Site icon Vistara News

Viral video | ಜನಗಣಮನವನ್ನು ಹೀಗೂ ಕಲಿಸಬಹುದು ಎಂದು ತೋರಿಸಿಕೊಟ್ಟ ಶಿಕ್ಷಕ ಈಗ ಸ್ಟಾರ್!

jana gana mana

ಕೆಲವು ಮಂದಿ ವಿದ್ಯೆ ಕಲಿಸಲು ಹೇಳಿ ಮಾಡಿಸಿದಂತಿರುತ್ತಾರೆ. ಅವರಲ್ಲಿ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿ ಹೇಳುವ ಅಪರೂಪದ ತಾಕತ್ತಿರುತ್ತದೆ. ತಮ್ಮಲ್ಲಿರುವ ಜ್ಞಾನಭಂಡಾರವನ್ನು ಮತ್ತೊಬ್ಬರಿಗೆ ದಾಟಿಸುವ ಇವರ ಕ್ರಮ ಮನಮುಟ್ಟುವಂತಿರುತ್ತದೆ. ಅದಕ್ಕೇ ಕೆಲವು ಶಿಕ್ಷಕರು ಜೀವನಪೂರ್ತಿ ನೆನಪಿನಲ್ಲಿರುತ್ತಾರೆ. ನಮ್ಮ ದೇಶ, ಭಾಷೆ, ನೆಲ, ಜಲದ ಬಗ್ಗೆ ಎಳವೆಯಲ್ಲಿಯೇ ಮಕ್ಕಳಲ್ಲಿ ಪ್ರೀತಿಯ ಹಣತೆ ಹಚ್ಚುವಲ್ಲಿ ಶಿಕ್ಷಕರ ಪಾಲು ಮಹತ್ವದ್ದು. ಅಂತಹ ಶಿಕ್ಷಕರು ಮಕ್ಕಳಿಗೆ ಎಳವೆಯಲ್ಲಿಯೇ ಸಿಕ್ಕರೆ ಆ ಮಕ್ಕಳ ಬಾಳು ಬೆಳಗಿದಂತೆ!

ಇಲ್ಲೂ ಅಂಥ ಒಬ್ಬ ಶಿಕ್ಷಕನ ಪಾಠ ವೈರಲ್‌ ಆಗಿದೆ. ಇಲ್ಲಿ ಶಿಕ್ಷಕನೊಬ್ಬ ನಮ್ಮ ರಾಷ್ಟ್ರಗೀತೆ ಜನಗಣಮನವನ್ನು ಮಕ್ಕಳಿಗೆ ಹೇಳಿಕೊಡುವ ರೀತಿಯಿಂದಲೇ ಅದು ಜನಮನ ಗೆದ್ದಿದೆ. ಹೀಗಾಗಿ ಅದು ಮಿಲಿಯಗಟ್ಟಲೆ ವೀಕ್ಷಣೆ ಪಡೆದು ಜನರಿಂದ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಳ್ಳುತ್ತಿದೆ. ಆ ಮೂಲಕ ಈ ಶಿಕ್ಷಕ ಈಗ ಇಂಟರ್ನೆಟ್‌ ಜಗತ್ತಿನಲ್ಲಿ ಸ್ಟಾರ್‌ ಆಗಿದ್ದಾರೆ.

ಶಾಲೆಯಲ್ಲಿ ಪ್ರತಿದಿನವೂ ಜನಗಣಮನ ಹಾಡುವುದು ಗೊತ್ತೇ ಇದೆ. ಎಳವೆಯಲ್ಲಿಯೇ ಪ್ರತಿ ಮಗುವಿಗೂ ಇದು ಬಾಯಿಪಾಠವಾಗಿರುತ್ತದೆ. ದೇಶದ ಪ್ರತಿಯೊಬ್ಬರೂ, ಈ ಗೀತೆಗೆ ಕೊಡಬೇಕಾದ ಗೌರವದ ಬಗ್ಗೆ ತಿಳಿದುಕೊಂಡು ಹಾಗೆ ನಡೆದುಕೊಳ್ಳುತ್ತೇವೆ ಕೂಡಾ. ಆದರೆ, ಎಷ್ಟೋ ಸಲ, ಇವೆಲ್ಲವುಗಳ ನಡುವೆ ನಿಜವಾಗಿ ಗೊತ್ತಿರಬೇಕಿರುವ ಈ ಗೀತೆಯ ಅರ್ಥ ತಿಳಿಯುವ ಪ್ರಯತ್ನವನ್ನೂ ಮಾಡಿರುವುದಿಲ್ಲ. ದೇಶದ ಯುವಜನಾಂಗದಲ್ಲಿ ಬಹುತೇಕರಿಗೆ ಇಂದಿಗೂ ಇದರ ಅರ್ಥ ಗೊತ್ತಿಲ್ಲ. ಶಾಲೆಯಲ್ಲಿ ಕಲಿತಿದ್ದರೂ, ಆಯಾ ಸಂದರ್ಭಕ್ಕೆ ಅದನ್ನು ತಿಳಿದುಕೊಂಡು ಅಲ್ಲೇ ಮರೆತುಬಿಟ್ಟಿರುವ ಸಾಧ್ಯತೆಗಳು ಹೆಚ್ಚು. ಆದರೆ, ಎಳವೆಯಲ್ಲಿಯೇ ಸರಿಯಾದ ಕ್ರಮದಲ್ಲಿ ಮಕ್ಕಳಿಗೆ ಹೇಗೆ ತಲುಪಿಸಬೇಕೆಂಬುದು ಶಿಕ್ಷಕರಿಗೆ ಗೊತ್ತಿದ್ದರೆ, ಇವೆಲ್ಲ ಮರೆತುಹೋಗುವ ಸಂದರ್ಭವೇ ಇರುವುದಿಲ್ಲ. ಜೀವನಪರ್ಯಂತ ನೆನಪಿರುತ್ತದೆ. ಅದಕ್ಕಾಗಿಯೇ ಹೇಗೆ ಕಲಿಸಬೇಕು ಎಂಬುದೂ ಪ್ರಾಮುಖ್ಯತೆ ಪಡೆಯುತ್ತದೆ.

ಈ ಶಿಕ್ಷಕ ಮಕ್ಕಳಿಗೆ ಜನಗಣಮನ ಹೇಳಿಕೊಡುವ ರೀತಿಯೇ ಭಿನ್ನವಾಗಿದೆ. ಭಾರತ ಭೂಪಟದ ಎದುರಿಗೆ ನಿಂತು ಈ ಗೀತೆಯಲ್ಲಿ ಬರುವ ʻಪಂಜಾಬ ಸಿಂಧು ಗುಜರಾತ ಮರಾಠಾ, ದ್ರಾವಿಡ ಉತ್ಕಲ, ವಂಗಾ, ವಿಂಧ್ಯ ಹಿಮಾಚಲ ಯಮುನಾ ಗಂಗಾʼ ಎಂಬ ಸಾಲನ್ನು ಉಲ್ಲೇಖಿಸುತ್ತಾ ವಿವರಿಸಿದ್ದಾರೆ. ಪಂಜಾಬವೆಂಬ ಪ್ರಾಂತ್ಯ ಯಾವುದು, ಸಿಂಧ್‌ ಯಾವುದು, ಗುಜರಾತ, ಮರಾಠಾ, ದ್ರಾವಿಡ, ಉತ್ಕಲ, ವಂಗಾಗಳು ಯಾವುವು, ನಂತರ ವಿಂಧ್ಯ, ಹಿಮಾಚಲಗಳು ಎಲ್ಲಿವೆ ಎಂದು ಸಾಲಾಗಿ ವಿವರಿಸುವ ಈ ಶಿಕ್ಷಕ ಇಡೀ ಭಾರತ ಭೂಪಟದಲ್ಲಿ ಇವೆಲ್ಲವೂ ಹೇಗೆ ಪ್ರಾಮುಖ್ಯತೆ ಪಡೆಯುತ್ತವೆ ಎಂಬುದನ್ನು ಚಂದಕ್ಕೆ ವಿವರಿಸುತ್ತಾರೆ. ರಾಷ್ಟ್ರಗೀತೆಯಲ್ಲಿ ಕವಿ ರವೀಂದ್ರನಾಥ ಠಾಗೋರರು ಬಳಸಿದ ಪ್ರತಿಯೊಂದು ಶಬ್ದಕ್ಕೂ ಯಾವ ಮಹತ್ವವಿದೆ ಎಂದು ಅವರು ವಿವರಿಸುವ ಕ್ರಮವೇ ಎದುರು ಕೂತ ಮಕ್ಕಳ ಮನದಲ್ಲಿ ಶಾಶ್ವತವಾಗಿ ಅಚ್ಚೊತ್ತುವಲ್ಲಿ ಸಫಲವಾಗಬಹುದು.

ಈ ವಿಡಿಯೋ ಕಳೆದ ಆರೇಳು ದಿನಗಳಿಂದ ಟ್ರೆಂಡಿಂಗ್‌ನಲ್ಲಿದ್ದು, ಸುಮಾರು ೧೭ ಮಿಲಿಯನ್‌ ವೀಕ್ಷಣೆ ಕಂಡಿದೆ. ೧.೮ ಮಿಲಿಯನ್‌ ಲೈಕ್‌ ಸಂಪಾದಿಸಿದೆ. ರಾತ್ರೋರಾತ್ರಿ ಸಾಮಾನ್ಯ ಶಿಕ್ಷಕನೂ ಹೇಗೆ ಸ್ಟಾರ್‌ ಆಗಬಹುದು ಎಂಬುದಕ್ಕೆ ಇದು ಉದಾಹರಣೆ.

ಸಾವಿರಾರು ಜನರು ಈ ವಿಡಿಯೋಗೆ ಕಮೆಂಟ್‌ ಕೂಡಾ ಮಾಡಿದ್ದು, ರವೀಂದ್ರನಾಥ ಠಾಗೋರರ ರಾಷ್ಟ್ರಗೀತೆಯ ಚಿನ್ನದಂಥ ಸಾಲುಗಳನ್ನು ಬಹಳ ಸೊಗಸಾಗಿ ವರ್ಣನೆ ಮಾಡಿದ ನಿಮಗೆ ವಂದನೆಗಳು ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಹಲವರು, ಅದ್ಭುತವಾಗಿದೆ! ಎಂದು ಕಮೆಂಟಿಸಿದ್ದಾರೆ. ಇನ್ನೂ ಕೆಲವರು, ʻಇದರಲ್ಲೊಂದು ತಪ್ಪು ನುಸುಳಿದೆ. ಈ ಶಿಕ್ಷಕ ಜನಗಣಮನವನ್ನು ರಾಷ್ಟ್ರಗೀತೆ ಎಂದು ಹೇಳುತ್ತಿದ್ದಾರೆ, ಆದರೆ ಇದು ರಾಷ್ಟ್ರಗಾನವಾಗಬೇಕಲ್ಲʼ ಎಂದಿದ್ದಾರೆ.

Exit mobile version