Site icon Vistara News

Rameshwaram Cafe: ಗ್ರಾಹಕರ ಕ್ಷಮೆ ಕೋರಿದರೂ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಾಮೇಶ್ವರಂ ಕೆಫೆ ಮಾಲೀಕ; ಕಾರಣ ಇದು

Rameshwaram Cafe

Rameshwaram Cafe

ಹೈದರಾಬಾದ್‌: ಹೈಟೆಕ್​ ಮಾದರಿಯಲ್ಲಿ ಆಹಾರ ತಯಾರಿಸುವ ಬೆಂಗಳೂರು ಮೂಲದ ರಾಮೇಶ್ವರಂ ಕೆಫೆ (Rameshwaram Cafe) ಕೆಲವು ದಿನಗಳಿಂದ ಸುದ್ದಿಯಲ್ಲಿದೆ. ತಿಂಗಳುಗಳ ಹಿಂದೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟಗೊಂಡ ಸುದ್ದಿ ದೇಶಾದ್ಯಂತ ಸದ್ದು ಮಾಡಿತ್ತು. ಬೆಂಗಳೂರಿನ ವೈಟ್​ಫೀಲ್ಡ್​ ಶಾಖೆಯ ಮೇಲೆ ನಡೆದ ಬಾಂಬ್​ ದಾಳಿಯ ತನಿಖೆ ಈಗಲೂ ನಡೆಯುತ್ತಿದೆ. ಈ ಮಧ್ಯೆ ವಾರದ ಹಿಂದೆ ಹೈದರಾಬಾದ್‌ನಲ್ಲಿರುವ ರಾಮೇಶ್ವರಂ ಕೆಫೆ ಮೇಲೆ ತೆಲಂಗಾಣ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅವಧಿ ಮೀರಿದ 100 ಕೆ.ಜಿ. ಉದ್ದು, 10 ಕೆ.ಜಿ. ಮೊಸರು ಮತ್ತು 8 ಲೀಟರ್ ಹಾಲು ಪತ್ತೆಯಾಗಿತ್ತು. ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯನ್ನೇ ಹುಟ್ಟು ಹಾಕಿತ್ತು. ಈ ಹಿನ್ನೆಲೆಯಲ್ಲಿ ಕೆಫೆ ಮಾಲೀಕ ರಾಘವೇಂದ್ರ ರಾವ್‌ ಗ್ರಾಹಕರಲ್ಲಿ ಕ್ಷಮೆ ಕೋರಿ ವಿಡಿಯೊ ಪೋಸ್ಟ್‌ ಮಾಡಿದ್ದಾರೆ. ಸದ್ಯ ಈ ವಿಡಿಯೊಕ್ಕೂ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅದಕ್ಕೇನು ಕಾರಣ? ಇಲ್ಲಿದೆ ವಿವರ (Viral Video).

ರಾಘವೇಂದ್ರ ರಾವ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ವಿಡಿಯೊವೊಂದನ್ನು ಪೋಸ್ಟ್‌ ಮಾಡಿದ್ದಾರೆ. ತಮ್ಮಿಂದಾದ ತಪ್ಪನ್ನು ಒಪ್ಪಿಕೊಂಡ ಅವರು ಅದನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ʼʼನಾವು ಇಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನಷ್ಟೇ ಗ್ರಾಹಕರಿಗೆ ನೀಡುತ್ತಿದ್ದೇವೆ. ಆಹಾರ ತಯಾರಿಗೆ ಉತ್ಕೃಷ್ಟ ವಸ್ತುಗಳನ್ನು ಬಳಸಲಾಗುತ್ತಿದೆ. ಹೌದು, ನಮ್ಮಿಂದ ಕೆಲವೊಂದು ಸಣ್ಣ ಪುಟ್ಟ ತಪ್ಪುಗಳಾಗಿವೆ. ಅದಕ್ಕಾಗಿ ಕ್ಷಮೆ ಕೋರುತ್ತಿದ್ದೇನೆ. ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ಅವರ ಹಾದಿಯಲ್ಲೇ ನಾವೂ ಸಾಗುತ್ತೇವೆ ಎಂದು ಎಲ್ಲ ಗ್ರಾಹಕರಿಗೆ ಈ ಮೂಲಕ ಭರವಸೆ ನೀಡುತ್ತಿದ್ದೇನೆʼʼ ಎಂದು ಅವರು ತಿಳಿಸಿದ್ದಾರೆ.

ಮುಂದುವರಿದು, “ನೀವು ಪರೀಕ್ಷೆಗಾಗಿ ನಮ್ಮಲ್ಲಿನ ಯಾವುದೇ ಬೇಳೆಕಾಳುಗಳು ಮತ್ತು ಮಸಾಲೆಗಳನ್ನು ತೆಗೆದುಕೊಳ್ಳಬಹುದು. ಉತ್ತಮ ಗುಣಮಟ್ಟದ್ದನ್ನೇ ಬಳಸುತ್ತಿದ್ದೇವೆ. ನಾವು ಬಳಸುವ ತರಕಾರಿ ಕೂಡ ಪ್ರೀಮಿಯಂ ಗುಣಮಟ್ಟದ್ದಾಗಿವೆ. ನಾವು ಯಾವ ರೀತಿಯ ತರಕಾರಿಗಳನ್ನು ಬಳಸುತ್ತೇವೆ ಎಂಬುದನ್ನು ತಪಾಸಣೆ ನಡೆಸುವಂತೆ ನಾನು ಆಹಾರ ಸುರಕ್ಷತಾ ಇಲಾಖೆಗೆ ಮನವಿ ಮಾಡುತ್ತೇನೆ. ನಮ್ಮಿಂದಾದ ತಪ್ಪುಗಳನ್ನು ತಿದ್ದಿದ್ದೇವೆʼʼ ಎಂದು ರಾಘವೇಂದ್ರ ರಾವ್‌ ತಿಳಿಸಿದ್ದಾರೆ.

ಟೀಕೆ ಯಾಕೆ?

ಕ್ಷಮೆ ಕೋರಿದ್ದೇನೋ ಸರಿ. ಇದರಲ್ಲೇನು ತಪ್ಪು? ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. ಕ್ಷಮೆ ಕೋರುವಾಗ ರಾಘವೇಂದ್ರ ರಾವ್‌ ವರ್ತಿಸಿದ ರೀತಿ ಮತ್ತು ಬಾಡಿ ಲಾಂಗ್ವೇಜ್‌ಗೆ ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ. ಇದು ಕ್ಷಮೆ ಕೋರುವ ಹಾಗಿಲ್ಲ, ಬದಲಾಗಿ ಬೆದರಿಕೆ ಹಾಕುವಂತಿದೆ. ಅವರ ಮಾತಿನ ಶೈಲಿ ಮತ್ತು ಬೆರಳನ್ನು ಮುಂದೆ ಮಾಡಿರುವ ರೀತಿ ನೋಡಿದರೆ ಅವರು ಬೆದರಿಸುವಂತೆ ಭಾಸವಾಗುತ್ತದೆ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Rameshwaram Cafe : ಅವಧಿ ಮುಗಿದ ವಸ್ತುಗಳಲ್ಲಿ ತಿಂಡಿ ತಯಾರಿ, ರಾಮೇಶ್ವರಂ ಕೆಫೆ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ

ನೆಟ್ಟಿಗರ ಪ್ರತಿಕ್ರಿಯೆ

ʼʼಮಾತನಾಡುವ ರೀತಿ ಕ್ಷಮೆ ಕೋರುವ ಹಾಗೆ ಕಾಣಿಸುತ್ತಿಲ್ಲ. ರಾಮೇಶ್ವರಂ ಕೆಫೆಯಲ್ಲಿ ದೋಸೆಗೆ ಸುಮಾರು 200 ರೂ. ನಿಗದಿ ಪಡಿಸಲಾಗಿದೆ. ದರ ದುಬಾರಿಯಾದರೂ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸುತ್ತಾರೆʼʼ ಎಂದು ಒಬ್ಬರು ಹೇಳಿದ್ದಾರೆ. ʼʼಇದನ್ನು ಯಾರಾದರೂ ಕ್ಷಮೆ ಕೋರುವುದು ಎಂದು ಕರೆಯುತ್ತಾರಾ? ಅವರ ಧ್ವನಿ, ಬಾಡಿ ಲಾಂಗ್ವೇಜ್‌ ನೋಡಿದರೆ ಬೆದರಿಕೆ ಹಾಕುವಂತಿದೆʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಅವರು ಗ್ರಾಹಕರನ್ನು ಬೆದರಿಸುತ್ತಿದ್ದಾರೆʼʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ರಾಮೇಶ್ವರಂ ಕೆಫೆ ಮತ್ತೊಮ್ಮೆ ಚರ್ಚೆಯ ಮುನ್ನೆಲೆಗೆ ಬಂದಿದೆ.

Exit mobile version