ಉಬರ್, ಓಲಾ ಕ್ಯಾಬ್ಗಳನ್ನು ಬುಕ್ ಮಾಡಿಯಾದ ಮೇಲೆ ಕೆಲವೊಮ್ಮೆ ನಾವು ಅದನ್ನು ಕ್ಯಾನ್ಸಲ್ ಮಾಡುತ್ತೇವೆ. ಈ ಕ್ಯಾಬ್ಗಳನ್ನು ಬುಕ್ ಮಾಡಿಯಾದ ಮೇಲೆ ನಾವು ಆ್ಯಪ್ ನೋಡಿ ಡ್ರೈವರ್ ನಮ್ಮ ಲೊಕೇಶನ್ ತಲುಪುವ ಸಮಯ ಸೇರಿ, ಚಾಲಕ ಬರುತ್ತಿರುವ ಮಾರ್ಗವನ್ನೆಲ್ಲ ತಿಳಿದುಕೊಳ್ಳಬಹುದು. ಹೀಗೆ ಕೆಲವೊಮ್ಮ ವಾಹನ ಬುಕ್ ಮಾಡಿಯಾದ ಮೇಲೆ, ಚಾಲಕನ ಸಮಯ ನಮಗೆ ಸರಿ ಹೊಂದದೆ ಇದ್ದರೆ, ಆತ ಬರಲು ವಿಳಂಬ ಮಾಡಿದರೆ ಅಥವಾ ಲೊಕೇಶನ್ ತಲುಪಿದ ಮೇಲೆ ನಾವು ಹತ್ತಬೇಕಾದ ಕ್ಯಾಬ್ ಸ್ವಚ್ಛವಾಗಿಲ್ಲದೆ ಇದ್ದರೆ, ನಾವು ಬುಕ್ಕಿಂಗ್ನ್ನು ಕ್ಯಾನ್ಸಲ್ ಮಾಡುತ್ತೇವೆ ಮತ್ತು ನಾವೇಕೆ ಕ್ಯಾಬ್ ಕ್ಯಾನ್ಸಲ್ ಮಾಡುತ್ತಿದ್ದೇವೆ ಎಂಬುದಕ್ಕೆ ಕಾರಣವನ್ನೂ ಕೊಡುತ್ತೇವೆ.
ಇನ್ನೊಂದು ಕಡೆ ಕ್ಯಾಬ್ ಡ್ರೈವರ್ಗಳಿಗೂ ಈ ಕ್ಯಾನ್ಸಲ್ ಎಂಬ ಆಯ್ಕೆ ಇರುತ್ತದೆ. ಅವರೂ ಕೂಡ ಒಮ್ಮೊಮ್ಮೆ ನಮ್ಮ ರೈಡ್ ರಿಕ್ವೆಸ್ಟ್ನ್ನು ಒಪ್ಪಿಕೊಂಡು ಸ್ವಲ್ಪ ಸಮಯದ ಬಳಿಕ ಅದನ್ನು ರದ್ದುಗೊಳಿಸುವುದನ್ನು ನೋಡಿದ್ದೇವೆ. ಕೆಲವು ಡ್ರೈವರ್ಗಳು ತಮ್ಮ ಕಸ್ಟಮರ್ಗೆ ಕರೆ ಮಾಡಿಕೊಂಡು, ಹೋಗಬೇಕಾದ ಸ್ಥಳ ಯಾವುದೆಂದು ಕೇಳಿ ಬಳಿಕ ಕ್ಯಾನ್ಸಲ್ ಮಾಡುತ್ತಾರೆ. ಅವರೇಕೆ ನಮ್ಮ ರೈಡ್ ಮನವಿ ತಿರಸ್ಕರಿಸಿದರು ಎಂಬುದೇ ನಮಗೆ ಅರ್ಥವಾಗುವುದಿಲ್ಲ.
ಹೀಗಿರುವಾಗ ಬೆಂಗಳೂರಿನ ಉಬರ್ ಡ್ರೈವರ್ ಒಬ್ಬ ಅತ್ಯಂತ ಪ್ರಾಮಾಣಿಕವಾಗಿ ಕಾರಣ ಕೊಟ್ಟು ಯುವತಿಯೊಬ್ಬಳ ರೈಡ್ ರಿಕ್ವೆಸ್ಟ್ನ್ನು ರದ್ದುಗೊಳಿಸಿದ್ದಾನೆ. ಆ ಯುವತಿಯ ಹೆಸರು ಅಶ್ಮಿತಾ ಎಂದಾಗಿದ್ದು, ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ ಮತ್ತು ಚಾಲಕನ ಪ್ರಾಮಾಣಿಕತೆ ಮೆಚ್ಚುವಂಥದ್ದು ಎಂದಿದ್ದಾರೆ. ನಾನು ಊಬರ್ನಲ್ಲಿ ಕ್ಯಾಬ್ ಬುಕ್ ಮಾಡಿದಾಗ ಭರತ್ ಎಂಬ ಚಾಲಕ ಅದನ್ನು ಸ್ವೀಕರಿಸಿದ. ಆದರೆ ಕೆಲವೇ ಹೊತ್ತಲ್ಲಿ ಆ್ಯಪ್ ಮೂಲಕ ನನಗೆ ಸಂದೇಶ ಕಳಿಸಿ, ‘ನಾನು ಈ ರೈಡ್ ಕ್ಯಾನ್ಸಲ್ ಮಾಡುತ್ತಿದ್ದೇನೆ. ಯಾಕೆಂದರೆ ನನಗೆ ತುಂಬ ನಿದ್ದೆ ಬರುತ್ತಿದೆ’ ಎಂದು ಹೇಳಿದ. ಆತ ಪ್ರಾಮಾಣಿಕವಾದ ಕಾರಣವನ್ನೇ ಕೊಟ್ಟು ಕ್ಯಾನ್ಸಲ್ ಮಾಡಿಕೊಂಡ ಎಂದಿದ್ದಾರೆ. ಹಾಗೇ, ಆತನ ಸಂದೇಶದ ಸ್ಕ್ರೀನ್ಶಾಟ್ಗಳನ್ನೂ ಕಳಿಸಿದ್ದಾರೆ.
ಇದನ್ನೂ ಓದಿ: ವೈರಲ್ ನ್ಯೂಸ್ | ಅಧ್ಯಾಪಕರ ಮನೆಗೆ ಕನ್ನ ಹಾಕಿದ ಕಳ್ಳನ ಗುರುಭಕ್ತಿ ಹೀಗಿತ್ತು!
ಇದನ್ನು ನೋಡಿದ ನೆಟ್ಟಿಗರು ಆ ಡ್ರೈವರ್ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಹಾಗೇ, ತಮಗೆ ಆದ ಕೆಲವು ಕೆಟ್ಟ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. ‘ನನಗೊಂದು ಕೆಟ್ಟ ಅನುಭವ ಆಗಿತ್ತು. ತಡರಾತ್ರಿ 3ಗಂಟೆ ಹೊತ್ತಿಗೆ ನಾನು ಕ್ಯಾಬ್ನಲ್ಲಿ ಹೋಗುತ್ತಿದ್ದೆ. ಆ ಡ್ರೈವರ್ ಮಾರ್ಗ ಮಧ್ಯೆ ಗಾಡಿ ನಿಲ್ಲಿಸಿ, ನನಗೆ ನಿದ್ದೆ ಬರುತ್ತಿದೆ, ಮುಂದೆ ಹೋಗಲು ಸಾಧ್ಯವೇ ಆಗುತ್ತಿಲ್ಲ ಎಂದು ಗಾಡಿ ನಿಲ್ಲಿಸಿಯೇ ಬಿಟ್ಟಿದ್ದ. ಆದರೆ ಈ ಡ್ರೈವರ್ ಪ್ರಾಮಾಣಿಕ’ ಎಂದು ಒಬ್ಬರು ಕಮೆಂಟ್ ಬರೆದಿದ್ದಾರೆ. ಹಾಗೇ ಇನ್ನೊಬ್ಬರು ಕಮೆಂಟ್ ಮಾಡಿ, ‘ನಾನೊಂದು ದಿನ ಕ್ಯಾಬ್ ಬುಕ್ ಮಾಡಿದೆ. ಕ್ಯಾಬ್ ಬುಕ್ ಆಗಿ ಐದು ನಿಮಿಷವಾದರೂ ಆ ಚಾಲಕ ತನ್ನ ಜಾಗದಿಂದ ಕದಲಲಿಲ್ಲ. ನಾನು ಆತನಿಗೆ ಕರೆ ಮಾಡಿ ಪ್ರಶ್ನಿಸಿದರೆ, ನಾನು ನಿಮ್ಮ ಕರೆಗಾಗಿಯೇ ಕಾಯುತ್ತಿದ್ದೆ ಎಂದು ಹೇಳಿದ, ತೀರ ಬಾಲಿಶ ಅನ್ನಿಸಿಬಿಟ್ಟಿತು’ ಎಂದು ಹೇಳಿದ್ದಾರೆ.