ಭೋಪಾಲ್: ಇಲಿ (Rat) ಕಾಟದಿಂದ ಹೈರಾಣಾದ ಬಹುತೇಕರಿದ್ದಾರೆ. ನಗರ ಇರಲಿ, ಗ್ರಾಮೀಣ ಪ್ರದೇಶ ಇರಲಿ ಈ ಮೂಷಿಕ ಎಲ್ಲೆಂದರಲ್ಲಿ ಕಾಣಿಸಿಕೊಂಡು ಕಣ್ಣಿಗೆ ಕಂಡಿದ್ದನ್ನೆಲ್ಲ ಕಡಿದು ಹಾಕುತ್ತದೆ. ಇಲಿ ಕಾಟದಿಂದ ಜನ ಸಾಮಾನ್ಯರು ಮಾತ್ರವಲ್ಲ ಪೊಲೀಸರೂ ಬೇಸತ್ತಿದ್ದಾರೆ. ಎಲ್ಲಿಯವರೆಗೆ ಪೊಲೀಸರು ರೋಸಿ ಹೋಗಿದ್ದಾರೆ ಎಂದರೆ ಇಲಿಗೆ ʼಬಂಧನʼದ ಶಿಕ್ಷೆಯನ್ನೂ ನೀಡಿದ್ದಾರೆ. ಹೌದು, ಮಧ್ಯ ಪ್ರದೇಶದ ಛಿಂದ್ವಾರದಲ್ಲಿ (Chhindwara) ಪೊಲೀಸರು ಕಾಟ ಕೊಡುತ್ತಿದ್ದ ಇಲಿಯನ್ನು ಬಂಧಿಸಿ ಬೋನಿನಲ್ಲಿಟ್ಟಾರೆ (Viral News).
ಆಗಿದ್ದೇನು?
ಛಿಂದ್ವಾರದ ಪೊಲೀಸ್ ಗೋದಾಮಿನಲ್ಲಿ ಸಂಗ್ರಹಿಸಿ ಇರಿಸಿದ್ದ ಮದ್ಯದ ಪ್ಲಾಸ್ಟಿಕ್ ಬಾಟಲಿಗಳನ್ನು ಕೊರೆದು ಇಲಿಗಳು ಸಾಕಷ್ಟು ಮದ್ಯವನ್ನು ಖಾಲಿ ಮಾಡಿವೆ. ಈ ಮದ್ಯವನ್ನು ಇಲಿಗಳು ಕುಡಿದಿವೆಯೋ ಅಥವಾ ಬಾಟಲಿ ಕೊರೆದ ಕಾರಣ ಸೋರಿಕೆಯಾಗಿ ಹೋಗಿದೆಯೊ ಗೊತ್ತಿಲ್ಲ. ಆದರೆ ಪೊಲೀಸರು ಈ ಇಲಿಗಳ ಕಾಟದಿಂದ ಬೇಸತ್ತಿದ್ದಾರೆ. ಹೀಗಾಗಿ ಇಲಿ ಹಿಡಿಯಲು ಗೋದಾಮಿನಲ್ಲಿ ಬೋನು ಇರಿಸಿದ್ದಾರೆ. ಇದರಲ್ಲಿ ಒಂದು ಇಲಿ ಸಿಕ್ಕಿ ಬಿದ್ದಿದೆ.
ಸುಮಾರು 60- 65 ಸಣ್ಣ ಪ್ಲಾಸ್ಟಿಕ್ ಬಾಟಲಿಗಳಲ್ಲಿದ್ದ ಮದ್ಯ ಖಾಲಿಯಾಗಿದೆ. ಸದ್ಯ ಮದ್ಯ ವಶ ಪಡಿಸಿಕೊಂಡ ಪ್ರಕರಣ ಇನ್ನೂ ನ್ಯಾಯಾಲಯದ ವಿಚಾರಣೆ ಹಂತದಲ್ಲಿದೆ. ಕೋರ್ಟ್‌ಗೆ ಸಾಕ್ಷಿಯಾಗಿ ಮದ್ಯವನ್ನು ಪೊಲೀಸರು ಹಾಜರುಪಡಿಸಬೇಕಿತ್ತು. ಆದರೆ ಅದನ್ನು ಇಲಿಗಳು ನಾಶ ಮಾಡಿದ್ದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಅವರು ಗೋದಾಮಿನಲ್ಲಿರುವ ಇಲಿಗಳ ನಾಶಕ್ಕೆ ಮುಂದಾಗಿದ್ದಾರೆ.
ಇಲಿಗಳ ಕಾಟ ಸಾಮಾನ್ಯ
ಪೊಲೀಸ್ ಠಾಣೆ ಕಟ್ಟಡ ತುಂಬ ಹಳೆಯದಾಗಿದ್ದು, ಇಲ್ಲಿ ಇಲಿಗಳ ಕಾಟ ಸಾಕಷ್ಟಿದೆ. ಅಲ್ಲಿ ಇಲ್ಲಿ ಓಡಾಡಿಕೊಂಡು ಸಮಸ್ಯೆ ತಂದೊಡ್ಡುತ್ತವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Viral Video: ಇಂಥವರೂ ಇರ್ತಾರೆ ನೋಡಿ! ನಿರ್ಮಾಣ ಹಂತದ ರಸ್ತೆಯನ್ನೇ ದೋಚಿದ ಖತರ್ನಾಕ್ ಗ್ರಾಮಸ್ಥರು!
ಹಿಂದೆಯೂ ನಡೆದಿತ್ತು
ಪೊಲೀಸ್ ಠಾಣೆಯಲ್ಲಿ ಇಲಿಗಳ ಕಾಟದ ಬಗ್ಗೆ ಆರೋಪ ಕೇಳಿ ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಮಧ್ಯ ಪ್ರದೇಶದ ಶಾಜಾಪುರ ಜಿಲ್ಲಾ ನ್ಯಾಯಾಲಯದಲ್ಲಿ ಇದೇ ರೀತಿಯ ಘಟನೆಯನ್ನು ಪೊಲೀಸರು ವಿವರಿಸಿದಾಗ ನ್ಯಾಯಾಧೀಶರು ಮತ್ತು ಇಡೀ ನ್ಯಾಯಾಲಯದ ಸಿಬ್ಬಂದಿ ನಕ್ಕಿದ್ದರು. 2018ರಲ್ಲಿ ಉತ್ತರ ಪ್ರದೇಶದ ಬರೇಲಿಯ ಕಂಟೋನ್ಮೆಂಟ್ ಪೊಲೀಸ್ ಠಾಣೆಯ ಉಗ್ರಾಣದಲ್ಲಿ ಇರಿಸಲಾಗಿದ್ದ 1,000 ಲೀಟರ್ ಮದ್ಯವು ಕಣ್ಮರೆಯಾಗಿತ್ತು. ಸ್ಥಳೀಯ ಪೊಲೀಸರು ಇಲಿಗಳು ಮದ್ಯವನ್ನು ಖಾಲಿ ಮಾಡಿವೆ ಎಂದು ಹೇಳಿದ್ದರು. ಅಲ್ಲದೆ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ಇಲಿಗಳು ನಾಶಪಡಿಸಿದ್ದರಿಂದ ಆರೋಪಿಗಳು ಖುಲಾಸೆಗೊಂಡ ಘಟನೆ ಕೆಲವು ತಿಂಗಳ ಹಿಂದೆ ತಮಿಳುನಾಡಿನಲ್ಲಿ ನಡೆದಿತ್ತು. ಚೆನ್ನೈನ ಮರೀನಾ ಪೊಲೀಸ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಾದಕ ದ್ರವ್ಯ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿ 22 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದರು. ಈ ಮಾದಕ ವಸ್ತುಗಳನ್ನು ಅವರು ಪೊಲೀಸ್ ಠಾಣೆಯ ಉಗ್ರಾಣದಲ್ಲಿ ಇರಿಸಿದ್ದರು. ಆದರೆ ಇಲ್ಲೂ ಇಲಿಗಳು ತಮ್ಮ ಕರಾಮತ್ತು ತೋರಿದ್ದವು. ಪೊಲೀಸ್ ಠಾಣೆಯ ಸ್ಟೋರ್‌ನಲ್ಲಿ ಸಂಗ್ರಹಿಸಿದ್ದ 22 ಕೆ.ಜಿ. ಗಾಂಜಾವನ್ನು ಇಲಿಗಳು ತಿಂದು ಮುಗಿಸಿದ್ದವು. ಕೊನೆಗೆ ಸಾಕ್ಷ್ಯ ಕೊರತೆಯ ಕಾರಣದಿಂದ ಅಪರಾಧಿಗಳು ಪಾರಾಗಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ