ಈ ಪುಟಾಣಿ ಮಮ್ಮಿ ಈಗ ಸದ್ಯ ಪ್ರಪಂಚದ ಎಲ್ಲರ ಗಮನ ಸೆಳೆಯುತ್ತಿದ್ದಾಳಂತೆ! ಜಗತ್ತಿನಾದ್ಯಂತ ಸಾವಿರಾರು ಮಂದಿಯನ್ನೂ ಈಗಾಗಲೇ ತನ್ನ ಕಡೆಗೆ ಸೆಳೆದಿರುವ ಕೇವಲ ಎರಡರ ಹರೆಯದ ಈ ಮಮ್ಮಿ ಈಗ ಎಲ್ಲರ ಫೇವರಿಟ್!
ಎರಡರ ಹರೆಯಕ್ಕೇ ಮಮ್ಮಿಯಾ? ಏನಿದು ಎಂದು ಆಶ್ಚರ್ಯಪಡಬೇಡಿ! ರೊಸಾಲಿಯಾ ಲೊಂಬಾರ್ಡೋ ಎಂಬ ಎರಡು ವರ್ಷದ ಬಾಲೆಯೇ ಈ ಮಮ್ಮಿ. ಸುಮಾರು ೧೦೦ ವರ್ಷಗಳ ಹಿಂದೆ ತೀರಿಕೊಂಡಾಗ ಈಕೆಯ ಶವವನ್ನು ಮಮ್ಮಿ ಮಾಡಲಾಗಿದ್ದು, ಇದು ಇತ್ತೀಚೆಗೆ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಸ್ಲೀಪಿಂಗ್ ಬ್ಯೂಟಿ ಎಂದೇ ಹೆಸರಾಗಿರುವ ಈಕೆಯ ಬಗೆಗಿನ ವಿವರಣೆಯಲ್ಲಿ, ೧೯೧೮ ಡಿಸೆಂಬರ್ ೧೩ರಂದು ಹುಟ್ಟಿ ೧೯೨೦ ಡಿಸೆಂಬರ್ ೬ರಂದು ಕೊನೆಯುಸಿರೆಳೆದಳು ಎಂಬ ಮಾಹಿತಿಯಿದೆ.
ಇಟಲಿಯ ಸಿಸಿಲಿ ಎಂಬಲ್ಲಿ ಈ ಎರಡರ ಹರೆಯದ ಬಾಲಕಿಯ ಮಮ್ಮಿಯನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಅತ್ಯಂತ ಸುಂದರ ಮಮ್ಮಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಕೆಯ ದೇಹವನ್ನು ಮಮ್ಮಿ ಮಾಡಿ ಅತ್ಯುತ್ತಮವಾಗಿ ಶೇಖರಿಸಿ ಇಡಲಾಗಿದ್ದು, ೧೦೦ ವರ್ಷದ ಹಿಂದಿನ ಶವದಂತೆ ಕಾಣುತ್ತಿಲ್ಲ. ಈಗಲೂ ಮುಖದಲ್ಲಿರುವ ಜೀವಕಳೆ ಇದೆ. ಜೊತೆಗೆ ಮುಖದ ಭಾಗವು ನೀರಿನಂಶವನ್ನು ಪೂರ್ತಿಯಾಗಿ ಕಳೆದುಕೊಳ್ಳದೆ, ಸುಕ್ಕುಗಟ್ಟದೆ, ಹಾಗೆಯೇ ಇದೆ. ಇದು ನಿಜವಾದ ಆಕಾರಕ್ಕಿಂತ ಶೇ.೫೦ರಷ್ಟು ಮಾತ್ರ ಕುಗ್ಗಿದ್ದು, ಇದು ಅತ್ಯುತ್ತಮ ಸ್ಥಿತಿಯಲ್ಲಿರುವ ಮಮ್ಮಿಗಳಲ್ಲಿ ಒಂದಾಗಿದೆ.
ಶವಕ್ಕೆ ನೀಡಬೇಕಾದ ಗೌರವದಿಂದ ಈಕೆಯ ದೇಹದ ಮೇಲೆ ಒಂದು ಹೊದಿಕೆ ಹೊದೆಸಿ ಇಡಲಾಗಿದ್ದು, ಗಾಜಿನ ಪೆಟ್ಟಿಗೆಯಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ಆದರೆ, ಮುಖದ ಭಾಗಕ್ಕೆ ಹೊದಿಕೆ ಹೊದಿಸಲಾಗಿಲ್ಲ. ಕಣ್ಣುಗಳು ಪೂರ್ಣ ಮುಚ್ಚಿದ ಸ್ಥಿತಿಯಲ್ಲಿ ಇಲ್ಲವಾದರೂ, ಈಕೆಯ ಮುದ್ದುಮುಖ ಪ್ರವಾಸಿಗರ ಮನ ಕರಗಿಸುತ್ತಿದೆ. ೧೦೦ ವರ್ಷಗಳಾದರೂ ಮುದ್ದಾಗಿ ಕಾಣಿಸುತ್ತಿರುವುದರಿಂದ ಸಹಜವಾಗಿಯೇ, ಪ್ರವಾಸಿಗರ ಮುಖ್ಯ ಆಕರ್ಷಣೆಯಾಗಿದ್ದಾಳೆ.
ಕೆಲವರ ಪ್ರಕಾರ, ಇದು ೧೦೦ ವರ್ಷಗಳಷ್ಟು ಹಳೆಯದಲ್ಲ ಎಂಬ ಸುದ್ದಿಯೂ ಓಡಾಡಿದ್ದರೂ, ಇಲ್ಲಿ ಬರೆದ ವಿವರಗಳ ಪ್ರಕಾರ ಇದಕ್ಕೆ ೧೦೦ ವರ್ಷ ದಾಟಿದೆ. ಈಕೆ ನ್ಯುಮೋನಿಯಾದಿಂದ ಸಾವನ್ನಪ್ಪಿದ್ದಾಳೆ ಎಂಬ ಮಾಹಿತಿಯೂ ಇಲ್ಲಿದ್ದರೂ, ದರ ಬಗ್ಗೆ ಖಚಿತತೆ ಇಲ್ಲ. ಆದರೆ, ಮಗಳ ಅನಿರೀಕ್ಷಿತ ಸಾವನ್ನು ಸಹಿಸಲಾಗದ ಅಪ್ಪ ತನ್ನ ಮಗಳು ಎಂದೆಂದಿಗೂ ಹಾಗೆಯೇ ಇರಬೇಕೆಂದು ಮಮ್ಮಿ ಮಾಡಿದ್ದರು ಎಂದೂ ಹೇಳಲಾಗಿದೆ.
ಇದನ್ನೂ ಓದಿ: Viral Video | ವಿಮಾನದಲ್ಲಿ ಸಿಗರೇಟ್ ಸೇದುತ್ತ ಪೋಸ್ ಕೊಟ್ಟು, ಡಮ್ಮಿ ಎಂದ ಬಾಬಿ ಕಟಾರಿಯಾ !