ಮುಂಬೈ: ಜುಲೈ 10ರಂದು ಮಹಾರಾಷ್ಟ್ರದ ನವಿ ಮುಂಬೈನ ಪೊಲೀಸರಿಗೆ ಫೋನ್ ಕರೆಯೊಂದು ಬಂದಿದೆ. ಅದರಲ್ಲಿ ಉರಾನ್ ತಾಲೂಕಿನ ಪಿರ್ಕಾನ್-ಸರ್ದೇಗಾಂವ್ ರಸ್ತೆಯಲ್ಲಿ ಮಹಿಳೆಯ ಶವವೊಂದು ಬಿದ್ದಿರುವುದಾಗಿ ದಾರಿಹೋಕರು ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ತಕ್ಷಣ ಸ್ಥಳಕ್ಕೆ ಬಂದಿದ್ದಾರೆ. ಆದರೆ ಮಹಿಳೆಯ ಶವದ ಬಳಿ ಯಾವೊಂದು ಸಾಕ್ಷಿಯೂ ಪೊಲೀಸರಿಗೆ ಸಿಕ್ಕಿರಲಿಲ್ಲ. ಅಲ್ಲಿ ಸಿಕ್ಕ ಒಂದೇ ಒಂದು ಕನ್ನಡಕದ ಬಾಕ್ಸ್‌ನಿಂದಾಗಿ ಪೊಲೀಸರು ಎರಡು ಕೊಲೆ ಪ್ರಕರಣಗಳನ್ನು ಬೇಧಿಸಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral News) ಆಗಿದೆ.
ರಸ್ತೆ ಬದಿ ಇದ್ದ ಶವದ ಮೇಲಿದ್ದ ಎಲ್ಲ ಆಭರಣವನ್ನು ಕೊಲೆಗಾರ ಕೊಂಡೊಯ್ದಿದ್ದ. ಎರಡು ಬುಲೆಟ್ ಅನ್ನು ತಲೆಗೆ ಹೊಡೆದಿದ್ದರೂ, ಮತ್ತೆ ಶವದ ಕುತ್ತಿಗೆಯನ್ನೂ ಕೊಯ್ದಿದ್ದ. ಶವದ ಬಳಿ ಯಾವುದೇ ಸಾಕ್ಷಿಗಳನ್ನು ಉಳಿಸದಂತೆ ಎಲ್ಲವನ್ನೂ ಹೊತ್ತೊಯ್ದಿದ್ದ. ಎಲ್ಲ ಕಡೆ ಸೂಕ್ಷ್ಮವಾಗಿ ಪರಿಶೀಲನೆ ಮಾಡಿದ ಪೊಲೀಸರಿಗೆ ಅಲ್ಲಿ ಒಂದು ಕನ್ನಡಕದ ಬಾಕ್ಸ್ ಸಿಕ್ಕಿದೆ. ಆ ಬಾಕ್ಸ್‌ನಲ್ಲಿ ಡೊಂಬಿವಲಿಯ ಕನ್ನಡಕದ ಅಂಗಡಿಯೊಂದರ ಮಾಹಿತಿ ಸಿಕ್ಕಿದ್ದು, ಪೊಲೀಸರು ಸೀದಾ ಅಲ್ಲಿಗೆ ಹೋಗಿದ್ದಾರೆ. ಅಲ್ಲಿ ಶವದ ಫೋಟೋ ತೋರಿಸಿದಾಗ ಅಂಗಡಿಯವರು ಆ ಮಹಿಳೆ ತಮಗೆ ಗೊತ್ತೆಂದು ಹೇಳಿದ್ದಾರೆ. ಆ ಮಹಿಳೆಯ ಹೆಸರು ಭಾರತಿ ಎಂದೂ ಆಕೆ ತಮ್ಮ ಗ್ರಾಹಕರೆಂದು ಅವರು ತಿಳಿಸಿದ್ದಾರೆ. ಅಂಗಡಿಯಲ್ಲಿ ಪೊಲೀಸರು ಆಕೆಯ ವಿಳಾಸ ಮತ್ತು ಫೋನ್ ನಂಬರ್ ಅನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Viral Video : ಎಲ್ಲರ ಎದುರೇ ಯುವತಿಯ ಕೆನ್ನೆಗೆ ಬಾರಿಸಿದ ಸರ್ಕಾರಿ ಅಧಿಕಾರಿ!
ಅಲ್ಲಿಂದ ಡೊಂಬಿವಲಿಯ ಭಾರತಿ ಮನೆಗೆ ಹೋಗಿ ಆಕೆಯ ಅಕ್ಕ ಪಕ್ಕದ ಮನೆಯವರನ್ನು ವಿಚಾರಣೆ ಮಾಡಲಾಗಿದೆ. ಭಾರತಿ ಆಲಿಬಗ್‌ನ ಪೊಯ್ನಾಡಿನಲ್ಲಿರುವ ತನ್ನ ಮಗಳು ಪ್ರೀತಿಯ ಮನೆಗೆ ಹೋಗುವುದಾಗಿ ಹೇಳಿ ಹೋಗಿದ್ದಾಗಿ ಪಕ್ಕದ ಮನೆಯವರು ತಿಳಿಸಿದ್ದಾರೆ. ಹಾಗೆಯೇ ಆಕೆಯನ್ನು ಕರೆದುಕೊಂಡು ಹೋಗಲು ಆಕೆಯ ಅಳಿಯ ಮಯುರೇಶ್ ಅಜೀತ್ ಗಂಭೀರ್ ಬಂದಿದ್ದಾಗಿಯೂ ಅವರು ತಿಳಿಸಿದ್ದಾರೆ.
ಮಯುರೇಶ್ ಹಾಗೂ ಆತನ ಮೂವರು ಸ್ನೇಹಿತರ ಮೇಲೆ ಪೊಲೀಸರಿಗೆ ಅನುಮಾನ ಬಂದಿದ್ದು, ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾರಂಭಿಸಿದ್ದಾರೆ. ಆಗ ಮಯುರೇಶ್ ತನ್ನ ಅತ್ತೆಯನ್ನು ತಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಅತ್ತೆ ತನ್ನ ಮಗಳನ್ನು ನೋಡಬೇಕೆಂದು ಪದೇಪದೆ ಹಠ ಮಾಡುತ್ತಿದ್ದರಿಂದಾಗಿ ಆಕೆಯನ್ನು ಕೊಲೆ ಮಾಡಿ, ರಸ್ತೆ ಬದಿ ಹೆಣವನ್ನು ಎಸೆದಿದ್ದಾಗಿ ಆತ ತಿಳಿಸಿದ್ದಾನೆ.
ಇದನ್ನೂ ಓದಿ: Viral Video : ವಂದೇ ಭಾರತ್ ರೈಲಿನ ಶೌಚಾಲಯದಲ್ಲಿ ಬೀಡಿಯ ಹೊಗೆ; ನಿಂತೇ ಹೋಯ್ತು ರೈಲು!
ಆಗ ಪೊಲೀಸರಿಗೆ ಮತ್ತೊಂದು ಅನುಮಾನ ಶುರುವಾಗಿದೆ. ಮಗಳನ್ನು ಭೇಟಿ ಮಾಡುವುದಕ್ಕೆ ಯಾಕಾಗಿ ಆತ ಅನುಮತಿ ಕೊಡುತ್ತಿರಲಿಲ್ಲ ಎಂದು ಆತನನ್ನು ಪ್ರಶ್ನಿಸಲಾಗಿದೆ. ಆಗ ಆತ ಪ್ರೀತಿಯನ್ನು 2022ರ ಆಗಸ್ಟ್‌ನಲ್ಲೇ ಲಾಡ್ಜ್ ಒಂದರಲ್ಲಿ ಕೊಲೆ ಮಾಡಿ ಹೆಣವನ್ನು ಬೇರೆಡೆ ಎಸೆದಿದ್ದಾಗಿ ಹೇಳಿದ್ದಾನೆ. ಆ ವಿಚಾರ ಯಾರಿಗೂ ಗೊತ್ತಿರಲಿಲ್ಲವಾದ್ದರಿಂದ ಭಾರತಿಗೆ ಪ್ರೀತಿಯನ್ನು ಭೇಟಿ ಮಾಡಿಸಲು ತನ್ನಿಂದ ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದ್ದಾನೆ.
ಪ್ರೀತಿಯ ಕೊಲೆಗೆ ಕಾರಣ ಕೇಳಿದಾಗ ಆತ ಪ್ರೀತಿ ಕೈಗೆ ಈ ಹಿಂದೆ 9 ಲಕ್ಷ ರೂ. ಹಣ ಕೊಟ್ಟಿದ್ದಾಗಿ ತಿಳಿಸಿದ್ದಾನೆ. ಪ್ರೀತಿ ತನ್ನ ಎರಡನೇ ಹೆಂಡತಿಯಾಗಿದ್ದು, ಬೇರೊಂದು ಕೊಲೆ ಪ್ರಕರಣದಲ್ಲಿ ಆತ 2014ರಲ್ಲಿ ಜೈಲಿಗೆ ಹೋಗಿದ್ದಾನೆ 2022ರಲ್ಲಿ ಜೈಲಿನಿಂದ ಹೊರಬಂದ ಆತ ಪ್ರೀತಿ ಬಳಿ ಹಣ ವಾಪಸು ಕೊಡಲು ಕೇಳಿದ್ದಾನೆ. ಅದಕ್ಕೆ ಆಕೆ ಒಪ್ಪದ ಕಾರಣ ಆಕೆಯ ಕೊಲೆಯನ್ನು ಮಾಡಿದ್ದಾಗಿ ಹೇಳಿಕೊಂಡಿದ್ದಾನೆ.
45 ವರ್ಷದ ಮಯುರೇಶ್ ಈ ಹಿಂದೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಅಲ್ಲಿಂದ ಮರಳಿ ಬಂದ ಮೇಲೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಎರಡೆರೆಡು ಕೊಲೆ ಮಾಡಿರುವ ಮಯುರೇಶ್ ವಿರುದ್ಧ ಇದೀಗ ಮತ್ತೆ ಕೊಲೆ ಪ್ರಕರಣ ದಾಖಲಾಗಿದೆ.