ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ ಲೋಹಾಯ್ ಮಲ್ಹಾರ್ ಎಂಬ ಗ್ರಾಮದ ಪುಟ್ಟ ಹುಡುಗಿ ಸೀರಾತ್ ನಾಜ್ (Seerat Naaz) ತಾನು ಓದುತ್ತಿರುವ ಶಾಲೆಯ ದುಃಸ್ಥಿತಿಯನ್ನು ವಿಡಿಯೊ ಮಾಡಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಒಂದು ಮನವಿ ಮಾಡಿದ್ದಾಳೆ. ‘ನನ್ನ ಶಾಲೆ ಎಷ್ಟು ಕೊಳಕಾಗಿದೆ ನೋಡಿ ಮೋದಿ ಜೀ, ಈ ಕಲ್ಲು-ಮಣ್ಣು ಎದ್ದಿರುವ ನೆಲದ ಮೇಲೆ ಕುಳಿತುಕೊಂಡು ನಾವು ಪಾಠ ಆಲಿಸುವುದಾದರೂ ಹೇಗೆ?, ದಯವಿಟ್ಟು ನಮಗಾಗಿ ಒಂದು ಒಳ್ಳೆ ಶಾಲೆ ಕಟ್ಟಿಸಿಕೊಡಿ’ ಎಂದು ಪ್ರಧಾನಿಯವರ ಬಳಿ ಕೇಳಿಕೊಂಡಿದ್ದಾಳೆ. ಆ ಪುಟ್ಟ ವಿದ್ಯಾರ್ಥಿನಿ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ (Viral Video)ಆಗಿದೆ.
ವಿಡಿಯೊ ಪ್ರಾರಂಭಿಸುತ್ತಿದ್ದಂತೆ ‘ಮೋದಿ ಜೀ ವಂದನೆಗಳು, ಹೇಗಿದ್ದೀರಿ? ಚೆನ್ನಾಗಿದ್ದೀರಾ?’ ಎಂದು ಕೇಳುವ ಬಾಲಕಿ ನಂತರ ತನ್ನ ಹೆಸರನ್ನು ಹೇಳುತ್ತಾಳೆ. ಹಾಗೇ, ತಾನು ಯಾವ ಶಾಲೆಯಲ್ಲಿ ಓದುತ್ತಿದ್ದೇನೆ ಎಂದು ಹೇಳಿಕೊಂಡು, ‘ಮೋದಿ ಜೀ ನಿಮ್ಮ ಬಳಿ ಒಂದು ಮಾತು ಹೇಳಬೇಕಿತ್ತು. ನೀವು ಎಲ್ಲರ ಮಾತು ಕೇಳುತ್ತೀರಿ, ಇವತ್ತು ನನ್ನ ಮಾತು ಕೇಳಿ’ ಎನ್ನುತ್ತಾಳೆ. ನಂತರ ಆಕೆ ತನ್ನ ಶಾಲೆಯನ್ನು ವಿಡಿಯೊದಲ್ಲಿ ತೋರಿಸಲು ಪ್ರಾರಂಭಿಸುತ್ತಾಳೆ.
ಇದನ್ನೂ ಓದಿ: Viral Video: ಕಳ್ಳತನದ ಶಂಕೆ; ಮ್ಯಾನೇಜರ್‌ನನ್ನು ಕಂಬಕ್ಕೆ ಕಟ್ಟಿ ಹಾಕಿ, ಹೊಡೆದು ಕೊಂದೇ ಬಿಟ್ಟರು ಪಾಪಿಗಳು!
ಮೆಟ್ಟಿಲುಗಳ ಗುಂಟ ಸಾಗಿದಾಗ ಕಾಣುವ ಎರಡು ಮುಚ್ಚಿದ ಕೊಠಡಿಗಳನ್ನು ತೋರಿಸಿ ‘ಇದರಲ್ಲಿ ಒಂದು ಪ್ರಾಂಶುಪಾಲರ ಕೊಠಡಿ ಮತ್ತು ಅಧ್ಯಾಪಕರ ಕೋಣೆ’ ಎನ್ನುತ್ತಾಳೆ. ಬಳಿಕ ಆ ಕೊಠಡಿಗಳ ಎದುರಿಗಿನ ಪಡಸಾಲೆಯನ್ನು ತೋರಿಸುತ್ತ ‘ನೋಡಿ ಇಲ್ಲೆಲ್ಲ ಎಷ್ಟು ಕೊಳಕಾಗಿದೆ. ನಾವು ಈ ಕೊಳಕು ನೆಲದ ಮೇಲೆ ಕುಳಿತೇ ಪಾಠ ಕಲಿಯಬೇಕು, ಇಲ್ಲಿ ಕುಳಿತುಕೊಳ್ಳಲು ಸಾಧ್ಯವೇ?‘ ಎಂದು ಪ್ರಶ್ನಿಸುತ್ತಾಳೆ. ಮತ್ತೆ ಶಾಲೆಯ ಇಡೀ ಕಟ್ಟಡವನ್ನು ತೋರಿಸಿ ‘ಈ ಕಟ್ಟಡ ಅದೆಷ್ಟು ದೊಡ್ಡದಾಗಿದೆ ನೋಡಿ. ಆದರೆ ಏನೂ ಪ್ರಯೋಜನವಿಲ್ಲ, ಗಲೀಜಾಗಿದೆ’ ಎನ್ನುತ್ತಾಳೆ. ಅಷ್ಟಲ್ಲದೆ ಶಾಲೆಯ ಸುತ್ತಮುತ್ತಲಿನ ಪರಿಸರವನ್ನೂ ಇಂಚಿಂಚೂ ತೋರಿಸಿ, ಅಲ್ಲಿನ ದುಃಸ್ಥಿತಿಯನ್ನು ಕಣ್ಣಿಗೆ ವಿವರಿಸಿದ್ದಾಳೆ. ಶಿಥಿಲಾವಸ್ಥೆಯಲ್ಲಿರುವ ಶೌಚಗೃಹವನ್ನೂ ಆಕೆ ವಿಡಿಯೊದಲ್ಲಿ ತೋರಿಸಿದ್ದಾಳೆ.
ಮೋದಿ ಜೀ ನೀವು ನಮಗೊಂದು ಒಳ್ಳೆಯ ಶಾಲೆ ಕಟ್ಟಿಕೊಡಿ. ನಮಗೆ ಶಾಲೆಯಲ್ಲಿ ಬೆಂಚ್ ಇಲ್ಲ. ನೆಲಕ್ಕೆ ಕುಳಿತುಕೊಂಡರೆ ಸಮವಸ್ತ್ರವೆಲ್ಲ ಕೊಳಕಾಗುತ್ತಿದೆ. ಯೂನಿಫಾರ್ಮ್ ಹೊಸಲು ಮಾಡಿಕೊಂಡು ಹೋದರೆ ಅಮ್ಮ ಬೈಯ್ಯುತ್ತಾರೆ. ಇನ್ನು ಶೌಚಗೃಹ ಮುರಿದುಬಿದ್ದಿದ್ದರಿಂದ, ಅಲ್ಲೇ ಇರುವ ಗುಂಡಿಯಲ್ಲಿ ಮೂತ್ರವಿಸರ್ಜನೆ ಮಾಡಬೇಕು. ಹೊಸಕಟ್ಟಡಕ್ಕಾಗಿ ಪಾಯ ಅಗೆದಿದ್ದರೂ ಅದು ಮೇಲೇಳುತ್ತಿಲ್ಲ’ ಎಂದು ಆ ಬಾಲಕಿ ಅಲವತ್ತುಕೊಂಡಿದ್ದಾಳೆ. ದಯವಿಟ್ಟು ಒಂದೊಳ್ಳೆ ಶಾಲೆ ಕಟ್ಟಿಸಿಕೊಡಿ ಎಂದು ಹೇಳಿದ್ದಾಳೆ. ಇದು ಪ್ರಧಾನಿ ಮೋದಿಯವರನ್ನು ತಲುಪುತ್ತಾ? ನೋಡಬೇಕಾಗಿದೆ.