Site icon Vistara News

Rahul Gandhi: ʻ…ರಾಜೀನಾಮೆ ನೀಡಿದೆʼ ಎಂದ ಹಿಮಂತ ಶರ್ಮಾ; ನಾಯಿ ಬಿಸ್ಕೆಟ್‌ ನೀಡಿದ ರಾಹುಲ್‌ ಗಾಂಧಿ ವೈರಲ್‌ ವಿಡಿಯೋಗೆ ಕಾಮೆಂಟ್

rahul gandhi himanata sharma

ಹೊಸದಿಲ್ಲಿ: ನಾಯಿ ತಿನ್ನದ ಬಿಸ್ಕೆಟ್‌ ಅನ್ನು ಕಾಂಗ್ರೆಸ್‌ ಕಾರ್ಯಕರ್ತನಿಗೆ (Congress leader) ನೀಡಿದ ರಾಹುಲ್‌ ಗಾಂಧಿ (Rahul Gandhi) ಅವರ ವಿಡಿಯೋ ವೈರಲ್‌ (Viral video) ಆಗುತ್ತಿದ್ದು, ಅದಕ್ಕೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರು ನೀಡಿದ ಕಾಮೆಂಟ್ ಕೂಡೀಗ ವೈರಲ್‌ ಆಗುತ್ತಿದೆ.

ಅಸ್ಸಾಂನಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ (Bharat Jodo Nyay Yatra) ಈ ಘಟನೆ ನಡೆದಿದೆ. ವಿಡಿಯೋದಲ್ಲಿ, ಮೊದಲು ಪ್ಯಾಕೆಟ್‌ನಿಂದ ತೆಗೆದ ಬಿಸ್ಕತ್ತನ್ನು ರಾಹುಲ್‌ ಗಾಂಧಿ ಅವರು ನಾಯಿಯ ಮುಂದೆ ಹಿಡಿಯುತ್ತಾರೆ. ಆದರೆ ನಾಯಿ ಅದನ್ನು ತಿನ್ನುವುದಿಲ್ಲ. ರಾಹುಲ್‌ ಅವರು ಆ ಬಿಸ್ಕೆಟನ್ನು ನಂತರ ಕಾರ್ಯಕರ್ತನಿಗೆ ನೀಡಿದ್ದಾರೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮತ್ತು ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಸೋಮವಾರ ತಡರಾತ್ರಿ ಈ ವೀಡಿಯೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್‌ ಆಗಿತ್ತು.

ಈ ವಿಡಿಯೋ ಶೇರ್‌ ಮಾಡಿಕೊಂಡಿರುವ ಬಿಜೆಪಿಯ ಮತ್ತೊಬ್ಬ ನಾಯಕಿ ಪಲ್ಲವಿ ಸಿಟಿ, ರಾಹುಲ್‌ ಅವರನ್ನು “ನಾಚಿಕೆಯಿಲ್ಲದ ವ್ಯಕ್ತಿ” ಎಂದಿದ್ದರು. ಮಾಜಿ ಕಾಂಗ್ರೆಸ್ ನಾಯಕ ಮತ್ತು ಈಗಿನ ಅಸ್ಸಾಂ ಮುಖ್ಯಮಂತ್ರಿ “ಹಿಮಂತ ಬಿಸ್ವಾ ಶರ್ಮಾ ಅವರು ರಾಹುಲ್ ಗಾಂಧಿಯವರ ಮುದ್ದಿನ ನಾಯಿಯಾದ ಪಿಡಿಯ ಅದೇ ಪ್ಲೇಟ್‌ನಿಂದ ಬಿಸ್ಕೆಟ್‌ಗಳನ್ನು ತಿನ್ನುವಂತೆ ಮಾಡಿದ” ದಿನಗಳನ್ನು ನೆನಪಿಸಿಕೊಂಡಿದ್ದರು.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಹಿಮಂತ ಬಿಸ್ವಾ ಶರ್ಮಾ, “ಪಲ್ಲವಿ ಜೀ, ರಾಹುಲ್ ಗಾಂಧಿ ಮಾತ್ರವಲ್ಲ ಅವರ ಇಡೀ ಕುಟುಂಬ ಕೂಡ ಆ ಬಿಸ್ಕೆಟ್ ಅನ್ನು ನನಗೆ ತಿನ್ನಿಸಲು ಸಾಧ್ಯವಾಗಲಿಲ್ಲ. ನಾನು ಹೆಮ್ಮೆಯ ಅಸ್ಸಾಮಿ ಮತ್ತು ಭಾರತೀಯ. ನಾನು ಅದನ್ನು ತಿನ್ನಲು ನಿರಾಕರಿಸಿದೆ ಮತ್ತು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದೆ” ಎಂದಿದ್ದಾರೆ.

ಅಧಿಕೃತ ಭಾರತ್ ಜೋಡೋ ಯಾತ್ರಾ ಹ್ಯಾಂಡಲ್, ರಾಹುಲ್‌ ಗಾಂಧಿ ನಾಯಿಮರಿಯನ್ನು ಮುದ್ದಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದೆ. ಆದರೆ ಆ ಕ್ಲಿಪ್‌ನಲ್ಲಿ ಕಾರ್ಯಕರ್ತನಿಗೆ ಬಿಸ್ಕೆಟ್ ನೀಡಿದ್ದು ಇಲ್ಲ. ಆ ನಾಯಿಮರಿಯು ರಾಹುಲ್‌ ಗಾಂಧಿ ಮಾತನಾಡುತ್ತಿದ್ದ ಅದೇ ಬೆಂಬಲಿಗನಿಗೆ ಸೇರಿದ್ದು ಎಂದು ಕೆಲವು ಹೇಳಿದ್ದಾರೆ. ಕಾಂಗ್ರೆಸ್ ನಾಯಕ ತನ್ನ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ.

ಈಗ ಬಿಜೆಪಿಯಿಂದ ಅಸ್ಸಾಂ ಮುಖ್ಯಮಂತ್ರಿಯಾಗಿರುವ ಹಿಮಂತ ಬಿಸ್ವ ಶರ್ಮಾ ಹಿಂದೆ ಕಾಂಗ್ರೆಸ್‌ ನಾಯಕರಾಗಿದ್ದವರು. ಈ ಘಟನೆಯ ವಿಡಿಯೋವನ್ನು ಹಲವರು ಶರ್ಮಾ ಜೊತೆಗೆ ಶೇರ್‌ ಮಾಡಿಕೊಂಡಿದ್ದಾರೆ. ಶರ್ಮಾ ಅವರು ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರು ಒಂದು ಮೀಟಿಂಗ್‌ಗಾಗಿ ರಾಹುಲ್‌ ಗಾಂಧಿಯನ್ನು ಭೇಟಿ ಮಾಡಿದ ಘಟನೆಯನ್ನು ಈ ಹಿಂದೆ ಆಗಾಗ್ಗೆ ನೆನಪಿಸಿಕೊಂಡಿದ್ದರು. “ರಾಹುಲ್‌ ಗಾಂಧಿಯವರ ಮುದ್ದಿನ ನಾಯಿ ಪಿಡಿಗೆ ಅದರ ಪ್ಲೇಟ್‌ನಲ್ಲಿ ಬಿಸ್ಕೆಟ್‌ಗಳನ್ನು ಕೊಡಲಾಯಿತು. ನಂತರ ಕಾಂಗ್ರೆಸ್ ನಾಯಕರಿಗೆ ಅದೇ ಪ್ಲೇಟ್‌ನಿಂದ ಬಿಸ್ಕೆಟ್ ನೀಡಲಾಯಿತು” ಎಂದು ಶರ್ಮಾ ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ರಾಹುಲ್‌ ಗಾಂಧಿ ಪಕ್ಷದ ಪ್ರಮುಖ ವಿಷಯಗಳ ಬಗ್ಗೆ ಗಂಭೀರತೆ ಹೊಂದಿಲ್ಲ ಎಂದು ಅವರು ಆರೋಪಿಸಿದ್ದರು. ಇದಾದ ಕೆಲವೇ ಸಮಯದ ಬಳಿಕ ಅವರು ಕಾಂಗ್ರೆಸ್ ತೊರೆದಿದ್ದರು.

ವೈರಲ್ ವೀಡಿಯೊದ ಬಗ್ಗೆ ಇತರ ಬಿಜೆಪಿ ನಾಯಕರು ಗಾಂಧಿ ಅವರನ್ನು ಟೀಕಿಸಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ನಾಯಿಗಳಂತೆ ನೋಡಿಕೊಳ್ಳುವ ಯುವರಾಜರ ಪಕ್ಷ ನಿರ್ನಾಮವಾಗುವುದು ಸಹಜ ಎಂದು ಅಮಿತ್ ಮಾಳವೀಯ ಹೇಳಿದ್ದಾರೆ.

ಇದನ್ನೂ ಓದಿ: Rahul Gandhi: ನಾಯಿ ಪ್ಲೇಟ್‌ನಿಂದ ಬಿಸ್ಕೆಟ್‌ ತೆಗೆದು ಕಾಂಗ್ರೆಸ್‌ ಕಾರ್ಯಕರ್ತನಿಗೆ ಕೊಟ್ರಾ ರಾಹುಲ್‌ ಗಾಂಧಿ!

Exit mobile version