ಕಲಬುರಗಿ: ಇದನ್ನು ವಿಚಿತ್ರ ಅಂತೀರೋ? ಮಾಯ ಅಂತೀರೋ, ದೋಷ ಅಂತೀರೋ? ಸುಳ್ಳು ಅಂತೀರೋ? ಏನು ಬೇಕಾದರೂ ಅಂದುಕೊಳ್ಳಿ. ಆದರೆ, ಆಗಿರುವುದು ಮಾತ್ರ ನಿಜ. ಏನಾಗಿದೆ ಎಂದರೆ 14 ವರ್ಷದ ಬಾಲಕನೊಬ್ಬನಿಗೆ (Snake haunts 14 Year old boy) ಸರ್ಪವೊಂದು ಎಡೆಬಿಡದೆ ಕಾಡುತ್ತಿದೆ (Snake bite). ಎಷ್ಟೆಂದರೆ ಎರಡು ತಿಂಗಳಲ್ಲಿ ಒಂಬತ್ತು ಬಾರಿ ಹಾವು ಕಡಿದಿದೆ (Snake bites 9 times in two months). ದೊಡ್ಡ ಗಾತ್ರದ ಹಾವು ಇದಾಗಿದ್ದರೂ ಹುಡುಗನಿಗೆ ಒಂಬತ್ತು ಬಾರಿ ಕಡಿದಾಗಲೂ ಏನೂ ಆಗಿಲ್ಲ, ಜೀವಕ್ಕೆ ತೊಂದರೆ ಆಗಿಲ್ಲ. ವಿಶೇಷವೆಂದರೆ ಹೀಗೆ ಕಡಿಯೋ ಹಾವು ಅವನಿಗೆ ಬಿಟ್ಟರೆ ಬೇರೆ ಯಾರಿಗೂ ಕಾಣಿಸಿಲ್ಲ. ಹಾಗಂತ ಹಾವೇ ಕಡಿದಿಲ್ಲ ಅನ್ನಬೇಡಿ. ಹಾವು ಕಡಿದಿದ್ದು ನಿಜಾನೇ!
ಏನಿದು ವಿಚಿತ್ರ? ಎಲ್ಲಿ ನಡೀತು ಅಂತೀರಾ? ಕಲಬುರಗಿ ಜಿಲ್ಲೆ ಚಿತ್ತಾಪೂರ ತಾಲೂಕಿನ ಹಲಕಟ್ಟಿ ಗ್ರಾಮದಲ್ಲಿ ಕಳೆದ ಕೆಲವು ಸಮಯದಿಂದ ನಡೆಯುತ್ತಿರುವ ವಿದ್ಯಮಾನ ಇದು. ಒಂದೆರಡು ದಿನದ ಹಿಂದಷ್ಟೇ ಹಾವು ಒಂಬತ್ತನೇ ಬಾರಿಗೆ ಹುಡುಗನಿಗೆ ಕಡಿದಿದೆ.
ಹುಡುಗನ ಹೆಸರು ಪ್ರಜ್ವಲ್
ಹಲಕಟ್ಟಿ ಗ್ರಾಮದ ಒಂಬತ್ತನೇ ತರಗತಿಯ ವಿದ್ಯಾರ್ಥಿ ಪ್ರಜ್ವಲ್ನೇ ಈ ರೀತಿ ಪದೇಪದೇ ಹಾವು ಕಡಿತಕ್ಕೆ ಒಳಗಾಗುತ್ತಿರುವ ಹುಡುಗ. ಒಂದೇ ರೀತಿಯ ಸರ್ಪದಿಂದ ಒಂಬತ್ತು ಬಾರಿ ಕಡಿತಕ್ಕೊಳಗಾದ ಹುಡುಗ ಈಗ ನಿದ್ದೆಯಲ್ಲೂ ಹಾವು ಹಾವು ಎಂದು ಬೆಚ್ಚಿ ಬೀಳುತ್ತಾನೆ.
ಪ್ರಜ್ವಲ್ ಎಲ್ಲೋ ಇರುತ್ತಾನೆ. ತಕ್ಷಣ ಹಾವು ಕಚ್ಚಿತು ಎಂದು ಓಡಿ ಬರುತ್ತಾನೆ. ಹಾವು ಕಚ್ಚಿದ ತಕ್ಷಣ ಮೈ ಮೇಲೆ ಹಾವಿನ ಹಲ್ಲಿನ ಗುರುತು ಕಾಣುತ್ತದೆ. ರಕ್ತವೂ ಸಹ ಬರುತ್ತದೆ. ಅಚ್ಚರಿ ಎಂದರೆ ಹಾವು ಕಡಿದ ಬಳಿಕ ಬೇವಿನ ಎಲೆ ತಿಂದರೂ ಕಹಿ ಅನಿಸುವುದಿಲ್ಲವಂತೆ. ಮೆಣಸಿನ ಪುಡಿ ತಿಂದರೂ ಖಾರವೇ ಇಲ್ಲ. ಇದಕ್ಕಿಂತಲೂ ಹೆಚ್ಚಾಗಿ ಕಚ್ಚಿದ ಹಾವು ಆ ಬಾಲಕನಿಗೆ ಬಿಟ್ಟು ಬೇರಾರಿಗೂ ಕಾಣಿಸುವುದಿಲ್ಲ!
ಪ್ರಜ್ವಲ್ನಿಗೆ ಹಾವು ಕಡಿದಿದ್ದು ಮೂರು ಬಾರಿ ಅವನದೇ ಮನೆಯಲ್ಲಿ. ಇನ್ನು ಅದೇ ಗ್ರಾಮದ ಅಜ್ಜಿಯ ಮನೆಯಲ್ಲಿ ಆರು ಬಾರಿ ಹಾವು ಕಡಿತವಾಗಿದೆ. ಹೀಗೆ ಹಾವು ಕಡಿದ ಒಂಬತ್ತು ಸಲವೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಇದನ್ನೂ ಓದಿ : Fraud case: ಸರ್ಕಾರಿ ಜಾಬ್ ಬೇಕಾ? ದಯವಿಟ್ಟು ಇವರನ್ನು ಸಂಪರ್ಕಿಸಬೇಡಿ; ವಂಚಕ ಅವನು ಮತ್ತು ಅವಳು ಅರೆಸ್ಟ್
ಮಾಡದ ಪೂಜೆಯಿಲ್ಲ, ಬೇಡಿಕೊಳ್ಳದ ದೇವರಿಲ್ಲ
ಪೋಷಕರು ಮಗನ ಈ ಸಮಸ್ಯೆಗೆ, ನಾಗದೋಷಕ್ಕಾಗಿ ಮಾಡದ ಪೂಜೆಯಿಲ್ಲ, ಪುನಸ್ಕಾರವಿಲ್ಲ. ಹೊಲದಲ್ಲಿ ಮನೆ ದೇವತೆಯ ಪುಟ್ಟ ಗುಡಿಯನ್ನೂ ನಿರ್ಮಿಸಿದ್ದಾರೆ. ಕಂಡ ಕಂಡ ದೇವರಿಗೆ ಹರಕೆ ತೀರಿಸಿದ್ದೂ ಆಗಿದೆ. ಆದರೂ ಬೆಂಬಿಡದೇ ಕಾಡುತ್ತಿದ್ದಾನೆ ಬುಸ್ ಬುಸ್ ನಾಗಪ್ಪ. ಒಂದೆರಡು ದಿನದ ಹಿಂದೆ ಒಂಬತ್ತನೇ ಬಾರಿ ಮತ್ತೆ ಹಾವು ಕಡಿತವಾದ ಬಳಿಕ ಸದ್ಯ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಗನಿಗೆ ಈ ಹಾವಿನ ಕಡಿತದಿಂದ ಒಮ್ಮೆ ಮುಕ್ತಿ ಸಿಗಲಪ್ಪ ಎಂದು ಬೇಡುತ್ತಿದ್ದಾರೆ ಪಾಲಕರು.