Site icon Vistara News

Viral Video: ಪ್ರಧಾನಿ ಮೋದಿಯವರ ಚಿನ್ನದ ಪ್ರತಿಮೆ ನಿರ್ಮಿಸಿದ ಸೂರತ್ ​​​ಆಭರಣ ವ್ಯಾಪಾರಿ; 156 ಗ್ರಾಂ ಬಂಗಾರವನ್ನೇ ಬಳಸಿದ್ದೇಕೆ?

Modi Gold

ಸೂರತ್​: 2022ರ ಡಿಸೆಂಬರ್​​ನಲ್ಲಿ ನಡೆದಿದ್ದ ಗುಜರಾತ್ ವಿಧಾನಸಭಾ​​ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದಕ್ಕೆ ಫುಲ್​ ಖುಷಿಯಾದ ಸೂರತ್​​ನ ಆಭರಣ ವ್ಯಾಪಾರಿಯೊಬ್ಬರು, 18 ಕ್ಯಾರೆಟ್​ ಚಿನ್ನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಮೆಯನ್ನು ಕೆತ್ತನೆ ಮಾಡಿಸಿದ್ದಾರೆ. ನರೇಂದ್ರ ಮೋದಿಯವರ ಚಿನ್ನದ ಪ್ರತಿಮೆಯ ವಿಡಿಯೊ ವೈರಲ್ ಆಗಿದ್ದು, ಇಡೀ ಗುಜರಾತ್​​ನಲ್ಲಿ ಅದೇ ಚರ್ಚೆಯ ವಿಷಯವಾಗಿದೆ.

ಸೂರತ್​ನ ಚಿನ್ನಾಭರಣ ಉದ್ಯಮಿಯಾದ, ರಾಧಿಕಾ ಚೈನ್ಸ್​​ನ ಮಾಲೀಕ ಬಸಂತ್​ ಬೋಹ್ರಾ ಎಂಬುವರು ಈಗ ಪ್ರಧಾನಿ ನರೇಂದ್ರ ಮೋದಿಯವರ ಚಿನ್ನದ ಪ್ರತಿಮೆ ಕೆತ್ತನೆ ಮಾಡಿಸಿ ಸುದ್ದಿಯಾಗಿದ್ದಾರೆ. ಗುಜರಾತ್​​ನ​​ 182 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 156 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಮಟ್ಟದ ಗೆಲವು ಸಾಧಿಸಿದೆ. ಹಾಗಾಗಿ ಈ ಪ್ರತಿಮೆಯನ್ನು ಕೂಡ 156 ಗ್ರಾಂಗಳಷ್ಟು ಚಿನ್ನದಲ್ಲಿಯೇ ನಿರ್ಮಿಸಲಾಗಿದ್ದು, ಅದರ ಬೆಲೆ ಸುಮಾರು 11 ಲಕ್ಷ ರೂಪಾಯಿ. ಹಾಗೇ, 4.5 ಇಂಚು ಎತ್ತರ, 3 ಇಂಚು ಅಗಲ ಇದೆ ಎಂದು ಬೋಹ್ರಾ ತಿಳಿಸಿದ್ದಾರೆ.

ಮಾರಾಟಕ್ಕಿಲ್ಲ!
ಬಸಂತ್​ ಬೋಹ್ರಾ ಅವರು ಕೆತ್ತನೆ ಮಾಡಿಸಿದ ಈ ಪ್ರತಿಮೆಯನ್ನು ಕೊಳ್ಳಲು ಸೂರತ್​​ನ ಹಲವು ಬಿಜೆಪಿ ಮುಖಂಡರು ಮುಂದೆ ಬಂದಿದ್ದಾರೆ. ಪ್ರಧಾನಿ ಮೋದಿಯವರ ಅಭಿಮಾನಿಗಳೂ ಕೆಲವರು ಆಸಕ್ತಿ ತೋರಿಸಿದ್ದಾರೆ. ಆದರೆ ಅವರಿಗೆಲ್ಲರಿಗೂ ನಿರಾಸೆಯೇ ಆಗಿದೆ. ‘ನಾನು ಈ ಪ್ರತಿಮೆಯನ್ನು ಮಾರಾಟ ಮಾಡುವುದಿಲ್ಲ. ಅದಕ್ಕೆ ಬೆಲೆಯನ್ನೂ ನಿಗದಿಪಡಿಸುವುದಿಲ್ಲ. ನಾನು ಪ್ರಧಾನಿ ನರೇಂದ್ರ ಮೋದಿಯವರ ದೊಡ್ಡ ಅಭಿಮಾನಿ. ಅವರಿಗೆ ಗೌರವ ಸಲ್ಲಿಸುವ ಸದುದ್ದೇಶದಿಂದ ಈ ಪ್ರತಿಮೆ ಕೆತ್ತನೆ ಮಾಡಿಸಿದ್ದೇನೆ’ ಎಂದು ಬಂಗಾರದ ವ್ಯಾಪಾರಿ ಬಸಂತ್​ ಬೋಹ್ರಾ ತಿಳಿಸಿದ್ದಾರೆ.

ನಮ್ಮ ಚಿನ್ನಾಭರಣ ತಯಾರಿಕಾ ಮಳಿಗೆಯಲ್ಲೇ ಸುಮಾರು 20 ಕುಶಲಕರ್ಮಿಗಳು ಸೇರಿ ಈ ಪ್ರತಿಮೆ ಕೆತ್ತನೆ ಮಾಡಿದ್ದಾರೆ. ಈ ಕೆಲಸಕ್ಕೆ ಸುಮಾರು 3 ತಿಂಗಳು ಬೇಕಾಯಿತು. ಅಂತಿಮವಾಗಿ ಫಲಿತಾಂಶ ತೃಪ್ತಿದಾಯಕವಾಗಿದೆ. ತುಂಬ ಚೆನ್ನಾಗಿ ಈ ಪ್ರತಿಮೆ ಮೂಡಿ ಬಂದಿದೆ ಎಂದು ಹೇಳಿದ ಬೋಹ್ರಾ, ಮಾರಾಟ ಮಾಡುವುದಿಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: Narendra Modi Bust | ಬಂಗಾರದಲ್ಲಿ ನರೇಂದ್ರ ಮೋದಿ ಪುತ್ಥಳಿ ಕೆತ್ತಿಸಿದ ಗುಜರಾತ್‌ ಉದ್ಯಮಿ, ಏನಿದಕ್ಕೆ ಕಾರಣ?

Exit mobile version