Site icon Vistara News

Video viral : ನಾಯಿ ಅಡ್ಡಬಂದು ಬೈಕ್‌ ಸವಾರ ಸಾವು; ಮೃತನ ಮನೆಗೇ ಬಂದು SORRY ಹೇಳಿದ ಶ್ವಾನ!

Dogs regret

ದಾವಣಗೆರೆ: ಇದನ್ನು ಅಚ್ಚರಿ ಅನ್ನುತ್ತೀರೋ, ವಿಸ್ಮಯ ಅನ್ನುತ್ತೀರೋ, ಪ್ರಾಣಿಗಳಿಗೂ ಹೃದಯವಿದೆ- ಕರುಣೆ ಇದೆ ಅನ್ನುತ್ತೀರೋ, ನಾಯಿಗಳಿಗಂತೂ ವಿಪರೀತವಾದ ಪಶ್ಚಾತ್ತಾಪದ (Dog shows Regret) ಗುಣವಿದೆ ಅಂತೀರೋ- ಗೊತ್ತಿಲ್ಲ. ಆದರೆ, ಇಲ್ಲಿ ನಡೆದಿರುವ ಒಂದು ಘಟನೆಯ ವಿವರವನ್ನು ಕೇಳಿದರೆ, ವಿಡಿಯೊಗಳನ್ನು ನೋಡಿದರೆ ನೀವು ಖಂಡಿತ ಒಂದು ಕ್ಷಣ ಭಾವುಕರಾಗುತ್ತೀರಿ. ಅದಕ್ಕಿಂತಲೂ ಹೆಚ್ಚಾಗಿ ಮನುಷ್ಯರಿಗೇ ಇಲ್ಲದ ಇಂಥ ಪಶ್ಚಾತ್ತಾಪದ ಭಾವ ಒಂದು ನಾಯಿಗೆ ಇದೆಯಲ್ವಾ ಎಂದು ನಿಡುಸುಯ್ಯುತ್ತೀರಿ (Viral Video).

ಇಲ್ಲಿ ಒಂದು ಘಟನೆ ನಡೆದಿದೆ. ಅದೇನೆಂದರೆ, ನಾಯಿಯೊಂದು ಬೈಕ್‌ಗೆ ಅಡ್ಡ ಬಂದು ಸವಾರ ಸ್ಥಳದಲ್ಲೇ (Bike rider dead) ಮೃತಪಟ್ಟಿದ್ದಾನೆ. ಬೈಕ್‌ ಸವಾರನ ಸಾವಿಗೆ ಕಾರಣವಾದ ಅದೇ ನಾಯಿ ಮೃತನ ಮನೆಗೆ (Dog comes to dead mans house) ಬಂದು ಕುಟುಂಬಸ್ಥರ ಮುಂದೆ ತಪ್ಪಾಯಿತು ಎನ್ನುವ ಹಾಗೆ ಬೇಸರದ ಭಾವ ತೋರಿದೆ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದೆ. ಅದರಲ್ಲೂ ಮುಖ್ಯವಾಗಿ ಮೃತನ ತಾಯಿಯನ್ನೇ ಗುರುತು ಹಿಡಿದು ಅವರ ಮುಖ ನೆಕ್ಕಿ ಸ್ಸಾರಿ ಅಂದಿದೆ.

ಇಂಥಹುದೊಂದು ವಿಸ್ಮಯಕಾರಿ ಘಟನೆ ನಡೆದಿರುವುದು ದಾವಣಗೆರೆ ಜಿಲ್ಲೆಯಲ್ಲಿ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ.

ಇಲ್ಲಿನ ನಿವಾಸಿ ತಿಪ್ಪೇಶ್‌ (21) ಕಳೆದ ಗುರುವಾರ ಕ್ಯಾಸಿನಕೆರೆ ಗ್ರಾಮದಿಂದ ಅನವೇರಿ ಗ್ರಾಮಕ್ಕೆ ಸಹೋದರಿಯನ್ನು ಬಿಟ್ಟು ಬರಲು ಹೋಗಿದ್ದರು. ಬೈಕ್‌ನಲ್ಲಿ ಹೋಗಿದ್ದ ಅವರು ಮರಳಿ ಬರುವಾಗ ಕುರುಬರ ವಿಟ್ಲಾಪುರದ ಬಳಿ ಅಪಘಾತಕ್ಕೀಡಾಗಿದ್ದಾರೆ.

ಅವರು ಮನೆಗೆ ಮರಳುವಾಗ ಒಮ್ಮಿಂದೊಮ್ಮೆಗೇ ನಾಯಿಯೊಂದು ಬೈಕ್‌ಗೆ ಅಡ್ಡ ಬಂದು ಉರುಳಿಬಿದ್ದಿದ್ದಾರೆ. ರಸ್ತೆಗೆ ಉರುಳಿಬಿದ್ದ ತಿಪ್ಪೇಶ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ. 21 ವರ್ಷದ ಹುಡುಗ, ಮನೆಗೆ ಆಧಾರವಾಗಲು ಸಜ್ಜಾಗುತ್ತಿದ್ದ ಮನೆ ಮಗನನ್ನು ಕಳೆದುಕೊಂಡು ಈ ಮನೆ ಕಣ್ಣೀರಿನಲ್ಲಿ ಕೈ ತೊಳೆದಿತ್ತು.

ಮನೆಯವರು ಅಂತ್ಯಕ್ರಿಯಾದಿ ಕಾರ್ಯಕ್ರಮಗಳನ್ನು ಮುಗಿಸಿ ಇನ್ನೂ ಕಣ್ಣೀರು ಒರೆಸುತ್ತಲೇ ಇದ್ದರು. ಮನೆಯಲ್ಲಿ ಸೂತಕದ ವಾತಾವರಣವಿತ್ತು. ಇಷ್ಟು ಹೊತ್ತಿಗೆ ಘಟನೆ ನಡೆದು ಮೂರನೇ ದಿನ ತಿಪ್ಪೇಶ್‌ ಅವರ ಮನೆಗೆ ಒಂದು ನಾಯಿ ಬಂದಿತು. ನೋಡಿದವರು ಇದೇ ನಾಯಿ ಅಪಘಾತಕ್ಕೆ ಕಾರಣವಾಗಿದ್ದು, ತಿಪ್ಪೇಶನ ಬೈಕ್‌ಗೆ ಅಡ್ಡ ಬಂದಿದ್ದು ಎಂದು ಗುರುತು ಹಿಡಿದರು.

ಮನೆಗೆ ನೇರವಾಗಿ ಬಂದ ನಾಯಿ ಅಲ್ಲಿಲ್ಲಿ ಸುತ್ತಾಡಿದ್ದಲ್ಲದೆ, ತಿಪ್ಪೇಶ್‌ ಮಲಗುತ್ತಿದ್ದ ಕೋಣೆಗೇ ಹೋಯಿತು. ಅಲ್ಲಿಂದ ಅಡುಗೆ ಮನೆಗೆ ಹೋಗಿ ಸುತ್ತಾಡಿಕೊಂಡು ಬಂದಿದೆ. ಕೊನೆಗೆ ಮನೆಯಲ್ಲಿ ಮಲಗಿಕೊಂಡು ಕಣ್ಣೀರು ಹಾಕುತ್ತಿದ್ದ ತಿಪ್ಪೇಶ್‌ನ ತಾಯಿಯ ಬಳಿ ಕುಳಿತು ಅವರ ಮುಖಕ್ಕೆ ಮುಖವಿಟ್ಟು ತಾನೂ ಮಲಗಿದಂತೆ ಮಾಡಿತು. ಎರಡೂ ಕೈಗಳನ್ನು ಮುಂದಿಟ್ಟು sorry ಕೇಳುವಂತೆ ನಟಿಸಿತು.

ಅಷ್ಟು ಮಾತ್ರವಲ್ಲ, ಈಗ ಈ ನಾಯಿ ಮನೆಯಲ್ಲೇ ಇದೆ. ಮನೆಯಲ್ಲಿ ಅಂದರೆ ನಾಯಿ ಇರಬೇಕಾದ ಮನೆಯ ಹೊರಗಿನ ಜಾಗದಲ್ಲಿ ಅಲ್ಲ. ಮನೆಯ ಒಳಗಡೆ ಇತರರಂತೆಯೇ ಓಡಾಡುತ್ತಿದೆ. ಎಲ್ಲರ ಜತೆಗೆ ಆಟವಾಡುತ್ತಿದೆ. ತಿಪ್ಪೇಶ್‌ ತಾಯಿ ಜತೆಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದೆ. ಅವರು ಕೂಡಾ ಈ ನಾಯಿಯನ್ನು ಮುದ್ದಿಸುತ್ತಾ ತಮ್ಮ ನೋವನ್ನು ಮರೆಯುತ್ತಿದ್ದಾರೆ. ಹೀಗೆ ಕಳೆದುಹೋದ ಮಗನ ನೋವನ್ನು ಈ ನಾಯಿ ಮರೆಸುತ್ತಿದೆ.. ಪಶ್ಚಾತ್ತಾಪದ ಭಾವದಲ್ಲೇ ಮನೆಯಲ್ಲಿ ಜೀವಂತಿಕೆ ತುಂಬುತ್ತಿದೆ. ಈಗ ಮನೆಯವರು ನಾಯಿಯ ಚಲನವಲನಗಳನ್ನು ಗಮನಿಸುತ್ತಾ ಕಣ್ಣೀರು ಇಂಗಿಸಿಕೊಳ್ಳುತ್ತಿದ್ದಾರೆ.

ತಿಪ್ಪೇಶ್ ತಾಯಿಯನ್ನು ಅಳದಂತೆ ಸಮಾಧಾನ ಮಾಡಿದ ಶ್ವಾನ

ಇದನ್ನೂ ಓದಿ: Snake Catch : ಬೃಹತ್‌ ಗಾತ್ರದ ಹೆಬ್ಬಾವನ್ನು ಹಿಡಿದ 12ರ ಬಾಲಕ! Video ಇದೆ ನೋಡಿ!

Exit mobile version