Site icon Vistara News

Taiwan Earthquake: ಭೂಕಂಪದಿಂದ ತೈವಾನ್‌ ಗಡಗಡ; 4 ಸಾವು; ನಡುಕ ಹುಟ್ಟಿಸುವ ವಿಡಿಯೋಗಳು ಇಲ್ಲಿವೆ

taiwan earthquake

ತೈಪೆ: ತೈವಾನ್‌ನಲ್ಲಿ ಇಂದು ಸಂಭವಿಸಿದ ಭಾರಿ ಭೂಕಂಪದಲ್ಲಿ (Taiwan Earthquake) ನಾಲ್ವರು ಸಾವನ್ನಪ್ಪಿದ್ದಾರೆ. ಕನಿಷ್ಠ 60 ಮಂದಿ ಗಾಯಗೊಂಡಿದ್ದಾರೆ. ಜಪಾನ್ (Japan) ಮತ್ತು ಫಿಲಿಪೈನ್ಸ್‌ನಲ್ಲಿ (Philippines) ಸುನಾಮಿ (Tsunami) ಎಚ್ಚರಿಕೆ ನೀಡಲಾಗಿದೆ. ಸೋಶಿಯಲ್‌ ಮೀಡಿಯಾಗಳಲ್ಲಿ ಈ ಭೂಕಂಪದ ಹಲವಾರು ವಿಡಿಯೋಗಳು ಹರಿದಾಡುತ್ತಿದ್ದು, ಅದರಲ್ಲಿ ಕಟ್ಟಡಗಳು ಅಲುಗಾಡುತ್ತಿರುವುದು, ಸೇತುವೆಗಳು ತೂಗಾಡುತ್ತಿರುವುದು ಮತ್ತು ಜನ ರಕ್ಷಣೆಗಾಗಿ ಪರದಾಡುತ್ತಿರುವುದನ್ನು ಕಾಣಬಹುದಾಗಿದೆ.

ರಿಕ್ಟರ್ ಮಾಪಕದಲ್ಲಿ 7.4ರ ತೀವ್ರತೆಯ ಭೂಕಂಪವು ಪೂರ್ವ ತೈಪೆಯನ್ನು ಅಲುಗಾಡಿಸಿತು. ಇದು 25 ವರ್ಷಗಳಲ್ಲೇ ದ್ವೀಪವನ್ನು ಅಪ್ಪಳಿಸಿರುವ ಪ್ರಬಲ ಭೂಕಂಪವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕಂಪನಗಳ ಬಗ್ಗೆ ಅಧಿಕಾರಿಗಳು ಎಚ್ಚರಿಸಿದ್ದಾರೆ. 1999ರಲ್ಲಿ ರಾಷ್ಟ್ರವನ್ನು ಅಪ್ಪಳಿಸಿ 2,400 ಜನರನ್ನು ಕೊಂದ 7.6 ತೀವ್ರತೆಯ ಭೂಕಂಪದ ನಂತರ ಇದು ಪ್ರಬಲವಾದ ಭೂಕಂಪವಾಗಿದೆ.

ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿರುವ ವೀಡಿಯೊಗಳು ಭೂಕಂಪದಿಂದ ಹಲವಾರು ಕಟ್ಟಡಗಳು ತೂಗಾಡುತ್ತಿರುವುದನ್ನು ತೋರಿಸಿವೆ. ಭಾರೀ ಭೂಕಂಪದ ಕಾರಣ ಸೇತುವೆಯು ತೂಗಾಡುತ್ತಿರುವಂತೆ ಕಾಣುತ್ತಿದ್ದು, ಅದರ ಮೇಲೆ ವಾಹನಗಳಲ್ಲಿ ಓಡಾಡುತ್ತಿರುವ ಜನ ಕೂಡ ತೂರಾಡುತ್ತಿರುವುದು ಕಂಡುಬರುತ್ತಿದೆ. ಭೂಕಂಪದ ನಂತರ ಹುವಾಲಿಯನ್ ಮತ್ತು ಇತರೆಡೆಗಳಲ್ಲಿ ಹಲವು ಬಹುಮಹಡಿ ಕಟ್ಟಡಗಳು ವಾಲಿದವು. ನ್ಯೂ ತೈಪೆ ನಗರದಲ್ಲಿನ ಒಂದು ಗೋದಾಮು ನೆಲಸಮವಾಗಿದೆ.

ಸತ್ತ ನಾಲ್ವರಲ್ಲಿ, ತೈಪೆ ನಗರವನ್ನು ಸುತ್ತುವರೆದಿರುವ ಬೆಟ್ಟಗಳ ದಾರಿಯಲ್ಲಿ ಬೆಳಿಗ್ಗೆ ಪಾದಯಾತ್ರೆಗೆ ಹೊರಟಿದ್ದ ಏಳು ಜನರ ಗುಂಪಿನಲ್ಲಿ ಮೂವರು ಸೇರಿದ್ದಾರೆ. ಭೂಕುಸಿತದ ಪರಿಣಾಮ ಬೃಹತ್ ಬಂಡೆಗಳು ಉರುಳಿ ಅವರು ಸಾವನ್ನಪ್ಪಿದ್ದಾರೆ. ಸತ್ತ ನಾಲ್ಕನೇ ವ್ಯಕ್ತಿ ಟ್ರಕ್ ಚಾಲಕ. ಅವರು ಸುರಂಗದ ಸಮೀಪದಲ್ಲಿದ್ದಾಗ ಅವರ ವಾಹನ ಭೂಕುಸಿತದಿಂದ ಸುರಂಗಕ್ಕೆ ಡಿಕ್ಕಿ ಹೊಡೆದಿದೆ.

ಬುಲ್ಡೋಜರ್‌ಗಳು ರಸ್ತೆಗಳ ಉದ್ದಕ್ಕೂ ಬಂಡೆಗಳನ್ನು ತೆರವುಗೊಳಿಸುವುದನ್ನು ಸ್ಥಳೀಯ ತೈವಾನೀಸ್ ಟಿವಿ ಚಾನೆಲ್‌ಗಳು ತೋರಿಸಿವೆ. ಸುಮಾರು 1,00,000 ಜನರಿರುವ ಕರಾವಳಿ ನಗರವಾದ ತೈಪೆ ಭೂಕುಸಿತದಿಂದ ತತ್ತರಿಸಿತು. ತೈವಾನ್ ಅಧ್ಯಕ್ಷ ತ್ಸೈ ಇಂಗ್-ವೆನ್ ಸ್ಥಳೀಯ ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳು ಪರಸ್ಪರ ಸಮನ್ವಯ ಸಾಧಿಸಲು ಕರೆ ನೀಡಿದರು. ಸೇನೆಯು ಸಹ ನೆರವು ನೀಡಲಿದೆ ಎಂದು ಹೇಳಿದರು.

ತೈವಾನ್, ಜಪಾನ್ ಮತ್ತು ಫಿಲಿಪೈನ್ಸ್‌ನಲ್ಲಿ, ಅಧಿಕಾರಿಗಳು ಆರಂಭದಲ್ಲಿ ಸುನಾಮಿ ಎಚ್ಚರಿಕೆಯನ್ನು ನೀಡಿದರು. ಆದರೆ ಸುಮಾರು 10 ಗಂಟೆಗೆ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಬೆದರಿಕೆಯನ್ನು ದಾಟಿ ಹೋಗಿದೆ ಎಂದರು. ರಾಜಧಾನಿಯಲ್ಲಿ ಮೆಟ್ರೋ ಸಂಚಾರ ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಆದರೆ ಒಂದು ಗಂಟೆಯೊಳಗೆ ಪುನರಾರಂಭವಾಯಿತು. ನಿವಾಸಿಗಳು ಅನಿಲ ಸೋರಿಕೆಯನ್ನು ಪರಿಶೀಲಿಸಲು ಎಚ್ಚರಿಕೆ ಪಡೆದರು.

ತೈವಾನ್‌ ದ್ವೀಪವು ಎರಡು ಟೆಕ್ಟೋನಿಕ್ ಪ್ಲೇಟ್‌ಗಳ ನಡುವೆ ಇರುವುದರಿಂದ ತೈವಾನ್ ನಿಯಮಿತವಾಗಿ ಭೂಕಂಪಗಳಿಗೆ ಒಳಗಾಗುತ್ತದೆ. ಆದರೆ ಹತ್ತಿರದ ಜಪಾನ್ ಪ್ರತಿ ವರ್ಷ ಸುಮಾರು 1,500 ಕಂಪನಗಳನ್ನು ಅನುಭವಿಸುತ್ತದೆ.

ಇದನ್ನೂ ಓದಿ: Taiwan Earthquake: ತೈವಾನ್‌ನಲ್ಲಿ ಪ್ರಬಲ ಭೂಕಂಪ, ಸುನಾಮಿ ಅಲರ್ಟ್‌

Exit mobile version