Site icon Vistara News

Rupert Murdoch: ಮಾಧ್ಯಮ ದೊರೆ ರೂಪರ್ಟ್‌ ಮುರ್ಡೋಕ್‌ಗೆ 92ರ ಹರೆಯದಲ್ಲಿ 5ನೇ ಮದುವೆಯ ರೋಮಾಂಚನ!

rupert murdoch elena zukova

ನ್ಯೂಯಾರ್ಕ್‌: ಮಾಧ್ಯಮ ದೊರೆ, ಕುಬೇರ ರೂಪರ್ಟ್‌ ಮುರ್ಡೋಕ್‌ (Rupert Murdoch) ಅವರು ತಮ್ಮ 92ನೇ ವಯಸ್ಸಿನಲ್ಲಿ ಇನ್ನೊಂದು ಮದುವೆಯಾಗಲು (Marriage) ಸಜ್ಜಾಗಿದ್ದಾರೆ. ಇದು ಅವರ 5ನೇ ಮದುವೆ. ವಧು ಎಲೆನಾ ಝುಕೋವಾ (Elena Zhukova) ವಯಸ್ಸು 67.

ಇವರ ಗೆಳತಿ ಎಲೆನಾ ಝುಕೋವಾ ಅವರೊಂದಿಗೆ ಈಗಾಗಲೇ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ. ವಿವಾಹವು ಕ್ಯಾಲಿಫೋರ್ನಿಯಾದದ ಮೊರಗಾದ ಅವರ ದ್ರಾಕ್ಷಿತೋಟ ಮತ್ತು ಎಸ್ಟೇಟ್‌ನಲ್ಲಿ ನಡೆಯಲಿದೆ. ಮೀಡಿಯಾ ದೊರೆಯಾದ ಮುರ್ಡೋಕ್‌ ಫಾಕ್ಸ್ ಮತ್ತು ನ್ಯೂಸ್ ಕಾರ್ಪ್‌ನ ಅಧ್ಯಕ್ಷ ಸ್ಥಾನದಿಂದ ಇತ್ತೀಚೆಗಷ್ಟೇ ಕೆಳಗಿಳಿದ ಕೆಲವೇ ತಿಂಗಳ ನಂತರ ಇದು ಘಟಿಸಿದೆ.

ಎಲೆನಾ ಝುಕೋವಾ ಮಾಸ್ಕೋದವರು. 67 ವರ್ಷ ವಯಸ್ಸಿನ ಈಕೆ ಆನ್ವಯಿಕ ಜೀವಶಾಸ್ತ್ರಜ್ಞರಾಗಿದ್ದು ನಿವೃತ್ತರಾಗಿದ್ದಾರೆ. ಕಳೆದ ಬೇಸಿಗೆಯಲ್ಲಿ ರೂಪರ್ಟ್ ಮುರ್ಡೋಕ್ ಜೊತೆ ಡೇಟಿಂಗ್ ಪ್ರಾರಂಭಿಸಿದ್ದರು. ರೂಪರ್ಟ್ ಮುರ್ಡೋಕ್ ಅವರ ಮೂರನೇ ಪತ್ನಿ ವೆಂಡಿ ಡೆಂಗ್ ಮೂಲಕ ಇವರು ಭೇಟಿಯಾದವರು.

ರೂಪರ್ಟ್‌ ಅವರ ಹಿಂದಿನ ಮದುವೆ ನಟಿ, ಮಾಡೆಲ್ ಜೆರ್ರಿ ಹಾಲ್ ಅವರೊಂದಿಗೆ ಆಗಿತ್ತು. ಅವರ ಈ ನಾಲ್ಕನೇ ವಿವಾಹ ಆರು ವರ್ಷಗಳ ದಾಂಪತ್ಯದ ನಂತರ 2022ರಲ್ಲಿ ವಿಚ್ಛೇದನದಲ್ಲಿ ಕೊನೆಗೊಂಡಿತು.

ಮಾಧ್ಯಮ ದೊರೆ ಕಳೆದ ವರ್ಷ ಸ್ಯಾನ್ ಫ್ರಾನ್ಸಿಸ್ಕೋದ ಮಾಜಿ ಪೊಲೀಸ್ ಚಾಪ್ಲಿನ್ ಆನ್ ಲೆಸ್ಲಿ ಸ್ಮಿತ್ ಅವರೊಂದಿಗೆ ಸಂಕ್ಷಿಪ್ತವಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದರು. ಅದು ಮುಂದುವರಿದಿರಲಿಲ್ಲ. ಅವರ ಇತರ ಮಾಜಿ ಸಂಗಾತಿಗಳೆಂದರೆ ಆಸ್ಟ್ರೇಲಿಯನ್ ಫ್ಲೈಟ್ ಅಟೆಂಡೆಂಟ್ ಪೆಟ್ರೀಷಿಯಾ ಬುಕರ್, ಸ್ಕಾಟಿಷ್ ಮೂಲದ ಪತ್ರಕರ್ತೆ ಅನ್ನಾ ಮನ್, ಡೆಂಗ್ ಮತ್ತು ಅಮೆರಿಕದ ಮಾಡೆಲ್ ಮತ್ತು ನಟಿ ಜೆರ್ರಿ ಹಾಲ್.

ರೂಪರ್ಟ್ ಮುರ್ಡೋಕ್ 1950ರ ದಶಕದಲ್ಲಿ ಆಸ್ಟ್ರೇಲಿಯಾದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1969ರಲ್ಲಿ ಇಂಗ್ಲೆಂಡ್‌ನಲ್ಲಿ ನ್ಯೂಸ್ ಆಫ್ ದಿ ವರ್ಲ್ಡ್ ಮತ್ತು ದಿ ಸನ್ ಪತ್ರಿಕೆಗಳನ್ನು ಖರೀದಿಸಿದರು. ನ್ಯೂಯಾರ್ಕ್ ಪೋಸ್ಟ್ ಮತ್ತು ವಾಲ್ ಸ್ಟ್ರೀಟ್ ಜರ್ನಲ್ ಸೇರಿದಂತೆ ಹಲವಾರು ಅಮೆರಿಕದ ಪ್ರಕಟಣೆಗಳನ್ನು ಸಹ ಖರೀದಿಸಿದರು.

1996ರಲ್ಲಿ ಅವರು ಫಾಕ್ಸ್ ನ್ಯೂಸ್ ಅನ್ನು ಪ್ರಾರಂಭಿಸಿದರು. 2013ರಲ್ಲಿ ನ್ಯೂಸ್ ಕಾರ್ಪ್ ಅನ್ನು ಸ್ಥಾಪಿಸಿದರು. ಕಳೆದ ವರ್ಷ ರೂಪರ್ಟ್ ಮುರ್ಡೋಕ್ ಅವರು ತಮ್ಮ ಮಾಧ್ಯಮ ಸಾಮ್ರಾಜ್ಯದ ಪ್ರಮುಖ ಪಾತ್ರದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದರು. ತಮ್ಮ ಮಗ ಲಾಚ್ಲಾನ್‌ಗೆ ಅಧಿಕಾರ ಹಸ್ತಾಂತರಿಸಿದ್ದು, ಮಾರ್ಗದರ್ಶಕರಾಗಿ ಮುಂದುವರಿದಿದ್ದಾರೆ.

ಇದನ್ನೂ ಓದಿ: 91ನೇ ವಯಸ್ಸಲ್ಲಿ 4ನೇ ಹೆಂಡ್ತಿ ಜತೆ ವಿಚ್ಚೇದನಕ್ಕೆ ಮುಂದಾದ ಶ್ರೀಮಂತ ಉದ್ಯಮಿ ಮುರ್ಡೋಕ್‌

Exit mobile version