ಬೆಂಗಳೂರು: ಸುಮಧುರವಾದ ಸಂಗೀತದ ಗಾನ ಕಿವಿಯ ಮೇಲೆ ಬಿದ್ದರೆ ಎಷ್ಟೇ ಒತ್ತಡದಲ್ಲಿ ಇದ್ದರೂ ಒಮ್ಮೆ ಹಾಯ್ ಅನಿಸುತ್ತದೆ. ಸಂಗೀತಕ್ಕಿರುವ ಶಕ್ತಿಯೇ ಅಂಥದ್ದು. ಸಂಗೀತಗಾರರು ಸಂಗೀತದ ಉಪಕರಣಗಳನ್ನು ಬಳಸಿ ಸಂಗೀತವನ್ನು ನುಡಿಸುತ್ತಾರೆ. ಇಂತಹ ಸಂಗೀತ ಹೆಚ್ಚಿನ ಜನರ ಮನಸೆಳೆಯುತ್ತದೆ. ಆದರೆ ಇಲ್ಲೊಬ್ಬ ಮಹಿಳೆ ಜಲ ತರಂಗ್ ನ ಮೂಲಕ ಜನಪ್ರಿಯ ಭಕ್ತಿಗೀತೆ ಐಗಿರಿ ನಂದಿನಿ ಎಂಬ ಮಹಿಷಾಮರ್ದಿನಿ ಸ್ತೋತ್ರವನ್ನು ನುಡಿಸಿ ಸಂಗೀತ ಪ್ರಿಯರಿಗೆ ರಸದೌತಣ ಉಣಬಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ (Video Viral) ಆಗಿದ್ದು ಜನ ಮೆಚ್ಚುಗೆ ಸೂಚಿಸಿದ್ದಾರೆ.
ಮಹಿಳೆ ಜಲ ತರಂಗ್ ಮೂಲಕ ಐಗಿರಿ ನಂದಿನಿ ಸ್ತೋತ್ರ ನುಡಿಸಿದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ 32 ಲಕ್ಷ ವ್ಯೂಸ್ ಬಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯ ಸಂಗೀತಕ್ಕೆ ಹಾಗೂ ಆಕೆ ಅದಕ್ಕಾಗಿ ಬಳಸಿದ ವಾದ್ಯಕ್ಕೆ ಜನರು ತಮ್ಮ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೊದಲ್ಲಿ ಮಹಿಳೆ ನೀರು ತುಂಬಿದ ಕಪ್ ಗಳನ್ನು ಬಳಸಿಕೊಂಡು ಸಂಗೀತ ನುಡಿಸಿದ್ದಾರೆ. ಈ ಜಲತರಂಗ್ ನೀರು ತುಂಬಿದ ಬಟ್ಟಲುಗಳನ್ನೊಳಗೊಂಡ ವಿಶಿಷ್ಟವಾದ ತಾಳವಾದ್ಯವಾಗಿದೆ. ಈ ವಾದ್ಯ 17ನೇ ಶತಮಾನದಲ್ಲಿ ಭಾರತದಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ನೀರಿನಲ್ಲಿ ಶಬ್ದ ಉತ್ಪತ್ತಿಯಾಗುವ ಮೂಲಕ ಉತ್ತಮ ಸ್ವರಗಳನ್ನು ರೂಪಿಸುವುದು ಈ ಉಪಕರಣದ ಸಾಮರ್ಥ್ಯವಾಗಿದೆ.
ಐಗಿರಿ ನಂದಿನಿ ಎನ್ನುವುದು ಬಹಳ ಹಿಂದಿನ ಕಾಲದಿಂದಲೂ ಕೇಳಿ ಬರುತ್ತಿದ್ದ ಭಕ್ತಿಗೀತೆಯಾಗಿದೆ. ಇದು ದುರ್ಗಾದೇವಿಗೆ ಸಮರ್ಪಿತವಾದ ಸ್ತೋತ್ರವಾಗಿದೆ, ದುರ್ಗಾದೇವಿಯ ಸ್ವರೂಪಗಳ ಬಗ್ಗೆ ಗುಣಗಾನ ಮಾಡಿದ ಈ ಕಠಿಣ ಸ್ತೋತ್ರವನ್ನು ಮಹಿಳೆ ಜಲತರಂಗ್ ನ ಮೂಲಕ ನುಡಿಸಿದ್ದು ಜನರ ಮನಸೆಳೆದಿದೆ.
ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯ ಈ ಪ್ರದರ್ಶನಕ್ಕೆ ವೀಕ್ಷಕರು ವಿಸ್ಮಯಗೊಂಡಿದ್ದಾರೆ. ಅನೇಕರು ಆಕೆಯ ಸಂಗೀತ ಕೌಶಲ್ಯವನ್ನು ಹೊಗಳಿದ್ದಾರೆ. ಹಾಗೇ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಅದರ ವಿಶಿಷ್ಟ ವಾದ್ಯಗಳನ್ನು ಮಹಿಳೆಯು ಈ ವಿಡಿಯೋ ಎತ್ತಿ ತೋರಿಸಿದ್ದಾರೆ. ಹಾಗಾಗಿ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಎನ್ನಲಾಗಿದೆ.
ಹಾಗೇ ಇಂತಹ ಸಂಗೀತ ಕಲೆಗಳನ್ನು ಪ್ರತಿ ಸಂಗೀತ ಶಾಲೆಯಲ್ಲಿ ಮಕ್ಕಳಿಗೆ ಕಲಿಸಬೇಕು ಎಂದು ಜನರು ಸಲಹೆ ನೀಡಿದ್ದಾರೆ. ಪರಿಪೂರ್ಣ ಸಿಂಕ್ರೊನೈಸೇಶನ್ ಅನ್ನು ಸಮತೋಲನಗೊಳಿಸುವಾಗ ನಿಮ್ಮ ಮುಖದ ಮೇಲಿನ ನಗು ಒಂದು ಶತಕೋಟಿಗೂ ಹೆಚ್ಚಿನ ಪ್ರಯತ್ನಗಳಿಗೆ ಸಮಾನವಾಗಿದೆ ಎಂದು ಇನ್ನೊಬ್ಬ ವೀಕ್ಷಕರು ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಅಂಗಡಿಯಲ್ಲಿ ಮೊಟ್ಟೆ ಕದ್ದು ಸಿಕ್ಕಿಬಿದ್ದ ಕಳ್ಳಿ, ವೈರಲ್ ಆದ ವಿಡಿಯೊ
ಸೋಷಿಯಲ್ ಮೀಡಿಯಾಗಳಲ್ಲಿ ಇದೇ ರೀತಿಯ ಹಲವು ವಿಡಿಯೋಗಳು ಹರಿದಾಡುತ್ತವೆ. ಸೋಷಿಯಲ್ ಮೀಡಿಯಾಗಳು ಒಂದು ಪ್ರಕಾರದಲ್ಲಿ ಜನರಿಗೆ ಕೆಟ್ಟದನ್ನು ಉಂಟುಮಾಡಿದರೆ , ಇನ್ನೊಂದು ಪ್ರಕಾರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಭೆಗಳನ್ನು ಗುರುತಿಸುವಂತಾಗಿದೆ. ಹಾಗಾಗಿ ಈ ಸೋಷಿಯಲ್ ಮೀಡಿಯಾದಲ್ಲಿ ಇಂತಹ ಹಲವಾರು ಪ್ರತಿಭೆಗಳು ಹೊರಬರುವಂತಾಗಲಿ ಮತ್ತು ಜನರು ಅದನ್ನು ಒಳ್ಳೆಯದಕ್ಕೆ ಬಳಸಿಕೊಳ್ಳಲಿ ಎಂಬುದು ನಮ್ಮ ಆಶಯ.