Site icon Vistara News

Viral video: 101 ಕೋಟಿ ರೂ. ಮೌಲ್ಯದ ಷೇರು ಹೊಂದಿರುವ ಈ ವ್ಯಕ್ತಿ ಹೇಗೆ ಜೀವನ ಸಾಗಿಸುತ್ತಿದ್ದಾರೆ ನೋಡಿ!

rich man with 101 cr worth shares

ಹೊಸದಿಲ್ಲಿ: ಒಂದು ದೊಡ್ಡ ಚಡ್ಡಿ ಧರಿಸಿ, ಮೇಲುಮೈಯಲ್ಲಿ ಇನ್ಯಾವ ದಿರಸನ್ನೂ ಧರಿಸದೆ ಅತ್ಯಂತ ಸರಳವಾಗಿ ನಗುತ್ತಿರುವ ಈ ಹಿರಿಯ ನಾಗರಿಕರ ಆಸ್ತಿ ಮೌಲ್ಯ ಎಷ್ಟು ಎಂದು ತಿಳಿದರೆ ನೀವು ನಿಜಕ್ಕೂ ಬೆಚ್ಚಿ ಬೀಳಬಹುದು. ಹೌದು, ಇವರೇ ಹೇಳಿಕೊಳ್ಳುವಂತೆ, ಇವರ ಬಳಿ 101 ಕೋಟಿ ರೂ. ಮೌಲ್ಯದ ಷೇರುಗಳಿವೆ!

ವಿಡಿಯೋದಲ್ಲಿ ತೋರಿಸಿರುವಂತೆ ಇವರು ತಮ್ಮ ಮನೆಯ ಮುಂದೆ ನಿಂತಿದ್ದಾರೆ. ಕೊಂಕಣಿ ಹಾಗೂ ಕನ್ನಡ ಭಾಷೆಯಲ್ಲಿ ಮಾತನಾಡುತ್ತಿರುವ ಇವರ ಮನೆ ಹಳೆಯದು, ಗ್ರಾಮೀಣ ಶೈಲಿಯದ್ದು ಮತ್ತು ಸರಳವಾಗಿದೆ. ಅದರ ಮುಂದೆ ಅರೆಬೆತ್ತಲೆಯಾಗಿ ವಾಕಿಂಗ್‌ ಮಾಡುತ್ತಿರುವ ಇವರು ಮಾತನಾಡಿರುವ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ. ಈ ವಿಡಿಯೋ ಎಕ್ಸ್‌ (ಟ್ವಿಟರ್‌)ನಲ್ಲಿ ಇದುವರೆಗೆ ಸುಮಾರು 4 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೂರಾರು ಕಾಮೆಂಟ್‌ಗಳಿಗೆ ಕಾರಣವಾಗಿದೆ.

ಈ ಹಿರಿಯ ನಾಗರಿಕರು ಹೇಳಿಕೊಳ್ಳುವಂತೆ ಅವರು ಎಲ್&ಟಿ, ಅಲ್ಟ್ರಾಟೆಕ್ ಮತ್ತು ಕರ್ಣಾಟಕ ಬ್ಯಾಂಕ್ ಷೇರುಗಳನ್ನು ಹೊಂದಿದ್ದಾರೆ. ಇಷ್ಟು ಶ್ರೀಮಂತಿಕೆಯ ನಡುವೆಯೂ ಅವರು ಸರಳ ನಡವಳಿಕೆ ಹಾಗೂ ಸರಳ ಜೀವನ ಹೊಂದಿದ್ದಾರೆ ಎಂಬುದು ನೆಟ್ಟಿಗರ ಆಕರ್ಷಣೆಗೆ ಕಾರಣವಾಗಿದೆ.

ಸರಳ ಜೀವನ:

ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ರಾಜೀವ್ ಮೆಹ್ತಾ, “ಅವರು ಹೇಳಿದಂತೆ, ಹೂಡಿಕೆ ಮಾಡುವಾಗ, ನೀವು ಒಮ್ಮೆ ಅದೃಷ್ಟಶಾಲಿಯಾಗಿರಬೇಕು. ಅವರು 80 ಕೋಟಿ ರೂಪಾಯಿ ಮೌಲ್ಯದ ಎಲ್&ಟಿ ಷೇರು, 21 ಕೋಟಿ ರೂಪಾಯಿ ಮೌಲ್ಯದ ಅಲ್ಟರ್‌ಟೆಕ್ ಸಿಮೆಂಟ್ ಷೇರು, 1 ಕೋಟಿ ರೂಪಾಯಿ ಮೌಲ್ಯದ ಕರ್ಣಾಟಕ ಬ್ಯಾಂಕ್ ಷೇರುಗಳನ್ನು ಹೊಂದಿದ್ದಾರೆ. ಈಗಲೂ ಸರಳ ಜೀವನ ನಡೆಸುತ್ತಿದ್ದಾರೆʼʼ ಎಂದು ಬರೆದಿದ್ದಾರೆ.

ಈ ಪೋಸ್ಟ್ ಕುರಿತು ಪ್ರತಿಕ್ರಿಯಿಸಿದ ಕ್ಯಾಪಿಟಲ್ ಮೈಂಡ್‌ನ ಸಂಸ್ಥಾಪಕ ಮತ್ತು ಸಿಇಒ ದೀಪಕ್ ಶೆಣೈ ಅವರು, ʼʼ27,000 ಎಲ್&ಟಿ ಷೇರುಗಳ ಒಟ್ಟು ಮೌಲ್ಯ ಸುಮಾರು 8 ಕೋಟಿ ರೂ.ಗಳಾಗಿದ್ದರೆ, ಅಲ್ಟ್ರಾಟೆಕ್ ಷೇರುಗಳು ಸುಮಾರು 3.2 ಕೋಟಿ ರೂ. ಮತ್ತು ಕರ್ಣಾಟಕ ಬ್ಯಾಂಕ್ ಷೇರು ಮೌಲ್ಯ ಸುಮಾರು 10 ಲಕ್ಷ ರೂ. ಇದು ಸರಿಯಾದ ಮೊತ್ತವಾಗಿದೆ. ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ದೊರೆಯಲಿ” ಎಂದು ಬರೆದಿದ್ದಾರೆ.

ವರ್ಷಕ್ಕೆ 6 ಲಕ್ಷ ರೂ. ಲಾಭಾಂಶ:

ಕಮೆಂಟ್‌ ಮಾಡಿರುವ ಇನ್ನೊಬ್ಬರು, ಈ 3.5 ಕೋಟಿ ಷೇರುಗಳಿಂದ ಅವರು ಪ್ರತಿವರ್ಷ 6 ಲಕ್ಷ ರೂಪಾಯಿ ಲಾಭಾಂಶವನ್ನು ಗಳಿಸುತ್ತಿರಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, ಇಷ್ಟು ಹಣವಿದ್ದರೂ ಅದನ್ನು ಸರಿಯಾಗಿ ಬಳಸದಿದ್ದರೆ ನಿಷ್ಪ್ರಯೋಜಕ ಎಂದು ವಾದಿಸಿದ್ದಾರೆ. “ಹಣವು ಇಂಧನದಂತೆ. ಟ್ಯಾಂಕ್‌ನಲ್ಲಿ ಬಹಳಷ್ಟು ಇದ್ದರೂ ಬಳಸದಿದ್ದರೆ ಏನು ಪ್ರಯೋಜನ? ಸರಳತೆ ಒಂದು ಉತ್ತಮ ವಿಷಯ. ಆದರೆ ನಿಮ್ಮ ಹಣವನ್ನು ಖರ್ಚು ಮಾಡಲು ಸಾಧ್ಯವಾಗದಿರುವುದು ಬೇರೆ. ಅವರು ಸಾಕಷ್ಟು ಹೊಂದಿರುವಾಗಲೂ ಖರ್ಚು ಮಾಡುವ ಅವಕಾಶ ಬಳಸಿಕೊಳ್ಳದಿರುವುದು ತುಂಬಾ ಕಷ್ಟಕರ” ಎಂದಿದ್ದಾರೆ.

ಇನ್ನು ಕೆಲವರು ಇದರಲ್ಲಿ ಒನ್‌ವೆಸ್ಟ್‌ಮೆಂಟ್‌ನ ಪಾಠವನ್ನು ಕಂಡಿದ್ದಾರೆ. ವಿಕೆಜೆ ಇನ್ವೆಸ್ಟ್‌ಮೆಂಟ್‌ನ ಸಿಇಒ ವಿನೋದ್ ಝವೇರಿ ಎಂಬವರು, “ಸರಿಯಾದ ಸಮಯದಲ್ಲಿ ಲಾಭವನ್ನು ಕಾಯ್ದಿರಿಸುವುದನ್ನು ಇದರಿಂದ ಕಲಿಯಬೇಕು. ಸಿಂಧಿಯಾ ಶಿಪ್ಪಿಂಗ್, ಯುನಿಟೆಕ್ ಮತ್ತು ಇನ್ನೂ ಅನೇಕ ಷೇರುಗಳು ಜಂಕ್ ಆಗಿ ಮಾರ್ಪಟ್ಟಿರುವ ಅಥವಾ ಎಲ್ಲಿಯೂ ಕಾಣದಿರುವುದರಿಂದ ಹತಾಶರಾದ ಅನೇಕರ ಬಗ್ಗೆ ನಾನು ತಿಳಿದಿದ್ದೇನೆ. ಇದರ ಅರ್ಥವೇನೆಂದರೆ ಸರಿಯಾದ ಸಮಯದಲ್ಲಿ ಷೇರು ಖರೀದಿಸುವುದು” ಎಂದಿದ್ದಾರೆ.

ಅಬ್ಬಾ! ಎಂಥ ಸರಳತೆ!:

ಮತ್ತೊಬ್ಬ ಟ್ವಿಟರ್ ಬಳಕೆದಾರರು, ಆತಂಕದ ಸಮಯದಲ್ಲಿ (ಪ್ಯಾನಿಕ್‌) ತಮ್ಮ ಷೇರುಗಳನ್ನು ಮಾರಾಟ ಮಾಡದೆ ಉಳಿದುಕೊಂಡಿದ್ದಕ್ಕಾಗಿ ಈ ಇವರನ್ನು ಶ್ಲಾಘಿಸಿದ್ದಾರೆ. “ಇದನ್ನೇ ಸರಳತೆಯ ಶಕ್ತಿ ಎಂದು ಕರೆಯಬಹುದು. ಗಾಬರಿಯ ಸಮಯದಲ್ಲಿ ಪ್ಯಾನಿಕ್ ಮಾರಾಟದಿಂದ ದೂರವಿರುವುದು ಅಗತ್ಯ. ಹೂಡಿಕೆಯ ಹಲವು ಅಂಶಗಳು ಸಂಪತ್ತಿನ ಸೃಷ್ಟಿಯ ಮಾದರಿಯನ್ನು ಬದಲಾಯಿಸಬಹುದು” ಎಂದಿದ್ದಾರೆ.

ಇವರು ಎಲ್ಲಿಯವರು, ಅವರ ಹೆಸರೇನು ಎಂಬುದು ತಿಳಿದುಬಂದಿಲ್ಲ. ಕೊಂಕಣಿ ಹಾಗೂ ಕನ್ನಡದಲ್ಲಿ ಅವರು ಮಾತನಾಡುತ್ತಿರುವುದರಿಂದ, ಗೋವಾ ಅಥವಾ ಉತ್ತರ ಕನ್ನಡದವರು ಇರಬಹುದು ಎಂದು ತರ್ಕಿಸಲಾಗಿದೆ.

ಇದನ್ನೂ ಓದಿ: Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು

Exit mobile version