Site icon Vistara News

Prachi Nigam: “ನಾನು ಟಾಪ್‌ ಬರಲೇಬಾರದಿತ್ತು…” ಮೀಸೆಯಿಂದಾಗಿ ಟ್ರೋಲ್‌ಗೊಳಗಾದ ಬೋರ್ಡ್‌ ಎಕ್ಸಾಮ್‌ ಟಾಪರ್‌ ಹುಡುಗಿಯ ನೋವು

prachi nigam online troll

ಹೊಸದಿಲ್ಲಿ: 98.50 ಪ್ರತಿಶತ ಅಂಕದೊಂದಿಗೆ ಯುಪಿ ಬೋರ್ಡ್ (UP Board) 10ನೇ ತರಗತಿಯ ಟಾಪರ್ (Board exam topper) ಆಗಿ ಹೊರಹೊಮ್ಮಿರುವ ಪ್ರಾಚಿ ನಿಗಮ್ (Prachi Nigam), ತಮ್ಮ ಮುಖದ ಕೂದಲಿನ (facial hair) ಬಗೆಗೆ ಬರುತ್ತಿರುವ ಆನ್‌ಲೈನ್ ಟ್ರೋಲಿಂಗ್‌ನಿಂದಾಗಿ (Online trolling) ನೊಂದಿದ್ದಾಳೆ. ಬಿಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ತನ್ನ ಅತ್ಯುತ್ತಮ ಶೈಕ್ಷಣಿಕ ಸಾಧನೆಗಿಂತ ಹೆಚ್ಚಾಗಿ ತನ್ನ ಲುಕ್‌ನಿಂದಾಗಿಯೇ ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ (viral news) ಆಗಿರುವ ಬಗ್ಗೆ ವೇದನೆ ವ್ಯಕ್ತಪಡಿಸಿದ್ದಾಳೆ.

“ನಾನು ಟಾಪರ್‌ ಆಗಬಾರದಿತ್ತು. ಕೇವಲ 1-2 ಅಂಕ ಕಡಿಮೆ ಗಳಿಸಿದ್ದರೆ, ಈ ಸೋಶಿಯಲ್‌ ಮೀಡಿಯಾದ ಜನಪ್ರಿಯತೆ ಮತ್ತು ನನ್ನ ಲುಕ್‌ನಿಂದಾಗಿ ಬಂದ ಇಂತಹ ಟ್ರೋಲಿಂಗ್ ಅನ್ನು ಎದುರಿಸಬೇಕಾಗಿರಲಿಲ್ಲ” ಎಂದಿದ್ದಾಳೆ ಪ್ರಾಚಿ. ತನ್ನ ನೋಟಕ್ಕಾಗಿ ವೈಯಕ್ತಿಕವಾಗಿ ತಾನು ಎದುರಿಸುತ್ತಿರುವ ನಿರಂತರ ಗೇಲಿಗಳ ಬಗ್ಗೆ ಮಾತನಾಡಿರುವ ಆಕೆ, “ಇದು ನೋವುಂಟುಮಾಡುವಂಥದು. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಜನರು ತಮಗೆ ಬೇಕಾದುದನ್ನು ಹೇಳುತ್ತಾರೆ. ಅವರನ್ನು ತಡೆಯಲು ಸಾಧ್ಯವಿಲ್ಲ” ಎಂದಿದ್ದಾಳೆ.

ಕೆಲವು ಪ್ರಜ್ಞಾವಂತ ಸೋಶಿಯಲ್‌ ಮೀಡಿಯಾ ಬಳಕೆದಾರರು ಆಕೆಗಾಗಿ ನಿಜವಾಗಿಯೂ ಮಿಡಿದಿದ್ದಾರೆ. “ನಾವು ಒಂದು ಸಮಾಜವಾಗಿ ಆಕೆಯೆದುರು ವಿಫಲರಾಗಿದ್ದೇವೆ” ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ. “ಅವಳ ಜೀವನದ ಅತ್ಯುತ್ತಮ ಕ್ಷಣ ಈಗ ನೋವಿನ ಕ್ಷಣವೂ ಆಗಿದೆ. ಸಾಮಾಜಿಕ ಮಾಧ್ಯಮವು ತುಂಬಾ ವಿಷಕಾರಿ ಮತ್ತು ಕ್ರೂರ” ಎಂದಿದ್ದಾರೆ ಇನ್ನೊಬ್ಬರು. “ಸಮಾಜಕ್ಕಿಂತ ಹೆಚ್ಚಾಗಿ ಅವಳನ್ನು ಟ್ರೋಲ್ ಮಾಡಿದವರು ನಿಜವಾದ ಸೋತವರು. ನಮ್ಮದು ಸೋತವರಿಂದ ತುಂಬಿದ ಸಮಾಜ. ಪ್ರತಿಯೊಬ್ಬ ಯಶಸ್ವಿ ಮಹಿಳೆಯನ್ನೂ ಟ್ರೋಲ್‌ ಮಾಡುತ್ತಾರೆ” ಎಂದಿದ್ದಾರೆ ಮತ್ತೊಬ್ಬರು. “ಅವಳು ಅನುಭವಿಸಿದ ಭಾವನಾತ್ಮಕ ಆಘಾತವನ್ನು ಊಹಿಸಿ. ಜಗತ್ತಿನಿಂದ ಈ ಮಟ್ಟದ ದ್ವೇಷದ ವಿರುದ್ಧ ನಿಲ್ಲಲು ದೊಡ್ಡ ಧೈರ್ಯ ಬೇಕು. ಹೀಗಾಗಿ ಆಕೆ ತುಂಬಾ ಬಲಶಾಲಿಯಾಗಿದ್ದಾಳೆ” ಎಂಬುದು ಇನ್ನೊಬ್ಬರ ಕಾಮೆಂಟ್.

“ಭವಿಷ್ಯದಲ್ಲಿ ಇಂಜಿನಿಯರ್ ಆಗುವ ಗುರಿ ಹೊಂದಿದ್ದೇನೆ ಮತ್ತು ತನ್ನ ಕನಸುಗಳನ್ನು ಮುಂದುವರಿಸುವತ್ತ ಸಂಪೂರ್ಣ ಗಮನಹರಿಸಿದ್ದೇನೆ” ಎಂದು ಪ್ರಾಚಿ ತನ್ನ ಆಕಾಂಕ್ಷೆಗಳನ್ನು ಹಂಚಿಕೊಂಡಿದ್ದಾಳೆ. ಟ್ರೋಲಿಂಗ್ ಪ್ರಾರಂಭವಾದ ನಂತರ ಆಕೆಯ ತಾಯಿ ಮಮತಾ ನಿಗಮ್ ಅವರು ತಮ್ಮ ಮಗಳನ್ನು ಹೇಗೆ ಬೆಂಬಲಿಸಿದರು ಎಂಬುದರ ಕುರಿತು ಮಾತನಾಡುತ್ತಾ, “ಟ್ರೋಲ್‌ಗಳನ್ನು ನಿರ್ಲಕ್ಷಿಸುವಂತೆ ಆಕೆಯನ್ನು ನಾನು ಪ್ರೋತ್ಸಾಹಿಸಿದೆ. ಆಶ್ಚರ್ಯ ಎನಿಸುವಂತೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಕೆಲವು ದಿನಗಳ ನಂತರ ಅವಳನ್ನು ಬೆಂಬಲಿಸಿದರು” ಎಂದಿದ್ದಾರೆ.

ಪ್ರಾಚಿಯ ತಂದೆ ಚಂದ್ರಪ್ರಕಾಶ್ ನಿಗಮ್ ಅವರು ಟ್ರೋಲಿಂಗ್‌ನಿಂದ ಆಗಿರುವ ನಿರಾಶೆಯನ್ನು ಒಪ್ಪಿಕೊಂಡರು. ಆದರೆ ಮಗಳ ಸಾಧನೆಯಿಂದ ಆಗಿರುವ ಹೆಮ್ಮೆಯ ಬಗ್ಗೆ ಹೇಳಿದರು. “ಸಮಾಜದಲ್ಲಿ ಎಲ್ಲಾ ರೀತಿಯ ಜನರಿದ್ದಾರೆ. ನಮ್ಮ ಮಗಳು ಹೆಚ್ಚು ಅಂಕಗಳನ್ನು ಗಳಿಸಿದ್ದಕ್ಕಾಗಿ ನಾವು ಹೆಮ್ಮೆಪಡುತ್ತೇವೆ” ಎಂದು ಅವರು ಹೇಳಿದರು. ಮಮತಾ ನಿಗಮ್ ಅವರು ತಮ್ಮ ಮಗಳ ಚಿಕಿತ್ಸೆಗಾಗಿ ವೈದ್ಯಕೀಯ ಸಲಹೆಯನ್ನು ಪಡೆಯಲು ಯೋಜಿಸಿದ್ದರು. “ಅವಳ ಚಿಕಿತ್ಸೆಯನ್ನು ಈಗ ಸರ್ಕಾರವು ಕೈಗೊಳ್ಳಲಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: Lok Sabha Election 2024 : ಬೋಟ್‌ನಲ್ಲಿ ಬಂದು ವೋಟ್‌ ಮಾಡಿದ 150ಕ್ಕೂ ಮತದಾರರು

Exit mobile version