ಮಂಗಳೂರು: ಚಲಿಸುತ್ತಿದ್ದ ಖಾಸಗಿ ಬಸ್ನಿಂದ ಆಯತಪ್ಪಿ ಕೆಳಗೆ ಬಿದ್ದ ಕಂಡಕ್ಟರ್ (Road Accident) ಮೃತಪಟ್ಟಿರುವ ಘಟನೆ ಮಂಗಳೂರು ನಗರದ ನಂತೂರು ವೃತ್ತದಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ಈರಯ್ಯ (23) ಮೃತ ದುರ್ದೈವಿ.
ಕಂಡಕ್ಟರ್ ಈರಯ್ಯ ಫುಟ್ಬೋರ್ಡ್ ಮೇಲೆ ನಿಂತಿದ್ದರು. ವೇಗವಾಗಿ ಚಾಲಕ ಬಸ್ ತಿರುವು ಪಡೆಯುವಾಗ ಫುಟ್ಬೋರ್ಡ್ನಲ್ಲಿ ನಿಂತಿ ಈರಯ್ಯ ಕೈ ಜಾರಿತ್ತು. ಕೈಯಲ್ಲಿ ಟಿಕೆಟ್, ಹಣ ಹಿಡಿದುಕೊಂಡಿದ್ದ ಈರಯ್ಯ ನಿಯಂತ್ರಣ ತಪ್ಪಿ ಬಸ್ನಿಂದ ನೇರ ಹೊರಗೆ ಹಾರಿ ರಸ್ತೆಗೆ ಮುಗ್ಗರಿಸಿ ಬಿದ್ದಿದ್ದ.
ಈರಯ್ಯ ಕೆಳಗೆ ಬಿದ್ದ ರಭಸಕ್ಕೆ ಗಂಭೀರ ಗಾಯಗೊಂಡಿದ್ದ. ತಕ್ಷಣವೇ ಅಲ್ಲಿದ್ದ ಸಂಚಾರಿ ಪೊಲೀಸರು ಹಾಗೂ ಸಾರ್ವಜನಿಕರ ಸಹಾಯದೊಂದಿಗೆ ಕೂಡಲೆ ಆಸ್ಪತ್ರೆಗೆ ಆಟೋದಲ್ಲೇ ಸಾಗಿಸಿದ್ದಾರೆ. ಆದರೆ ಕೆಳಗೆ ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವದಿಂದ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಈರಯ್ಯ ಮೃತಪಟ್ಟಿದ್ದಾರೆ.
ಬಾಗಲಕೋಟೆ ಮೂಲದವರಾದ ಈರಯ್ಯ ಸುರತ್ಕಲ್ನ ತಡಂಬೈಲ್ನಲ್ಲಿ ವಾಸವಾಗಿದ್ದ. ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಬಸ್ ತೆರಳುವಾಗ ಈ ದುರ್ಘಟನೆ ನಡೆದಿದೆ. ಕದ್ರಿ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ಕಂಡಕ್ಟರ್ ರಸ್ತೆಗೆಸೆಯಲ್ಪಟ್ಟ ವಿಡಿಯೋ ಕಾರೊಂದರ ಡ್ಯಾಷ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೇತಾಳನಂತೆ ಬೆನ್ನು ಬಿದ್ದ ನೋವು, ಸಂಕಟ ತಾಳಲಾರದೆ ದಂಪತಿ ವಿಷ ಸೇವಿಸಿ ಆತ್ಮಹತ್ಯೆ
ಮಂಡ್ಯ: ಜೀವನದಲ್ಲಿ ಸದಾ ಒಂದಿಲ್ಲೊಂದು ಸೋಲು, ಸಂಕಟ, ಹತಾಶೆಗಳಿಂದ ಕಂಗಾಲಾಗಿದ್ದ ದಂಪತಿ ವಿಷ ಸೇವಿಸಿ (couple end life) ಆತ್ಮಹತ್ಯೆ (Self Harming) ಮಾಡಿಕೊಳ್ಳುವ ಮೂಲಕ ಈ ಬದುಕಿನಿಂದ ಮುಕ್ತಿ ಪಡೆದಿದ್ದಾರೆ. ಮಂಡ್ಯ ಜಿಲ್ಲೆಯ (Mandya news) ಮಳವಳ್ಳಿ ಪಟ್ಟಣದ ಎನ್.ಇ.ಎಸ್. ಬಡಾವಣೆಯಲ್ಲಿ ಈ ಘಟನೆ ನಡೆದಿದೆ.
ಎನ್.ಇಎಸ್ ಬಡಾವಣೆಯ ನಿವಾಸಿಗಳಾದ ರಾಜೇಶ್(45), ಸುಧಾ(40) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಅವರು ಇನ್ನು ಬದುಕೇ ಬೇಡ ಎಂಬ ತೀರ್ಮಾನಕ್ಕೆ ಬಂದು ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾರೆ.
ರಾಜೇಶ್ ಅವರು ವೃತ್ತಿಯಲ್ಲಿ ಅಕ್ಕಸಾಲಿಗರಾಗಿದ್ದರು. ಉದ್ಯೋಗದಲ್ಲಿ ಅವರಿಗೆ ದೊಡ್ಡ ಏಳಿಗೆ ಇರಲಿಲ್ಲ. ಸೋಲು ತನ್ನನ್ನು ಬೆನ್ನು ಹತ್ತಿದೆ ಎಂದು ಅವರು ಅಂದುಕೊಳ್ಳುತ್ತಿದ್ದರು. ಇದರ ನಡುವೆ ಅವರ ಕಾಲಿಗೆ ಗಾಯವಾಗಿ ಕಾಲನ್ನೇ ಕತ್ತರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೆಂಥ ಅಗ್ನಿಪರೀಕ್ಷೆ ಎಂದು ಅವರು ನೋವಿನಲ್ಲಿದ್ದರು. ಕಾಲು ಕತ್ತರಿಸಿದ್ದರಿಂದ ಚಿನ್ನದ ಕೆಲಸ ಮಾಡುವುದು ಕೂಡಾ ಕಷ್ಟವಾಗುತ್ತಿತ್ತು.
ಹಾಗಂತ ಅವರೇನೂ ತೀರಾ ಬಡವರಲ್ಲ. ಸಾಕಷ್ಟು ಸ್ಥಿತಿವಂತರೇ ಇದ್ದಾರೆ. ಆದರೆ ಮುಂದೆ ಬದುಕು ಕಷ್ಟವಾದೀತು ಎಂಬ ಭಯವೇ ಅವರನ್ನು ಸಾವಿನ ಕಡೆಗೆ ತಳ್ಳಿದೆ.
ತಾನು ಈಗಲೇ ಹೀಗಾದರೆ ಮುಂದೆ ಜೀವನ ನಡೆಸುವುದು ಹೇಗೆ ಎಂಬ ಭಯ ಅವರನ್ನು ಕಾಡುತ್ತಿತ್ತು. ಸಾಲದ್ದಕ್ಕೆ ಅವರಿಗೆ ಮಕ್ಕಳೂ ಇರಲಿಲ್ಲ. ಹಾಗಿದ್ದರೆ ಮುಂದೆ ಯಾರು ನೋಡಿಕೊಳ್ಳುತ್ತಾರೆ ಎಂದು ಅವರು ದಿಗಿಲುಕೊಂಡಿದ್ದರು. ಇದೇ ಸಂಕಟದಲ್ಲಿ ಮುಳುಗಿದ್ದರು ದಂಪತಿ. ಸೋಲು, ಮಕ್ಕಳಾಗದ ಚಿಂತೆ ಜೊತೆಗೆ ಕಾಲು ಕಳೆದುಕೊಂಡು ಬದುಕು ಇನ್ನಷ್ಟು ದಾರುಣವಾದೀತು ಎಂಬ ಭಯದಲ್ಲಿ ಅವರು ಪ್ರಾಣವನ್ನೇ ಕಳೆದುಕೊಳ್ಳಲು ನಿರ್ಧರಿಸಿದರು ಎನ್ನಲಾಗಿದೆ.
ಅವರು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ. ಬೆಳಗ್ಗೆ ಅಕ್ಕಪಕ್ಕದವರು ಗಮನಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಮಳವಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ