Site icon Vistara News

Viral News : 77 ವರ್ಷಗಳ ನಂತರ ಪಾಕ್‌ನಲ್ಲಿರುವ ಪೂರ್ವಜರ ಗ್ರಾಮಕ್ಕೆ ಭೇಟಿ ಕೊಟ್ಟ 98ರ ವೃದ್ಧ

#image_title

ನವ ದೆಹಲಿ: ಭಾರತ ಮತ್ತು ಪಾಕಿಸ್ತಾನ ವಿಭಜನೆಯು ಹಲವಾರು ಕುಟುಂಬಗಳನ್ನು ಇಬ್ಭಾಗ ಮಾಡಿರುವುದು ನಮಗೆಲ್ಲರಿಗೂ ತಿಳಿದೇ ಇದೆ. ಇಂದಿಗೂ ಭಾರತದಲ್ಲಿರುವ ಅದೆಷ್ಟೋ ಕುಟುಂಬಗಳು ಪಾಕಿಸ್ತಾನದಲ್ಲಿರುವ ತಮ್ಮ ಪೂರ್ವಜರ ಮನೆಗೆ ಭೇಟಿ ನೀಡಲಾಗದ ಸ್ಥಿತಿಯಲ್ಲಿವೆ. ಹಾಗೆಯೇ ಪಾಕಿಸ್ತಾನ ಹಲವಾರು ಕುಟುಂಬಗಳು ಕೂಡ ಇದೇ ಪರಿಸ್ಥಿತಿಯಲ್ಲಿವೆ. ಹೀಗಿರುವಾಗ ಭಾರತದ 98 ವರ್ಷದ ವೃದ್ಧರೊಬ್ಬರು ಪಾಕಿಸ್ತಾನದಲ್ಲಿರುವ ತಮ್ಮ ಪೂರ್ವಜರ ಗ್ರಾಮಕ್ಕೆ 77 ವರ್ಷಗಳ ನಂತರ ಭೇಟಿ ಕೊಟ್ಟು ಬಂದಿದ್ದಾರೆ.

ಪಂಜಾಬ್‌ ಮೂಲದ ಬಾಬಾ ಪುರಾನ್‌ ಸಿಂಗ್‌ ಅವರು ಇತ್ತೀಚೆಗೆ ಪಾಕಿಸ್ತಾನಕ್ಕೆ ತೆರಳಿದ್ದರು. ಪಾಕ್‌ನ ಗುಜ್ರಾನ್‌ವಾಲಾ ಜಿಲ್ಲೆಯ ಕೋಟ್‌ ದೇಸ್ರಾಜ್‌ ಗ್ರಾಮದ ಬೀದಿಗೆ ತಲುಪುತ್ತಿದ್ದಂತೆ ಅಲ್ಲಿನ ಜನ ಪುರಾನ್‌ ಅವರಿಹ ಹೂವು ಚೆಲ್ಲಿ ಸ್ವಾಗತ ಕೋರಿದ್ದಾರೆ. ಪ್ರೀತಿಯಿಂದ ಹಾರ ಹಾಕಿ ಮೆರವಣಿಗೆ ಮೂಲಕ ಅವರನ್ನು ಅವರನ್ನು ಊರೊಳಗೆ ಕರೆದೊಯ್ಯಲಾಗಿದೆ.

ತನ್ನ ಬಾಲ್ಯವನ್ನು ಕಳೆದ ಊರನ್ನು ಕಂಡೊಡನೆ ಪುರಾನ್‌ ಅವರನ್ನು ಖುಷಿಯಿಂದ ಸಂಭ್ರಮಿಸಿದ್ದಾರೆ. ಬಾಲ್ಯದ ಕೆಲ ಸ್ನೇಹಿತರನ್ನು ಮಾತನಾಡಿಸಿ, ಅಪ್ಪಿಕೊಂಡಿದ್ದಾರೆ. ಸಂಭ್ರಮದಿಂದ ಮಾತನಾಡಿರುವ ಅವರು, “ನಾನು 21 ವರ್ಷದವನಿದ್ದಾಗ ಈ ಊರನ್ನು ಬಿಟ್ಟು ಹೋಗಬೇಕಾಯಿತು. ಆಗ ಇದ್ದ ಊರಿಗೂ ಈಗಿನ ಊರಿಗೂ ತುಂಬಾ ವ್ಯತ್ಯಾಸವಿದೆ. ಆಗ ನಮಗೆ ಬೇರೆ ಯಾವುದೇ ಊರಿಗೆ ಹೋಗಬೇಕೆಂದರೂ ರಸ್ತೆ ಇರಲಿಲ್ಲ. ನಡೆದುಕೊಂಡೇ ಊರೂರು ಸುತ್ತುತ್ತಿದ್ದೆವು. ಈಗ ಹೊಸ ಹೊಸ ರಸ್ತೆಗಳಾಗಿವೆ. ಗುರುತು ಸಿಗುವುದೇ ಕಷ್ಟ ಎನ್ನುವಷ್ಟು ಅಭಿವೃದ್ಧಿ ಇಲ್ಲಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Pakistan: ಪಾಕಿಸ್ತಾನದಲ್ಲಿ ಪೆಟ್ರೋಲ್ 10 ರೂ. ದರ ಹೆಚ್ಚಳ, ಈಗ ಲೀಟರ್‌ಗೆ 282 ರೂಪಾಯಿ!
ಪುರಾನ್‌ ಅವರ ಜೀವನದ ಈ ವಿಶೇಷ ದಿನಕ್ಕೆಂದು ಡಿಜಿಟಲ್‌ ಕ್ರಿಯೇಟರ್‌ ಮತ್ತು ಬ್ಲಾಗರ್‌ ಆಗಿರುವವ ನಾಸಿರ್‌ ಧಿಲ್ಲೋನ್‌ ಅವರು ಊರವರೆಲ್ಲರನ್ನೂ ಸೇರಿಸಿ ವಿಶೇಷ ಸಭೆಯನ್ನೂ ಏರ್ಪಡಿಸಿದ್ದರು. ಈ ವಿಶೇಷ ದಿನದ ವಿಡಿಯೊವನ್ನು ಪಂಜಾಬಿ ಲೆಹರ್‌ ಟಿವಿ ಚಾನೆಲ್‌ನ ಯೂಟ್ಯೂಬ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ.
ಪುರಾನ್‌ ಅವರು ತಮ್ಮ ಊರಿಗೆ ತೆರಳಿದ್ದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. “ಇದು ಹೃದಯಸ್ಪರ್ಶಿ ವಿಚಾರ” ಎಂದು ಜನರು ಕಾಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ.

Exit mobile version