ಬಹಳಷ್ಟು ಮಂದಿ ನಾವುಗಳು ನಾವಿರುವ ನಗರದ ಎಲ್ಲ ಬೀದಿಗಳನ್ನೂ ಸುತ್ತಿರುವುದಿಲ್ಲ. ಪ್ರತಿ ಬೀದಿಯ ಪ್ರತಿ ಗಲ್ಲಿಯಲ್ಲೂ ಹೆಜ್ಜೆ ಹಾಕಿರುವುದಿಲ್ಲ. ನಗರಗಳಲ್ಲಿರುವ ಅವಸ್ಥೆ ಎಂದರೆ, ಎಷ್ಟೋ ಬಾರಿ ಹಲವು ವರ್ಷಗಳಿಂದ ನಾವು ವಾಸವಿರುವ ಬೀದಿಯ ಪಕ್ಕದಲ್ಲೇ ಇರುವ ಇನ್ನೊಂದು ಬೀದಿಯ ಬಗೆಗೇ ಗೊತ್ತಿರುವುದಿಲ್ಲ.
ಆದರೆ, ಇಲ್ಲೊಬ್ಬಾತ ತನ್ನ ಊರಿನಲ್ಲೇ ೨೦೦೦ ಮೈಲಿಗಳಷ್ಟು ತಿರುಗಾಡಿದ್ದಾನೆ. ತಾನು ವಾಸಿಸುವ ನಗರದ ಪ್ರತಿಯೊಂದು ಬೀದಿಗಳನ್ನೂ ಸುತ್ತಿದ್ದಾನೆ. ೫೫ರ ಹರೆಯದ ಸೈಮನ್ ಕೋಶಿಯೋ ಎಂಬಾತನೇ ಈ ವಿಶೇಷ ಕೆಲಸ ಮಾಡಿದ್ದು, ತಾನು ವಾಸಿಸುವ ಇಂಗ್ಲೆಂಡ್‌ನ ಬ್ರಿಸ್ಟೋಲ್ ನಗರದ ಪ್ರತಿಯೊಂದು ಬೀದಿಗಳಿಗೂ ಕಾಲ್ನಡಿಗೆಯಲ್ಲಿ ತಿರುಗಾಡಿದ್ದಾನೆ. ಬ್ರಿಸ್ಟೋಲ್ ನಗರ ೪,೬೬೯ ರಸ್ತೆಗಳನ್ನು ಹೊಂದಿದ್ದು ಈ ಎಲ್ಲ ರಸ್ತೆಗಳಲ್ಲೂ ಈತ ಹೆಜ್ಜೆ ಹಾಕಿದ್ದಾನೆ. ಇದಕ್ಕೆ ಈತ ತೆಗೆದುಕೊಂಡ ಸಮಯ ೫೧ ವಾರಗಳು. ನಡೆದ ದೂರ ೧೯೪೧.೮೭ ಮೈಲಿಗಳು!
ರಾತ್ರಿ ಪಾಳಿಯಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಸೈಮನ್ ತನ್ನ ವಾರಾಂತ್ಯಗಳಲ್ಲಿ ಹಾಗೂ ಬಿಡುವಿನ ರಜಾ ದಿನಗಳಲ್ಲಿ ಈ ನಡಿಗೆ ಕೈಗೊಂಡಿದ್ದು, ತಾನಿರುವ ನಗರದ ಎಲ್ಲ ಬೀದಿಗಳಲ್ಲೂ ಹೆಜ್ಜೆಹಾಕಬೇಕೆಂಬ ಕನಸನ್ನು ಪೂರ್ತಿಗೊಳಿಸಿದ್ದಾನೆ. ಹುಟ್ಟಿದಂದಿನಿಂದ ಬ್ರಿಸ್ಟೋಲ್ ನಗರದಲ್ಲೇ ವಾಸಿಸುತ್ತಿರುವ ಈತ ವಿವಿಧ ಚಾಲೆಂಜುಗಳನ್ನು ಸ್ವೀಕರಿಸಿ ಅದನ್ನು ಪೂರ್ತಿಗೊಳಿಸುವುದರಲ್ಲಿ ಸಂತೋಷ ಕಾಣುತ್ತಾರಂತೆ. ಇದನ್ನು ʻಎ ಟು ಝೆಡ್ ಚಾಲೆಂಜ್ʼ ಎಂದು ಆತ ಕರೆದುಕೊಂಡಿದ್ದು, ಪ್ರತಿ ರಸ್ತೆಯ ಮೂಲೆ ಮೂಲೆಗೂ ನಡೆದು ಹೋಗಬೇಕೆಂಬುದು ಈತನ ಗುರಿಯಾಗಿತ್ತು.
ನಾನು ನನ್ನ ಜೀವನಪೂರ್ತಿ ಬ್ರಿಸ್ಟೋಲ್ ನಗರದಲ್ಲಿ ನಡೆದಿದ್ದೇನೆ. ಆದರೂ ಎಲ್ಲ ಸ್ಥಳಗಳನ್ನೂ ನೋಡಿರಲಿಲ್ಲ. ಹಾಗಾಗಿ ಈ ಚಾಲೆಂಜು ಸ್ವೀಕರಿಸಿದೆ. ನನಗೆ ಇಂತಹ ಹೊಸ ಹೊಸ ಐಡಿಯಾಗಳನ್ನು ಇಟ್ಟುಕೊಂಡು ಅದನ್ನು ಚಾಲೆಂಜಾಗಿ ಸ್ವೀಕರಿಸಿ ಮಾಡಿ ಪೂರ್ಣಗೊಳಿಸುವುದು ಎಂದರೆ ಬಹಳ ಇಷ್ಟ. ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಏನು ಮಾಡುವುದು ಎಂದು ತೋಚುತ್ತಿರಲಿಲ್ಲ. ಸಿಕ್ಕ ಸಮಯದಲ್ಲಿ ಹೀಗೆ ಮಾಡೋಣವೆಂದುಕೊಂಡು, ನನ್ನ ವಾಕಿಂಗ್ ದಿನಚರಿಯನ್ನು ಹೀಗೆ ಬದಲಾಯಿಸಿಕೊಂಡೆ. ನಗರದ ಮ್ಯಾಪ್ ಹಿಡಿದು ಪ್ರತಿಯೊಂದನ್ನೂ ಮಾರ್ಕ್ ಮಾಡಿಟ್ಟುಕೊಂಡು ಒಂದೊಂದಾಗಿ ನಡೆಯುತ್ತಾ ಸುಮಾರು ೫೧ ವಾರಗಳ ಸಮಯ ತೆಗೆದುಕೊಂಡೆ ಎನ್ನುತ್ತಾರೆ ಸೈಮನ್.
ಕೆಲವು ಏರಿಯಾಗಳಿಗೆ ಈತನ ಮಗಳೂ ಈತನ ಜೊತೆಯಾಗಿದ್ದು, ಎಲ್ಲ ಜಾಗಗಳಿಗೂ ಈಕೆಗೆ ಸಾಧ್ಯವಾಗಿಲ್ಲ. ಆದರೂ ಬಹಳಷ್ಟು ಜಾಗಗಳಿಗೆ ಆಕೆಯೂ ನನಗೆ ಈ ಚಾಲೆಂಜ್‌ಗೆ ಸಾಥ್ ನೀಡಿದ್ದಾಳೆ ಎಂದು ಅವರು ವಿವರಿಸಿದ್ದಾರೆ.
ಕಳೆದ ಒಂದು ದಶಕದಿಂದ ವಿಶ್ವದಾದ್ಯಂತ ʻಎವ್ರಿ ಸಿಂಗಲ್ ಸ್ಟ್ರೀಟರ್ಸ್ʼ ಎಂಬ ಟ್ರೆಂಡ್ ಹುಟ್ಟಿಕೊಂಡಿದ್ದು, ಇದನ್ನು ಹಲವರು ಚಾಲೆಂಜ್ ಆಗಿ ತೆಗೆದುಕೊಂಡು ಅವರವರ ಊರಿನ ಎಲ್ಲ ರಸ್ತೆಗಳಲ್ಲೂ ವಾಕ್ ಮಾಡುವ ಚಾಲೆಂಜುಗಳನ್ನು ತೆಗೆದುಕೊಂಡು ನಡಿಗೆ ಮಾಡುತ್ತಿದ್ದರು. ಇದೂ ಅದರಿಂದಲೇ ಪ್ರೇರಣೆ ಪಡೆದುದಾಗಿದೆ.
ನನಗೆ ಈ ರೀತಿಯ ಸಾಹಸೀ ಚಾಲೆಂಜುಗಳೆಂದರೆ ಬಹಳ ಇಷ್ಟ. ಆದರೆ, ಬಹಳಷ್ಟು ಸಾರಿ ಐಡಿಯಾಗಳೇ ಹೊಳೆಯುವುದಿಲ್ಲ. ಆಗೆಲ್ಲ, ಇಂಥ ಟ್ರೆಂಡ್ ಆದ ಐಡಿಯಾಗಳನ್ನಿಟ್ಟುಕೊಂಡು ಏನಾದರೂ ಮಾಡಲು ಪ್ರಯತ್ನ ಪಡುತ್ತೇನೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ | Viral Video | ಮದುಮಗಳ ಫೋಟೋಶೂಟ್; ನೀರು ತುಂಬಿದ ರಸ್ತೆಗುಂಡಿಯೇ ಸುಂದರ ತಾಣ ಈ ವಧುವಿಗೆ
೨೦೨೧ ಸೆಪ್ಟೆಂಬರ್ ತಿಂಗಳಲ್ಲಿ ಈ ಚಾಲೆಂಜನ್ನು ಅವರು ಸ್ವೀಕರಿಸಿದ್ದು, ಆರಂಭದಲ್ಲಿ ಆರೇಳು ರಸ್ತೆಗಳನ್ನು ಒಂದೇ ದಿನದಲ್ಲಿ ಅಂದರೆ ಸುಮಾರು ೨೦ ಮೈಲಿಗಳಷ್ಟು ದೂರವನ್ನು ಕವರ್ ಮಾಡಿದ್ದೂ ಇದೆ.ಆದರೆ ಎಲ್ಲ ಬಾರಿ ಇದು ಸಾಧ್ಯವಾಗುತ್ತಿರಲಿಲ್ಲ. ಕೆಲಸದ ಒತ್ತಡ, ಹಾಗೂ ಇತರ ತೊಂದರೆಗಳಿಂದ ನಡುನಡುವೆ ಏರುಪೇರಾಗಿದೆ. ಹೆಚ್ಚೆಂದರೆ ಒಂದು ಬಾರಿ ೨೫ ಮೈಲಿಗಷ್ಟು ನಡೆದಿದ್ದೂ ಇದೆಯಂತೆ.
ವ್ಯಾಯಾಮ ನಮ್ಮ ದೇಹಕ್ಕೆ ಬಹಳ ಅಗತ್ಯ. ನಾವು ನಮ್ಮ ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಇಂತಹ ಮಾಡಬಲ್ಲ ಜಾಲೆಂಜುಗಳನ್ನು ಸ್ವೀಕರಿಸುತ್ತಿದ್ದರೆ, ನಮ್ಮ ಪ್ರತಿನಿತ್ಯದ ವ್ಯಾಯಾಮಕ್ಕೂ ಸ್ಪೂರ್ತಿ ಸಿಗುತ್ತದೆ. ಒಂದೇ ಮಾದರಿಯಲ್ಲಿ ಮಾಡುತ್ತಿದ್ದರೆ ಬೋರ್ ಹೊಡೆಸುತ್ತದೆ. ಅದಕ್ಕಾಗಿ ವ್ಯಾಯಾಮದಲ್ಲಿ ಹೊಸತನ ಕಾಣಲು ಈ ರೀತಿ ಮಾಡುತ್ತೇನೆ ಎಂದವರು ಹೇಳಿದ್ದಾರೆ.
ಈತ ತನ್ನ ನಡಿಗೆಯ ಪರಿಣಾಮ ತನ್ನ ಶೂಗೆ ಆದ ಅವಸ್ಥೆಯನ್ನೂ ಫೋಟೋ ತೆಗೆದು, ಅದು ನಡೆದೂ ನಡೆದೂ ಎಷ್ಟು ಸವೆದು ಹೋಗಿದೆಯೆಂಬುದಕ್ಕೆ ಸಾಕ್ಷಿಯನ್ನೂ ಒದಗಿಸುವ ಮೂಲಕ ಎಲ್ಲರಲ್ಲೂ ನಡಿಗೆಯ ಹುಚ್ಚು ಹತ್ತಿಸಿದ್ದಾನೆ!
ಇದನ್ನೂ ಓದಿ | ಬೆಂಗಳೂರು ಟ್ರಾಫಿಕ್ನಲ್ಲಿ ಸಿಲುಕಿದ್ದಾಗ ಹುಟ್ಟಿದ ಪ್ರೀತಿ; ಈತನ ಲವ್ಸ್ಟೋರಿಗೆ ಸಾಕ್ಷಿಯಾದ ಫ್ಲೈಓವರ್ದು ಬದಲಾಗದ ಸ್ಥಿತಿ !