ಪೆಟ್ರೋಲ್ ಹಾಕಿಸಿ, 2000 ರೂ.ಕೊಡುತ್ತಿದ್ದಾರೆ. ಕೆಲವು ಪೆಟ್ರೋಲ್ ಬಂಕ್ಗಳಲ್ಲಿ ತೆಗೆದುಕೊಳ್ಳುತ್ತಿದ್ದಾರೆ. ಆದರೆ ವಾಪಸ್ ಚಿಲ್ಲರೆ ಕೊಡುವುದು ಕಷ್ಟವಾಗುತ್ತಿದೆ ಎನ್ನಲಾಗಿದೆ.