ಲಖನೌ: ಉತ್ತರ ಪ್ರದೇಶದ (Uttar Pradesh) ವಿಶ್ವವಿದ್ಯಾನಿಲಯವೊಂದರಲ್ಲಿ (University) ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ (Answer Paper) ಉತ್ತರಗಳ ಬದಲು “ಜೈ ಶ್ರೀ ರಾಮ್” ಘೋಷಣೆ (Jai SriRam Slogan) ಮತ್ತು ಕ್ರಿಕೆಟಿಗರ ಹೆಸರನ್ನು ಬರೆದು ಪರೀಕ್ಷೆ ಮುಗಿಸಿದ್ದಾರೆ. ಅವರೇನೋ ಪಾಸಾಗಿದ್ದಾರೆ. ಆದರೆ ನಂತರ ಕಾನೂನು ಉರುಳು ಪ್ರಾಧ್ಯಾಪಕರನ್ನು ಸುತ್ತಿಕೊಂಡಿದೆ.
ಉತ್ತರ ಪತ್ರಿಕೆಯಲ್ಲಿ ಸಿನಿಮಾ ಹಾಡುಗಳು, ಮ್ಯೂಸಿಕ್ ಮತ್ತು ಧಾರ್ಮಿಕ ಘೋಷಣೆಗಳನ್ನು ಬರೆದು, ಅದಕ್ಕೆ ಅಂಕಗಳನ್ನು ನೀಡುವುದಕ್ಕಾಗಿ ವಿದ್ಯಾರ್ಥಿಗಳಿಂದ ಹಣವನ್ನು ಲಂಚ ಪಡೆದ ಆರೋಪದ ಮೇಲೆ ಜೌನ್‌ಪುರದ ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ್ ವಿಶ್ವವಿದ್ಯಾಲಯದ ಇಬ್ಬರು ಪ್ರಾಧ್ಯಾಪಕರನ್ನು ಅಮಾನತುಗೊಳಿಸಲಾಗಿದೆ. ವಿಶ್ವವಿದ್ಯಾನಿಲಯದ ಕೆಲವು ಅಧಿಕಾರಿಗಳ ಸಹಕಾರದಿಂದ, ಶೂನ್ಯ ಅಂಕ ಪಡೆದ ವಿದ್ಯಾರ್ಥಿಗಳಿಗೂ ಶೇ.60ಕ್ಕಿಂತ ಹೆಚ್ಚು ಅಂಕ ನೀಡಿ ಉತ್ತೀರ್ಣಗೊಳಿಸಲಾಗಿದೆ ಎಂದು ವಿದ್ಯಾರ್ಥಿ ಮುಖಂಡ ದಿವ್ಯಾಾಂಶು ಸಿಂಗ್ ಅವರು ಪ್ರಧಾನಿ, ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ಉಪಕುಲಪತಿಗಳಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.
ಆರ್‌ಟಿಐ ಮೂಲಕ ಪಡೆಯಲಾದ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಪ್ರತಿಗಳಲ್ಲಿ ಈ ಅಕ್ರಮಗಳನ್ನು ಗುರುತಿಸಲಾಗಿದೆ. ಮರು ಮೌಲ್ಯಮಾಪನದ ಅಂಕಗಳಲ್ಲಿ ಗಮನಾರ್ಹ ವ್ಯತ್ಯಾಸ ಉಂಟಾಗಿದೆ. “ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ನೀಡಲಾಗಿದೆ ಎಂಬ ಆರೋಪವಿತ್ತು. ಹಾಗಾಗಿ ನಾವು ಸಮಿತಿಯನ್ನು ರಚಿಸಿದ್ದೇವೆ. ಆ ಸಮಿತಿಯು ತನ್ನ ವರದಿಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕಗಳನ್ನು ನೀಡಲಾಗಿದೆ ಎಂದು ಹೇಳಿದೆ” ಎಂದು ಉಪಕುಲಪತಿ ವಂದನಾ ಸಿಂಗ್ ಹೇಳಿದರು.
ಧಾರ್ಮಿಕ ಘೋಷಣೆಗಳ ಬಗ್ಗೆ ಕೇಳಿದಾಗ, ಅವರು ಹೇಳಿದರು: “ಜೈ ಶ್ರೀ ರಾಮ್ ಉತ್ತರಗಳಿರುವ ಪ್ರತಿಯನ್ನು ನಾನು ನೋಡಿಲ್ಲ. ಆದರೆ ವಿದ್ಯಾರ್ಥಿಗೆ ಯಾವ ಅಂಕಗಳನ್ನೂ ನೀಡಲು ಸಾಧ್ಯವಾಗದ ಪ್ರತಿಗಳನ್ನು ನೋಡಿದ್ದೇನೆ. ಕೈಬರಹವು ಸ್ಪಷ್ಟವಾಗಿಲ್ಲ.” ಈ ಕುರಿತು ರಾಜಭವನವು ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು.
ಬುಧವಾರ ನಡೆದ ಪರೀಕ್ಷಾ ಸಮಿತಿ ಸಭೆಯಲ್ಲಿ ಪರೀಕ್ಷಕರಾದ ಡಾ ವಿನಯ್ ವರ್ಮಾ ಮತ್ತು ಮನೀಶ್ ಗುಪ್ತಾ ಅವರನ್ನು ಅಮಾನತುಗೊಳಿಸಲಾಗಿದೆ. ಇಂತಹ ಘಟನೆ ಪುನರಾವರ್ತನೆಯಾಗದಂತೆ ಶಿಕ್ಷಕರಿಗೆ ಎಚ್ಚರಿಕೆ ನೀಡಲಾಗಿದೆ. ಈ ಶಿಕ್ಷಕರನ್ನು ವಜಾಗೊಳಿಸಲು ಸಮಿತಿ ಶಿಫಾರಸು ಮಾಡಿದೆ. ಆದರೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ನೀತಿ ಸಂಹಿತೆ ತೆರವಾದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉಪಕುಲಪತಿ ಹೇಳಿದರು.
ಇದನ್ನೂ ಓದಿ: Jai Sriram Slogan: ಜೈ ಶ್ರೀರಾಮ್ ಹೇಳಿದ್ದಕ್ಕೆ ಮುಸ್ಲಿಂ ಯುವಕರಿಂದ ಹಲ್ಲೆ; ಇನ್ನೊಂದು ಘಟನೆ