Site icon Vistara News

Rajendra Nagar Tragedy: ದೆಹಲಿ ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಅವಾಂತರ; ದುರಂತದಿಂದ ಪಾರಾದವರ Video ಇಲ್ಲಿದೆ

Rajendra Nagar Tragedy

ನವದೆಹಲಿ: ಶನಿವಾರ (ಜುಲೈ 27) ದೆಹಲಿಯಲ್ಲಿ (Delhi Floods) ಸುರಿದ ಧಾರಾಕಾರ ಮಳೆಯಿಂದ ಐಎಎಸ್‌ ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ (Rajendra Nagar Tragedy). ರಾಜೇಂದ್ರ ನಗರದಲ್ಲಿರುವ ರಾವ್‌ ಐಎಎಸ್‌ ಕೋಚಿಂಗ್‌ ಸೆಂಟರ್‌ (Rau’s IAS Coaching Institute)ನಲ್ಲಿ ಈ ದುರಂತ ಸಂಭವಿಸಿದೆ. ಸಂಜೆ ಏಕಾಏಕಿ ನೀರು ನುಗ್ಗಿದ ಕಾರಣ ನೆಲಮಹಡಿಯಲ್ಲಿದ್ದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮೃತರನ್ನು ಐಎಎಎಸ್‌ ಆಕಾಂಕ್ಷಿಗಳಾದ ತೆಲಂಗಾಣ, ಉತ್ತರ ಪ್ರದೇಶ ಮತ್ತು ಕೇರಳ ಮೂಲದ ತಾನಿಯಾ ಸೋನಿ (25), ಶ್ರೇಯಾ ಯಾದವ್ (25) ಮತ್ತು ನವೀನ್ ಡೆಲ್ವಿನ್ (28) ಎಂದು ಗುರುತಿಸಲಾಗಿದೆ. ಇದೀಗ ದುರಂತದಿಂದ ಕೂದಲೆಳೆ ಅಂತರದಿಂದ ಪಾರಾದವರ ವಿಡಿಯೊ ವೈರಲ್‌ (Viral Video) ಆಗಿದೆ.

ಘಟನೆಯನ್ನು ಖಂಡಿಸಿ ಈಗಾಗಲೇ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ದುರಂತಕ್ಕೆ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವೇ ಕಾರಣ ಎಂಬ ಕೂಗು ಎಲ್ಲೆಡೆ ಕೇಳಿ ಬಂದಿದೆ. ಈ ಮಧ್ಯೆ ದುರಂತದಿಂದ ಪಾರಾದ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಹೃದೇಶ್ ಚೌಹಾಣ್ ಘಟನೆ ಯಾವಾಗ ನಡೆಯಿತು ಎಂಬುದರ ಆಘಾತಕಾರಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ನೆಲಮಹಡಿಗೆ ನೆರೆ ನುಗ್ಗಿದ ನಂತರ ಅಲ್ಲಿನ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನು ಈ ವೈರಲ್ ವಿಡಿಯೊ ತೋರಿಸುತ್ತದೆ. ಹಲವು ವಿದ್ಯಾರ್ಥಿಗಳು ದುರಂತದಿಂದ ಪಾರಾಗುವುದನ್ನು ಕಾಣಬಹುದು. ಜತೆಗೆ ನೆರೆಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬರಿಗೆ ವಿದ್ಯಾರ್ಥಿಗಳ ಗುಂಪು ಸಹಾಯಹಸ್ತ ಚಾಚಿ ನೆರವಾಗುತ್ತಿರುವುದೂ ಕಂಡು ಬಂದಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೊ ಹಂಚಿಕೊಂಡಿರುವ ಹೃದೇಶ್‌ ಚೌಹಾಣ್‌, ನೆಲಮಹಡಿಯು ಹತ್ತು ನಿಮಿಷಗಳಲ್ಲಿ ಪ್ರವಾಹದಿಂದ ತುಂಬಿಕೊಂಡಿತ್ತು ಎಂದು ಬರೆದುಕೊಂಡಿದ್ದಾರೆ. ಸಂಜೆ 6.40ಕ್ಕೆ ಈ ಘಟನೆ ನಡೆದಿದ್ದು, ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (National Disaster Management Authority)ಕ್ಕೆ ತಕ್ಷಣ ಮಾಹಿತಿ ನೀಡಲಾಯಿತು. ಆದರೆ ಅವರು ರಾತ್ರಿ 9ರ ನಂತರವೇ ತಲುಪಿದರು. ಇದು ಮೂವರು ಐಎಎಎಸ್‌ ಆಕಾಂಕ್ಷಿಗಳ ಸಾವಿಗೆ ಕಾರಣವಾಯಿತು ಎಂದಿದ್ದಾರೆ.

ನೆಟ್ಟಿಗರಿಂದ ಆಕ್ರೋಶ

ಸದ್ಯ ಈ ವಿಡಿಯೊವನ್ನು 10 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಲವು ಮಂದಿ ಆಡಳಿತ ಯಂತ್ರದ ವೈಫಲ್ಯವನ್ನು ಖಂಡಿಸಿದ್ದಾರೆ. ʼʼಇದು ನಿಜವಾಗಿಯೂ ಭಯಾನಕʼʼ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ʼʼಈ ದುರಂತಕ್ಕೆ, ಮೂವರ ಸಾವಿಗೆ ನಾವು ನ್ಯಾಯಾಂಗ ವ್ಯವಸ್ಥೆಯನ್ನು ಹೊಣೆಗಾರರನ್ನಾಗಿ ಮಾಡಬಹುದೇ?ʼʼ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.

“ದೆಹಲಿ ಪೊಲೀಸ್‌ ನೀವು ಸಮಯಕ್ಕೆ ಸರಿಯಾಗಿ ಏಕೆ ತಲುಪಲಿಲ್ಲ? ಮತ್ತು ಈಗ ನೀವು ಕೋಚಿಂಗ್ ಸೆಂಟರ್ ಮೇಲೆ ಎಫ್ಐಆರ್ ದಾಖಲಿಸುತ್ತೀರಿ. ಎಂತಹ ವಿಪರ್ಯಾಸ” ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ. “ಈ ದುರಂತದ ಹಿಂದಿರುವ ಕಾರಣಕರ್ತರ ವಿರುದ್ಧ, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಿರಲು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ರಾಜಕೀಯ ಮಾಡದೇ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯ ಪ್ರವೃತ್ತರಾಗಬೇಕು” ಎಂದು ಮಗದೊಬ್ಬರು ಸೂಚಿಸಿದ್ದಾರೆ.

ಇದನ್ನೂ ಓದಿ: Delhi Floods: ದೆಹಲಿಯಲ್ಲಿ ಕೋಚಿಂಗ್‌ ಸೆಂಟರ್‌ಗೆ ನುಗ್ಗಿದ ನೀರು; ಮೃತರ ಸಂಖ್ಯೆ 3ಕ್ಕೆ ಏರಿಕೆ: ವಿದ್ಯಾರ್ಥಿಗಳಿಂದ ಪ್ರತಿಭಟನೆ

Exit mobile version