ಪಟನಾ: ಸರಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಯಾವ ಮಟ್ಟದಲ್ಲಿ ತಾಂಡವವಾಡುತ್ತಿದೆ ಎನ್ನುವುದಕ್ಕೆ ಭಯಾನಕ ಸಾಕ್ಷಿಯಾಗುವ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿರುವ ಹೆಣವನ್ನು ನೀಡಲು ಅಲ್ಲಿನ ಸಿಬ್ಬಂದಿ 50,000 ರೂ. ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ, ಕೈಯಲ್ಲಿ ನಯಾ ಪೈಸೆಯೂ ಇಲ್ಲದ ಆತನ ಹೆತ್ತವರಾದ ವೃದ್ಧ ದಂಪತಿ ಬೀದಿ ಬೀದಿ ಅಲೆದು ಭಿಕ್ಷೆ ಬೇಡುತ್ತಿದ್ದಾರೆ.
ಬಿಹಾರದ ಸಮಷ್ಟಿಪುರದಲ್ಲಿ ನಡೆದಿರುವ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಸರಕಾರಿ ಆಸ್ಪತ್ರೆಯ ಸಿಬ್ಬಂದಿಯ ಧನದಾಹಕ್ಕೆ ಧಿಕ್ಕಾರ ಹೇಳುತ್ತಿದ್ದಾರೆ. ಇತ್ತ ಪ್ರತಿಪಕ್ಷಗಳು ಬಿಹಾರದ ಆಡಳಿತ ಸಂಪೂರ್ಣ ಹಳಿ ತಪ್ಪಿದ್ದಕ್ಕೆ, ಜನವಿರೋಧಿಯಾಗಿರುವುದಕ್ಕೆ, ಕ್ರೂರಿಯಾಗಿರುವುದಕ್ಕೆ ಇದೊಂದು ಸಣ್ಣ ಉದಾಹರಣೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.
ಏನಿದು ಮನ ಕಲಕುವ ಘಟನೆ?
ಕೆಲವು ಸಮಯದ ಹಿಂದೆ ನನ್ನ ಮಗ ಕಾಣೆಯಾಗಿದ್ದ. ಈಗ, ನನ್ನ ಮಗನ ದೇಹವು ಸಮಸ್ತಿಪುರದ ಸದರ್ ಆಸ್ಪತ್ರೆಯಲ್ಲಿದೆ ಎಂದು ನಮಗೆ ಕರೆ ಬಂದಿದೆ. ನನ್ನ ಮಗನ ದೇಹವನ್ನು ಬಿಡುಗಡೆ ಮಾಡಲು ಆಸ್ಪತ್ರೆಯ ಉದ್ಯೋಗಿಯೊಬ್ಬರು ₹ 50,000 ಕೇಳಿದ್ದಾರೆ. ನಾವು ಬಡವರು, ಇಷ್ಟೊಂದು ಹಣವನ್ನು ನಾವೆಲ್ಲಿಂದ ತರಲಿ ಎಂದು ಹುಡುಗನ ತಂದೆ ಮಹೇಶ್ ಠಾಕೂರ್ ಪ್ರಶ್ನಿಸಿದ್ದಾರೆ.
ಇವರಾದರೂ ಕಡುಬಡತನದಲ್ಲಿ ಎಲ್ಲಿಂದ ಅಷ್ಟು ದೊಡ್ಡ ಮೊತ್ತ ತಂದಾರು? ಮನೆಗೆ ದೀಪವಾಗಬೇಕಿದ್ದ ಮಗನನ್ನು ಕಳೆದುಕೊಂಡ ನೋವು ಒಂದು ಕಡೆಯಾದರೆ, ಕೊನೆಗೆ ಆತನ ಶವ ಪಡೆಯಲೂ ಲಂಚ ಕೇಳಿದರೆ ಏನೂ ತಾನೆ ಮಾಡಿಯಾರೂ? “ಅಮ್ಮಾ ಭಿಕ್ಷೆ ಕೊಡಿ ಅಪ್ಪಾ ಭಿಕ್ಷೆ ಕೊಡಿ ನನ್ನ ಮಗನ ಶವ ನೋಡಬೇಕು.” ಅಂತ ಮಹೇಶ್ ಠಾಕೂರ್ ಮತ್ತು ಅವರ ಹೆಂಡತಿ ಮನೆ ಮನೆಗೆ ತೆರಳಿ, ತಮ್ಮ ನೋವು ಹೇಳಿಕೊಂಡು ಹಣಕ್ಕಾಗಿ ಅಂಗಲಾಚುತ್ತಿದ್ದಾರೆ.
ದಂಪತಿ ಭಿಕ್ಷೆ ಬೇಡುತ್ತಿರುವ ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿರುವ ಸಮಷ್ಟಿಪುರ ಸಿವಿಲ್ ಸರ್ಜನ್ ಡಾ. ಎಸ್ ಕೆ ಚೌಧರಿ, ಸಿಬ್ಬಂದಿ ಹಣ ಕೇಳಿರುವ ಸಾಧ್ಯತೆ ಇದೆ. ಆದರೆ, 50,000 ರೂ. ಕೇಳಿರಲಾರ,ʼʼ ಎಂದಿದ್ದಾರೆ. ಆಪಾದಿತ ಸಿಬ್ಬಂದಿಯೂ ಹಣ ಕೇಳಿಲ್ಲ ಎಂದಿದ್ದಾನೆ. ಆದರೆ, ಆತ ಈ ಹಿಂದೆಯೂ ಹಣಕ್ಕಾಗಿ ರೋಗಿಗಳನ್ನು ಪೀಡಿಸಿದ ಘಟನೆಯೂ ನಡೆದಿದೆ. ಈ ವಿಚಾರವನ್ನು ಗಮನಕ್ಕೆ ತಂದಾಗ ಲಂಚ ಕೇಳಿದವರು ಯಾರೇ ಆಗಿರಲಿ ಅವರನ್ನು ಬಿಡುವುದಿಲ್ಲ. ಇದು ಮಾನವೀಯತೆಗೆ ಮಸಿ ಬಳಿಯುವ ನಾಚಿಕೆಗೇಡಿನ ಸಂಗತಿ’ ಎಂದು ಡಾ.ಎಸ್.ಕೆ.ಚೌಧರಿ ಹೇಳಿದ್ದಾರೆ.
ಇದನ್ನೂ ಓದಿ:ಕೋತಿಗಳ ಮುಂದೆ ಮಂಗಾಟ ಮಾಡುವ ಮುನ್ನ ಈ ವೈರಲ್ ವಿಡಿಯೋ ನೋಡಿ