Site icon Vistara News

Snake Catch : ಬೃಹತ್‌ ಗಾತ್ರದ ಹೆಬ್ಬಾವನ್ನು ಹಿಡಿದ 12ರ ಬಾಲಕ! Video ಇದೆ ನೋಡಿ!

Python catch video

ಉಡುಪಿ: ಅವನು ಕೇವಲ 12 ವರ್ಷದ ಬಾಲಕ (12 year old boy). ಏಳನೇ ತರಗತಿಯ ವಿದ್ಯಾರ್ಥಿ. ಆದರೆ, ಅವನ ವಯಸ್ಸಿಗೆ ಮೀರಿದ ಬುದ್ಧಿಶಕ್ತಿ, ಧೈರ್ಯ ಎಷ್ಟಿದೆ ಎಂದರೆ ಅತ್ಯಂತ ದೊಡ್ಡದಾದ ಹೆಬ್ಬಾವಿನ ತಲೆಗೇ ಕೈಹಾಕಿ (Snake Catch) ಹಿಡಿದಿದ್ದಾನೆ. ಪುಟ್ಟ ಬಾಲಕನ ಈ ಸಾಹಸದ ವಿಡಿಯೊ ಜಾಲತಾಣದಲ್ಲಿ ವೈರಲ್‌ (Viral video) ಆಗಿದ್ದ ಜನರ ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ.

ಉಡುಪಿ ತಾಲೂಕಿನ ಸಾಲಿಗ್ರಾಮ ದೇವಾಡಿಗರಬೆಟ್ಟು ಗ್ರಾಮದಲ್ಲಿ ಹೆಬ್ಬಾವೊಂದು (Python catch) ಬಂದಿದೆ ಎಂಬ ಮಾಹಿತಿ ಪಡೆದ ಈ ಹುಡುಗ ತನ್ನ ತಂದೆಯೊಂದಿಗೆ ಅಲ್ಲಿಗೆ ಹೋಗಿದ್ದ. ಪೊದೆಯಲ್ಲಿ ಅಡಗಿಕೊಂಡಿದ್ದ ಹಾವನ್ನು ಅಪ್ಪ ಬಾಲದಲ್ಲಿ ಹಿಡಿದರೆ ಮಗ ತಲೆಗೇ ಕೈ ಹಾಕಿ ದರದರನೆ ಎಳೆದುಕೊಂಡು ಬಂದಿದ್ದಾನೆ!

ಈ ಹುಡುಗನ ಹೆಸರು ಧೀರಜ್‌ ಐತಾಳ್‌. ಅವನ ತಂದೆ ಬೇರೆ ಯಾರೂ ಅಲ್ಲ, ಉಡುಪಿ ಭಾಗದ ಖ್ಯಾತ ಉರಗ ತಜ್ಞ ಸುಧೀಂದ್ರ ಐತಾಳ್‌ (Snake catcher Sudhindra Aithal). ಸಾಲಿಗ್ರಾಮ ಭಾಗದಲ್ಲಿ ಎಲ್ಲೇ ವಿಷ ಜಂತುಗಳು ಕಂಡರೂ ಮೊದಲ ಕರೆ ಹೋಗುವುದು ಐತಾಳರಿಗೇ. ಕಳೆದ ಹಲವಾರು ವರ್ಷಗಳಿಂದ ಹಾವುಗಳ ಜತೆಗೇ ಬದುಕು ಎನ್ನುವಂತೆ ಬಾಳುತ್ತಿರುವರು ಅವರು. ಹಿಡಿದ ಹಾವುಗಳನ್ನು ಎಲ್ಲಾದರೂ ಬಿಡುವುದು ವಾಡಿಕೆ. ಆದರೆ, ಸೂಕ್ತ ಜಾಗ ಸಿಗದೆ ಹೋದರೆ ತನ್ನ ಮನೆಯಲ್ಲೇ ಇಟ್ಟುಕೊಳ್ಳುವಷ್ಟು ಹಾವುಗಳ ಮೇಲೆ ಪ್ರೀತಿ ಅವರಿಗೆ. ಹಾವುಗಳು ಮಾತ್ರವಲ್ಲ, ಇತರ ಕೆಲವು ಪ್ರಾಣಿಗಳನ್ನೂ ಅವರು ಸಾಕುತ್ತಿದ್ದರು. ಅವರು ಅಕ್ರಮವಾಗಿ ಪ್ರಾಣಿಗಳನ್ನು ಸಾಕುತ್ತಾರೆ ಎಂದು ಅವರ ಮೇಲೆ ಪ್ರಕರಣ ಕೂಡಾ ದಾಖಲಾಗಿತ್ತು.

ಹೀಗೆ ಸುಧೀಂದ್ರ ಐತಾಳ್‌ ಅವರ ಹಾವುಗಳ ಸ್ನೇಹವನ್ನು, ಮನೆಯಲ್ಲೂ ಹಾವುಗಳ ವಾತಾವರಣವನ್ನು ನೋಡುತ್ತಾ ಬೆಳೆದವನು ಧೀರಜ್‌. ಹೀಗಾಗಿ ಸಣ್ಣ ವಯಸ್ಸಿನಿಂದಲೂ ಧೀರಜ್‌ ಹಾವುಗಳೆಂದರೆ ಅಷ್ಟೊಂದು ಭಯವಿಲ್ಲ.

ಕೆಲವೊಮ್ಮೆ ತಂದೆಗೆ ಹಾವು ಹಿಡಿಯುವ ಕರೆ ಬಂದಾಗ ಅವರ ಜತೆಗೆ ಹೋಗುತ್ತಿದ್ದ ಅವನಿಗೆ ಬೇರೆ ಬೇರೆ ಹಾವುಗಳನ್ನು ಹೇಗೆ ಹಿಡಿಯಬೇಕು ಎಂಬ ಬಗ್ಗೆ ಮಾಹಿತಿಯೂ ಗೊತ್ತಾಗಿದೆ.

ಇತ್ತೀಚೆಗೆ ದೇವಾಡಿಗರ ಬೆಟ್ಟು ಪ್ರದೇಶದಲ್ಲಿ ಬೃಹತ್‌ ಗಾತ್ರದ ಹೆಬ್ಬಾವು ಬಂದಿದೆ ಎಂಬ ಮಾಹಿತಿ ಬಂದಿತ್ತು. ಸುಧೀಂದ್ರ ಐತಾಳರು ಹೊರಟು ನಿಂತಾಗ ಧೀರಜ್‌ ಕೂಡಾ ಜತೆಗೆ ತೆರಳಿದ್ದ. ಹೋಗಿ ನೋಡಿದರೆ ಅದು ಸಾಮಾನ್ಯ ಗಾತ್ರದ್ದೇನೂ ಅಲ್ಲ.

ನಿಜವೆಂದರೆ ಸುಧೀಂದ್ರ ಐತಾಳು ಸಣ್ಣ ಜೀವ. ಅವರು ಹೆಬ್ಬಾವನ್ನು ಬಾಲದಿಂದ ಹಿಡಿದು ಹಿಂದಕ್ಕೆ ಎಳೆಯುತ್ತಿದ್ದರೆ ಬೃಹತ್‌ ಗಾತ್ರದ ಆ ಹಾವು ಅವರನ್ನೇ ಮುಂದಕ್ಕೆ ಎಳೆಯುತ್ತಿತ್ತು. ಇದನ್ನೆಲ್ಲ ನೋಡುತ್ತಿದ್ದ ಧೀರಜ್‌ ತಂದೆಗೆ ಸಹಾಯ ಮಾಡಲು ಮುಂದಾದ.

ಇದನ್ನೂ ಓದಿ : Viral Video: ಕೋಳಿಯ ಹಿಂಭಾಗಕ್ಕೆ ಪಟಾಕಿ ತುರುಕಿ ಸಿಡಿಸಿದರು! ಕೃತ್ಯ ಎಸಗಿದವರಿಗೆ ಶಿಕ್ಷೆಗೆ ಆಗ್ರಹ

ಸಹಾಯ ಎಂದರೆ ಅಪ್ಪನ ಜತೆಗೆ ನಿಂತು ಬಾಲದಲ್ಲಿ ಎಳೆಯುವುದಲ್ಲ. ಅಪ್ಪ ಬಾಲದಲ್ಲಿ ಎಳೆದರೆ ಧೀರಜ್‌ ಅವರ ತಲೆ ಭಾಗವನ್ನೇ ಹಿಡಿಯಲು ಹೋದ. ಆದರೆ, ಬೃಹತ್‌ ಗಾತ್ರದ ಹಾವಿನ ತೆರೆದ ಬಾಯಿಯನ್ನು ತಪ್ಪಿಸಿ ತಲೆಯನ್ನು ಹಿಡಿಯಬೇಕು ಎಂದು ಸಾಕಷ್ಟು ಅನುಭವ ಬೇಕು. ತಾನು ತಂದೆಯ ಜತೆಗೆ ಇದ್ದಾಗ ಅವರೇನು ಮಾಡುತ್ತಿದ್ದರು ಎಂಬುದನ್ನು ನೆನಪಿಸಿಕೊಂಡು ತಲೆಗೇ ಕೈ ಹಾಕಿ ಹಿಡಿದಿದ್ದಾನೆ. ಬಳಿಕ ಅಪ್ಪ-ಮಗ ಇಬ್ಬರೂ ಸೇರಿ ದೊಡ್ಡ ಹೆಬ್ಬಾವನ್ನು ಹೊರಗೆಳೆದು ತಂದಿದ್ದಾರೆ. ಹೀಗೆ ಧೈರ್ಯದಿಂದ ಹಾವು ಹಿಡಿದ ಬಾಲಕನ ಸಾಹಸ ಈಗ ಎಲ್ಲೆಡೆ ವೈರಲ್‌ ಆಗಿದೆ.

ಹಾವನ್ನು ಹಿಡಿದಾಗ ಅದು ಸಾಕಷ್ಟು ಹೋರಾಟವನ್ನು ಮಾಡುತ್ತದೆ ಹಿಡಿದವರ ಕೈ, ಮೈಯನ್ನು ಸುತ್ತಿ ಸುರುಳಿ ಹಾಕಲು ಯತ್ನಿಸುತ್ತದೆ. ಆದರೆ, ಬಾಲಕ ಅದಕ್ಕೆ ಅವಕಾಶ ಕೊಡದೆ ಹಾಗೇ ಹಿಡಿದಿರುತ್ತಾನೆ!

ಹಾವು ಹಿಡಿಯುತ್ತಿರುವ ದೃಶ್ಯ ಇಲ್ಲಿ ನೋಡಿ

Exit mobile version