Site icon Vistara News

ವೈರಲ್‌ ನ್ಯೂಸ್ | ಅಧ್ಯಾಪಕರ ಮನೆಗೆ ಕನ್ನ ಹಾಕಿದ ಕಳ್ಳನ ಗುರುಭಕ್ತಿ ಹೀಗಿತ್ತು!

theft

ಅದೊಂದು ನಿವೃತ್ತ ಮುಖ್ಯೋಪಾಧ್ಯಾಯರ ಮನೆ. ಅವರ ಹೆಸರು ಹರಿಶ್ಚಂದ್ರ ರಾಯ್.‌ ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಅವರು ನಿವೃತ್ತರಾಗಿ ೨೫ ವರ್ಷ ಕಳೆದಿದ್ದರೂ, ಸ್ಥಳೀಯರ ಗೌರವಕ್ಕೆ ಪಾತ್ರರಾದವರು. ಬದಲಿಗೆ, ಸುತ್ತಮುತ್ತಲಿನ ಬಡ ಮಕ್ಕಳ ಓದು-ವಿದ್ಯೆಗೆ ನೆರವಾಗುತ್ತಾ ನಿವೃತ್ತ ಜೀವನವನ್ನು ಕಳೆಯುತ್ತಿರುವವರು. ಕೆಲಕಾಲದಿಂದ ಅನಾರೋಗ್ಯಕ್ಕೆ ಈಡಾಗಿರುವ ರಾಯ್‌ ಅವರೊಂದಿಗೆ ಅವರ ಸಹೋದರರ ಕುಟುಂಬವಿದ್ದು ಆರೈಕೆ ಮಾಡುತ್ತಿದೆ. ದಿನಂಪ್ರತಿ ಔಷಧ ಮತ್ತು ಫಿಸಿಯೊಥೆರಪಿಯ ಅಗತ್ಯವಿದೆ ನಿವೃತ್ತ ಅಧ್ಯಾಪಕರಿಗೆ.

ವಿಷಯ ಈವರೆಗಿನದ್ದಲ್ಲ: ಇನ್ನು ಮುಂದೆ ಪ್ರಾರಂಭ. ಅದೊಂದು ರಾತ್ರಿ ಊಟದ ನಂತರ ಹವಾ ಸೇವನೆಗೆಂದು ಮನೆಯ ಬಾಗಿಲು ತೆರೆಯುತ್ತಿದ್ದಂತೆ, ಹರಿತ ಆಯುಧಗಳನ್ನು ಹೊಂದಿದ ಇಬ್ಬರು ಮುಸುಕುಧಾರಿ ಆಗಂತುಕರು ಮನೆಯೊಳಗೆ ದಾಂಗುಡಿಯಿಟ್ಟರು. ಅವರನ್ನು ತಡೆಯಲು ಯತ್ನಿಸಿದ ರಾಯ್‌ ಅವರ ತಮ್ಮನನ್ನು ತಳ್ಳಿ, ಟಾಯ್ಲೆಟ್ಟಿನೊಳಗೆ ಕೂಡಿಟ್ಟರು. ವೃದ್ಧ ಅಧ್ಯಾಪಕರನ್ನು ಬೆದರಿಸಿದ ಚೋರರು, ಇರುವ ಹಣ ಮತ್ತು ಒಡವೆಯನ್ನೆಲ್ಲಾ ನೀಡುವಂತೆ ಒತ್ತಾಯಿಸಿದರು. ಹೆದರಿದ ರಾಯ್‌, ತಮ್ಮಲ್ಲಿದ್ದ ಸುಮಾರು ೧೭ ಸಾವಿರ ರೂ.ಗಳನ್ನು ಕಳ್ಳರಿಗೆ ಒಪ್ಪಿಸಿದರು. ಈ ಹೊತ್ತಿಗೆ ಮನೆಯನ್ನೆಲ್ಲಾ ಜಾಲಾಡಿದ ಖದೀಮರು, ಎದುರಿಗಿದ್ದ ಎರಡು ಮೊಬೈಲ್‌ ಫೋನ್‌ಗಳನ್ನೂ ಕಿಸೆಗಿಳಿಸಿದರು. ಈವರೆಗೆ ನಡೆದಿದ್ದೆಲ್ಲಾ ಮಾಮೂಲಿ ದರೋಡೆಯ ಪ್ರಕರಣವೇ. ನಂತರ ಒಂದು ವಿಲಕ್ಷಣ ಘಟನೆ ನಡೆಯಿತು.

ಬಂದಿದ್ದ ಕಳ್ಳರ ಪೈಕಿ ಒಬ್ಬ ಇದ್ದಕ್ಕಿದ್ದಂತೆ ನಿವೃತ್ತ ಅಧ್ಯಾಪಕರ ಎದುರು ಗೌರವ ತೋರುವಂತೆ ಬಾಗಿದ. ತಾನು ಕದಿಯುತ್ತಿರುವುದು ತನಗೆ ಪಾಠ ಹೇಳಿಕೊಟ್ಟ ಗುರುಗಳ ಮನೆಯಲ್ಲಿ, ದೋಚುತ್ತಿರುವುದು ಅವರನ್ನೇ ಎಂಬುದು ಅರ್ಥವಾದವರಂತೆ, ಸುಮ್ಮನೆ ನಿಂತ. ಈ ಚೋರರು ತನಗಾಗಲೀ, ತನ್ನ ಮನೆಯವರಿಗಾಗಲೀ ಅಪಾಯ ಮಾಡುವುದಿಲ್ಲ ಎಂಬುದನ್ನು ಅರಿತ ರಾಯ್‌ ಅವರು, ಮರುದಿನ ಬೆಳಗಿನ ಹಾಲು-ತರಕಾರಿಗೆ ಮತ್ತು ಫಿಸಿಯೊಥೆರಪಿಗೆ ಸ್ವಲ್ಪ ಹಣ ಕೊಟ್ಟು ಹೋಗಿ ಎಂದು ಕೇಳಿದರು. ತಕ್ಷಣ ೨೦೦ ರೂ.ಗಳನ್ನು ಮತ್ತು ಒಂದು ಮೊಬೈಲ್‌ ಫೋನನ್ನು ಅವರ ಪಾದಮೂಲದಲ್ಲಿಟ್ಟು ಅಲ್ಲಿಂದ ಪರಾರಿಯಾದರು.

ʻಇರುವ ಹಣವನ್ನೆಲ್ಲಾ ಅವರ ಕೈಗಿತ್ತರೂ, ಇಡೀ ಮನೆಯನ್ನು ಕಳ್ಳರು ಕಿತ್ತಾಡಿದರು. ಆದರೆ ಹೋಗುವಾಗ ನನ್ನೆದುರು ಬಾಗಿ ವಂದಿಸಿದರುʼ ಎಂದು ರಾಯ್‌ ಹೇಳಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಗಾಬರಿ ಹುಟ್ಟಿಸಿದ್ದು, ಪ್ರದೇಶದಲ್ಲಿ ಭದ್ರತೆ ಹೆಚ್ಚಿಸುವುದಾಗಿ ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಉದ್ಯೋಗಿಯೊಬ್ಬ ರಜೆ ಕೇಳಿ ಬಾಸ್‌ಗೆ ಕಳಿಸಿದ ಇ-ಮೇಲ್‌ ವೈರಲ್‌; ಪ್ರಾಮಾಣಿಕತೆ ಮೆಚ್ಚುವಂಥದ್ದು !

Exit mobile version