Site icon Vistara News

ನೀಲಕುರಿಂಜಿ ತೋರಿಸಲು ಹೆತ್ತಮ್ಮನನ್ನು ಹೊತ್ತು ಬೆಟ್ಟ ಹತ್ತಿದ ಮಕ್ಕಳು!

neelakurinji

ಹೆತ್ತವರ ಬಯಕೆಯನ್ನು ಈಡೇರಿಸಲು ಮಕ್ಕಳು ಕೊನೆಗಾಲದಲ್ಲಿ ತೀರ್ಥಯಾತ್ರೆ ಮಾಡಿಸುವುದು ಸಾಮಾನ್ಯ. ಎದ್ದು ನಡೆಯಲೂ ಆಗದಂತಹ ಸ್ಥಿತಿಯಲ್ಲಿರುವ ಹೆತ್ತವರನ್ನು ಎತ್ತಿಕೊಂಡು ದೇವರ ದರ್ಶನ ಮಾಡಿಸುವುದು, ಕೊನೆಯಾಸೆಯನ್ನು ಪೂರೈಸಲು ಮಕ್ಕಳು ಪ್ರಯತ್ನಪಡುವುದು ಆಗೀಗೊಮ್ಮೆ ನಡೆದು ಕಣ್ಣಂಚು ಒದ್ದೆ ಮಾಡಿಸುತ್ತದೆ. ದೇವರ ಸಾನಿಧ್ಯ ಎಂಬುದು ಬಹುತೇಕ ಹಿರಿಯರಲ್ಲಿ ತೃಪ್ತಿ ಮೂಡಿಸುವ ಭಾವನಾತ್ಮಕ ಗಳಿಗೆಯಾಗಿರುವುದರಿಂದ ಮಕ್ಕಳು ಹೆತ್ತವರ ಬಯಕೆ ತೀರಿಸಿ ತಾವೂ ತೃಪ್ತಿ ಹೊಂದುವುದು ನಿಜವೇ. ಆದರೆ ಇಲ್ಲೊಂದು, ಅದಕ್ಕೂ ಮೀರಿದ ಡಿಫರೆಂಟ್‌ ಕತೆಯಿದೆ. ಇಲ್ಲಿ ಮಕ್ಕಳು ತಮ್ಮ ತಾಯಿಯನ್ನು ಹೊತ್ತುಕೊಂಡು ಹೋಗಿ ನೀಲಕುರಿಂಜಿ ತೋರಿಸಿದ್ದಾರೆ!

ಹೌದು. ಇಂಥದ್ದೊಂದು ಘಟನೆ ಸುದ್ದಿಯಾಗಿ ಈಗ ಎಲ್ಲರ ಕಣ್ಣಂಚು ಒದ್ದೆ ಮಾಡಿಸುತ್ತಿದೆ. ೧೨ ವರ್ಷಕ್ಕೊಮ್ಮೆ ಅರಳುವ ನೀಲ ಕುರಿಂಜಿಯನ್ನು ನೋಡಲು ಆಸೆಪಟ್ಟ ತಮ್ಮ ೮೭ರ ಹರೆಯದ, ಹತ್ತು ಹೆಜ್ಜೆ ನಡೆಯಲು ಕಷ್ಟಪಡುವ ತಾಯಿಯನ್ನು ಹೊತ್ತುಕೊಂಡು ಹೋಗಿ ಕುರಿಂಜಿಯಿಂದಾವೃತವಾದ ಬೆಟ್ಟ್ವನ್ನು ತೋರಿಸಿದ್ದಾರೆ. ಕುರಿಂಜಿಯನ್ನು ನೋಡಿದ್ದಲ್ಲದೆ, ಮಕ್ಕಳಿಂದ ಸಿಕ್ಕಿದ ಈ ಪ್ರೀತಿಯನ್ನು ನೋಡಿ ಕಣ್ತುಂಬಿಕೊಂಡ ಹಿರಿಯ ಜೀವದಲ್ಲಿ ಧನ್ಯತೆಯ ಭಾವ!

ಇದು ನಮ್ಮ ಚಿಕ್ಕಮಗಳೂರಿನ ನೀಲಕುರಿಂಜಿಯ ಕಥೆಯಲ್ಲ. ಕೊಟ್ಟಾಯಂ ಜಿಲ್ಲೆಯ ಮುತ್ತುಚಿರದ ನಿವಾಸಿಯಾಗಿರುವ ೮೭ರ ಹರೆಯದ ಎಲಿಕುಟ್ಟಿ ಪೌಲ್‌ ಎಂಬಾಕೆ ವಯಸ್ಸಿನ ಕಾರಣದಿಂದ ಹಾಸಿಗೆ ಹಿಡಿದಿದ್ದರು. ಆಕೆಗೆ ಇಡುಕ್ಕಿ ಜಿಲ್ಲೆಯ ಬೆಟ್ಟಗಳಲ್ಲಿ ನೀಲಕುರಿಂಜಿ ಅರಳಿದ್ದು ತಿಳಿದು ನೋಡಬೇಕೆಂಬ ಬಯಕೆಯಾಗಿತ್ತು. ತನ್ನ ಮಕ್ಕಳಲ್ಲೊಬ್ಬರಿಗೆ ತನ್ನ ಈ ಆಸೆಯನ್ನು ವ್ಯಕ್ತಪಡಿಸಿದ್ದರೂ ಕೂಡಾ.

ಬಹುಶಃ ಆಕೆಯೂ ಕೂಡಾ, ತನ್ನ ಈ ಕನಸು ನೆರವೇರೀತು ಎಂದು ಅಂದುಕೊಂಡಿರಲಿಕ್ಕಿಲ್ಲವೇನೋ. ಆದರೆ, ತನ್ನಮ್ಮನಿಗೆ ನೀಲಕುರಿಂಜಿ ನೋಡುವ ಬಯಕೆಯಿಂದೆ ಎಂದು ತಿಳಿದದ್ದೇ ತಡ, ಮಕ್ಕಳು ಹಿಂದೆ ಮುಂದೆ ನೋಡದೆ, ೧೦೦ ಕಿಮೀ ದೂರದಲ್ಲಿ ಅರಳಿದ್ದ ಹೂವಿನ ರಾಶಿಯನ್ನು ತೋರಿಸಲು ಹೊರಟಿದ್ದಾರೆ. ಆಕೆಯ ಮಕ್ಕಳಾದ ರೋಜನ್‌ ಹಾಗೂ ಸತ್ಯನ್‌ ಇಬ್ಬರೂ ಜೀಪಿನಲ್ಲಿ ೧೦೦ ಕಿಮೀ ದೂರದಲ್ಲಿದ್ದ ಕುರಿಂಜಿ ಸೊಬಗನ್ನು ಆಕೆಯ ಕಣ್ತುಂಬಲು ಮುನ್ನಾರ್‌ನ ಕಲ್ಲಿಪರಾ ಹಿಲ್ಸ್‌ಗೆ ಕರೆದುಕೊಂಡು ಹೋಗಿದ್ದಾರೆ!

ಆದರೆ, ಅಲ್ಲಿಗೆ ತಲುಪಿದ ಮೇಲಷ್ಟೇ ಈ ಇಬ್ಬರು ಮಕ್ಕಳಿಗೆ ಬೆಟ್ಟದ ತುದಿಗೆ ಜೀಪಿನಲ್ಲಿ ಹೋಗಲು ಸಾಧ್ಯವಿಲ್ಲ, ನಡೆದೇ ಸಾಗಬೇಕು ಎಂಬ ಅರಿವಾಗಿದೆ. ಕುರಿಂಜಿ ನೋಡಬೇಕೆಂದರೆ, ಬೆಟ್ಟವೇರಲೇಬೇಕು ಎಂದು ಅರಿವಾದ ಮಕ್ಕಳಿಬ್ಬರೂ, ಹೆಚ್ಚು ಯೋಚನೆ ಮಾಡದೆ, ಅಮ್ಮನ ಬಯಕೆಯನ್ನು ಈಡೇರಿಸಲು ಬೆಟ್ಟದ ಮೇಲೆ ಎತ್ತಿಕೊಂಡು ಸಾಗಿದ್ದಾರೆ. ಸುಮಾರು ೧.೫ ಕಿಮೀಗಳಷ್ಟು ಸಾಗಬೇಕಿದ್ದ ಬೆಟ್ಟದ ಹಾದಿಯನ್ನು, ಮಕ್ಕಳು ಅಮ್ಮನನ್ನು ಎತ್ತಿಕೊಂಡು ಸಾಗಿದ್ದು ಹಲವರನ್ನು ಭಾವುಕರನ್ನಾಗಿಸಿದೆ. ಆ ಹೆತ್ತಮ್ಮನನ್ನೂ!

ಇದನ್ನೂ ಓದಿ | ನೀಲಕುರಿಂಜಿ | ಬೆಟ್ಟ ಹೊದ್ದ ನೀಲಿ ಹೊದಿಕೆ: ಹೊಸಕಬೇಡಿ, ಆನಂದಿಸಿ

ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ವ್ಯಾಪಕವಾಗಿ ಅರಳಿದ್ದ ಈ ಹೂವು, ಈ ವರ್ಷ ಚಿಕ್ಕಮಗಳೂರಿನಲ್ಲಿ ಅರಳಿ, ಸಾವಿರಾರು ಸಂಖ್ಯೆಯಲ್ಲಿ ಪ್ರತಿದಿನ ಪ್ರವಾಸಿಗರನ್ನು ತನ್ನತ್ತ ಸೆಳೆದಿತ್ತು. ಈಗ ಕೇರಳದ ಇಡುಕ್ಕಿ ಜಿಲ್ಲೆಯಲ್ಲೂ, ಇದು ಅರಳಿ ಜನಮನ ಸೆಳೆಯುತ್ತಿದೆ.

ಕುರಿಂಜಿ ಹೂವಿನಲ್ಲಿ ಸಾಕಷ್ಟು ವಿಧಗಳಿವೆ. ಎಲ್ಲ ಹೂವುಗಳೂ ೧೨ ವರ್ಷಕ್ಕೊಮ್ಮೆ ಅರಳುವುದಿಲ್ಲ. ಇದರಲ್ಲಿ ವರ್ಷಕ್ಕೊಮ್ಮೆ ಅರಳುವ ಕುರಿಂಜಿಯಿಂದ ಹಿಡಿದು ೧೬ ವರ್ಷಕ್ಕೊಮ್ಮೆ ಅರಳುವ ಪ್ರಬೇಧಗಳವರೆಗೆ ಸುಮಾರು ೪೬ ಪ್ರಭೇದಗಳಿವೆ. ನೀಲಿ ನೇರಳೆ ಬಣ್ಣದ ಈ ಕುರಿಂಜಿ ಹೂವು ಪ್ರಮುಖವಾಗಿ ದಕ್ಷಿಣ ಭಾರತದಲ್ಲಷ್ಟೇ ಬೆಳೆಯುವ ಅಪರೂಪದ ಹೂವು. ದಕ್ಷಿಣ ಭಾರತದಲ್ಲಿ ಕೇರಳ, ಕರ್ನಾಟಕ ಹಾಗೂ ತಮಿಳುನಾಡಿನ ಕೆಲ ಪ್ರದೇಶಗಳಲ್ಲಿ ಮುಖ್ಯವಾಗಿ ಶೋಲಾ ಕಾಡುಗಳಿರುವ ಪಶ್ಚಿಮ ಘಟ್ಟಗಳು ಹಾಗೂ ನೀಲಗಿರಿ ಬೆಟ್ಟದ ಸಾಲುಗಳಲ್ಲಿ ಕಂಡುಬರುವ ಈ ಅಪರೂಪದ ಕುರಿಂಜಿ ಹೂಗಳು ಹೆಚ್ಚಾಗಿ ಬೆಳೆಯುತ್ತವೆ. ಅಣ್ಣಾಮಲೈ ಬೆಟ್ಟಗಳು, ನೀಲಗಿರಿ ಬೆಟ್ಟಗಳು, ಪಳನಿ ಬೆಟ್ಟಗಳು, ಬಾಬಾಬುಡನ್‌ಗಿರಿ, ಕುದುರೇಮುಖ, ಬಿಳಿಗಿರಿರಂಗನ ಬೆಟ್ಟಗಳು, ಕುದುರೆಮುಖ ಸೇರಿದಂತೆ ದಕ್ಷಿಣ ಭಾರತದ ಹಲವು ಪರ್ವತ ಪ್ರದೇಶಗಳಲ್ಲಿ ಇದು ಕೆಲವು ವರ್ಷಗಳಿಗೊಮ್ಮೆ ದರ್ಶನ ನೀಡುತ್ತಿದೆ. ಪಿಂಕ್‌ ಬಣ್ಣದ, ತೆಳು ನೀಲಿ ಬಣ್ಣದ, ಗಾಢ ನೀಲಿಯ, ನೇರಳೆಯ ಹೀಗೆ ಸಾಕಷ್ಟು ವಿಧ ಹಾಗೂ ಬಣ್ಣಗಳಲ್ಲೂ ಇವು ಕಾಣಸಿಗುತ್ತವೆ.

ಇದನ್ನೂ ಓದಿ | Winter tour | ಚಳಿಗಾಲದಲ್ಲಿ ಈ ಜಾಗಗಳಿಗೆ ಹೋದರೆ ಸ್ವರ್ಗವೇ ಕೈಗೆ ಎಟುಕಿದಂತೆ!

Exit mobile version