Site icon Vistara News

Snake Fight : ಹೆಬ್ಬಾವನ್ನೇ ನುಂಗಲು ಹವಣಿಸಿದ ಕಾಳಿಂಗ; ಕೊನೆಗೆ ಏನಾಯ್ತು?

Python fights with King Cobra

ಮಂಗಳೂರು: ಕಾಳಿಂಗ ಸರ್ಪ (King Cobra) ಎಷ್ಟು ದೊಡ್ಡದು ಅಂತ ನೀವು ನೋಡಿದ್ದೀರಿ. ದೈತ್ಯದೇಹಿಯದು. ಹೆಬ್ಬಾವು (Indian Python) ಅಂದರೆ ದೊಡ್ಡ ಹಾವು ಎಂದೇ ಅರ್ಥ. ಸಾಮಾನ್ಯವಾಗಿ ಕಾಳಿಂಗ ಸರ್ಪ ಕೇರೆ ಹಾವುಗಳನ್ನು ತಿನ್ನುವುದು ರೂಢಿ. ಆದರೆ, ಇಲ್ಲೊಂದು ಕಾಳಿಂಗ ಸರ್ಪ ಹೆಬ್ಬಾವನ್ನೇ ಬೇಟೆಯಾಡಿ (King cobra tries to hunt python) ನುಂಗಿ ಹಾಕಲು ಮುಂದಾಗಿದೆ. ಆದರೆ, ಒಬ್ಬ ಉರಗಪ್ರೇಮಿ (Snake Charmer) ಬಂದು ಅದನ್ನು ರಕ್ಷಣೆ ಮಾಡಿದ್ದಾರೆ (Snake fight).

ಹೆಬ್ಬಾವು ಸಾಮಾನ್ಯವಾಗಿ ಏನೇ ಸಿಕ್ಕರೂ ನುಂಗಲು ಮುಂದಾಗುತ್ತದೆ. ಆದರೆ, ಇಲ್ಲಿ ಭಾರಿ ಗಾತ್ರದ ಹೆಬ್ಬಾವನ್ನೇ ಕಾಳಿಂಗ ಸರ್ಪ ಮುಂದಾಗಿದೆ. ಕೊನೆಗೆ ಕಾಳಿಂಗನೇ ಸಿಕ್ಕಾಕಿಕೊಂಡಿದೆ. ಅಂತಿಮವಾಗಿ ಎರಡೂ ಹಾವುಗಳನ್ನು ರಕ್ಷಿಸಲಾಗಿದೆ.

ಇಂಥಹುದೊಂದು ಘಟನೆ ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದಲ್ಲಿ‌. ಇಲ್ಲಿನ ಕಲ್ಲಾಜೆ ಪ್ರಾಥಮಿಕ ಶಾಲೆಯ ಬಳಿಯ ನಿವಾಸಿ ಕೆ.ಬಾಲಕೃಷ್ಣ ಗೌಡ ಎಂಬವರ ಮನೆಯ ಅಂಗಳದಲ್ಲಿ!

ಬಾಲಕೃಷ್ಣ ಗೌಡರ ಅಂಗಳದಲ್ಲಿ ಮಂಗಳವಾರ ಕಾಳಿಂಗ ಸರ್ಪವೊಂದು ಹೆಬ್ಬಾವನ್ನು ಹಿಡಿದುಕೊಂಡಿತ್ತು. ಹೆಬ್ಬಾವು ಕಾಳಿಂಗನನ್ನು ಸುತ್ತು ಹಾಕಿತ್ತು. ಅದೂ ಸಣ್ಣ ಹಾವುಗಳೇನಲ್ಲ. ಕಾಳಿಂಗ ಸರ್ಪ ಸುಮಾರು 16 ಅಡಿ ಇದ್ದರೆ, ಹೆಬ್ಬಾವು ಎಂಟು ಅಡಿ ಇತ್ತು.

ಎರಡು ಹಾವುಗಳ ಕದನವನ್ನು ನೋಡಿದ ಮನೆಯವರಿಗೆ ಏನು ಮಾಡುವುದು ಎಂದು ತೋಚಲಿಲ್ಲ. ಬಿಡಿಸಿದರೂ ಕಷ್ಟ. ಬಿಡಿಸಿದರೂ ಕಷ್ಟ ಎಂಬ ಆತಂಕ. ಒಂದು ವೇಳೆ ಕಾಳಿಂಗ ಸರ್ಪ ಮನೆಯೊಳಗೇ ಬಂದು ಬಿಟ್ಟರೆ ಎಂಬ ಭಯ.

ಅವರಿಗೆ ತಕ್ಷಣಕ್ಕೆ ನೆನಪಾಗಿದ್ದು ಹಾವು ಹಿಡಿಯುವುದರಲ್ಲಿ ನಿಸ್ಸೀಮರಾದ ಲಾಯಿಲದ ಸ್ನೇಕ್‌ ಅಶೋಕ್‌. ಕೂಡಲೇ ಅವರಿಗೆ ಫೋನ್‌ ಮಾಡಿದಾಗ ಅವರು ಬಂದರು. ಅವರ ಕೈಯಲ್ಲಿ ಒಂದು ಹಾವು ಹಿಡಿಯುವ ಕುಣಿಕೆ ಬಿಟ್ಟರೆ ಬೇರೇನೂ ಇರಲಿಲ್ಲ.

ಬಂದು ನೋಡಿದರೆ ಎರಡೂ ಹಾವುಗಳನ್ನು ನಾ ಕೊಡೆ ನೀ ಬಿಡೆ ಎನ್ನುವ ಸ್ಥಿತಿಯಲ್ಲಿದ್ದವು. ಕಾಳಿಂಗ ಸರ್ಪ ಹೆಬ್ಬಾವನ್ನು ನುಂಗಲು ಪ್ರಯತ್ನಿಸುತ್ತಿದ್ದರೆ ಹೆಬ್ಬಾವು ಅದರ ಕುತ್ತಿಗೆಯನ್ನೇ ಅಮುಕಿ ಹಿಡಿದಿತ್ತು. ಹೀಗಾಗಿ ಕಾಳಿಂಗ ಸರ್ಪಕ್ಕೂ ಸಂಕಟಕ್ಕೆ ಸಿಕ್ಕಿದಂತಾಗಿತ್ತು.

ಅಶೋಕ್‌ ಅವರು ಏನೋ ಪ್ಲಾನ್‌ ಮಾಡಿ ಕಾಳಿಂಗದ ಹಿಡಿತದಿಂದ ಹೆಬ್ಬಾವನ್ನು ಬಿಡಿಸಿದರು. ಕಾಳಿಂಗ ಓಡಲು ಶುರು ಮಾಡಿದಾಗ ಅದನ್ನು ಹಿಡಿದುಕೊಂಡರು. ಕೊನೆಗೆ ಹೇಗೋ ಅದನ್ನು ಒಂದು ಸಾಮಾನ್ಯ ಗೋಣಿ ಚೀಲದಲ್ಲಿ ತುಂಬಿಸಲಾಯಿತು. ಇತ್ತ ಹೆಬ್ಬಾವಿಗೆ ಕಾಳಿಂಗನ ಹಿಡಿತದಿಂದ ಸಣ್ಣ ಗಾಯವೂ ಆದಂತಿತ್ತು.

ಇದನ್ನೂ ಓದಿ: Operation python : ಮಲಬದ್ಧತೆಯಿಂದ ನರಳುತ್ತಿದ್ದ ಹೆಬ್ಬಾವನ್ನು ಆಪರೇಷನ್‌ ಮಾಡಿ ರಕ್ಷಿಸಿದ ಲೇಡಿ ಡಾಕ್ಟರ್ಸ್‌!

ಕೊನೆಗೆ ಎರಡೂ ಹಾವುಗಳನ್ನು ಕಾಡಿಗೆ ಬಿಡಲಾಯಿಯಿತು. ಈ ರೋಮಾಂಚಕ ಕ್ಷಣವನ್ನು ಜನರು ಭಯದಿಂದಲೇ ವಿಡಿಯೊ ಮಾಡಿಕೊಂಡಿದ್ದಾರೆ. ಜನರೆಲ್ಲರೂ ಅಷ್ಟು ದೊಡ್ಡ ಗಾತ್ರದ ಹಾವನ್ನು ಸಾಮಾನ್ಯ ಚೀಲದಲ್ಲಿ ಹಾಕಿಕೊಂಡು ಹೋದ ಅಶೋಕ್‌ ಅವರ ಧೈರ್ಯವನ್ನು ಮೆಚ್ಚಿಕೊಂಡರು. ಕೆಲವರು ಹೆಬ್ಬಾವಿಗೆ ಈಗ ಕಾಳಿಂಗ ಸರ್ಪ ಕಚ್ಚಿದ್ದರೆ ಅದು ಸಾಯುವುದಿಲ್ಲವೇ ಎಂದು ಮಾತನಾಡಿಕೊಂಡಿದ್ದರು.

Exit mobile version