ಹರ್ಯಾಣ: ಬಸ್ ಹತ್ತಿದ ತಕ್ಷಣ ಕಂಡಕ್ಟರ್ ಮೊದಲು ಕೇಳುವುದು ʼಎಲ್ಲಿಗೆʼ ಎಂಬ ಪ್ರಶ್ನೆ. ನಾವು ಉತ್ತರಿಸಿದ ಕೂಡಲೇ ಅವರು ಟಿಕೆಟ್ ಕೊಡುತ್ತಾರೆ. ನಾವದಕ್ಕೆ ಹಣ ಕೊಡುತ್ತೇವೆ. ಆದರೆ ಹರ್ಯಾಣದಲ್ಲಿ ಒಬ್ಬ ಬಸ್ ಕಂಡಕ್ಟರ್ ಇದ್ದಾರೆ. ಅವರು ಪ್ರಯಾಣಿಕರಿಗೆ ಟಿಕೆಟ್ ಕೊಡುವುದಕ್ಕೂ ಮೊದಲು ಬೇರೊಂದನ್ನು ಕೊಡುತ್ತಾರೆ. ಯಾವುದೇ ಸ್ಟಾಪ್‌ನಲ್ಲಿ ಹತ್ತುವ ಪ್ರಯಾಣಿಕರೆಡೆಗೆ ನಗುತ್ತ ಬರುವ ಅವರ ಕೈಯಲ್ಲಿ ಇರುವ ವಸ್ತುವನ್ನು ನೋಡಿ ನೆಟ್ಟಿಗರು ಫುಲ್ ಖುಷಿಯಾಗಿದ್ದಾರೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಈ ಕಂಡಕ್ಟರ್ ಕತೆಯನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗೇ ಫೋಟೋವನ್ನೂ ಶೇರ್ ಮಾಡಿದ್ದಾರೆ.
ಬಸ್ ಕಂಡಕ್ಟರ್ ಹೆಸರು ಸುರೇಂದ್ರ ಶರ್ಮಾ. ರೋಹ್ಟಕ್ ನಿವಾಸಿಯಾಗಿರುವ ಇವರು ಹರ್ಯಾಣ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಬಸ್ ಹತ್ತುವ ಪ್ರಯಾಣಿಕರಿಗೆ ಮೊಟ್ಟಮೊದಲು ಒಂದು ಗ್ಲಾಸ್ ನೀರನ್ನು ಕೊಟ್ಟು ಉಪಚರಿಸುತ್ತಾರೆ. ಸುಮಾರು 12 ವರ್ಷಗಳಿಂದಲೂ ಹೀಗೆ ಮಾಡುತ್ತಿದ್ದಾರಂತೆ. ಬಾಯ್ತುಂಬ ನಗುತ್ತ, ನೀರು ಹಿಡಿದು ಪ್ರಯಾಣಿಕರ ಬಳಿ ಹೋಗುವ ಕಂಡಕ್ಟರ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
ಮನೆಗೆ ಬಂದ ಅತಿಥಿಗಳಿಗೆ ಮೊದಲು ನೀರು ಕೊಟ್ಟು ನಮಸ್ಕರಿಸುವ ಪದ್ಧತಿ ಹಿಂದೂ ಧರ್ಮದಲ್ಲಿದೆ. ಇವತ್ತಿಗೂ ಅನೇಕ ಮನೆಗಳಲ್ಲಿ ಈ ಆಚರಣೆ ನಡೆಯುತ್ತದೆ. ಅದೇ ರೀತಿ ಕಂಡಕ್ಟರ್ ಕೂಡ ಬಸ್ ಹತ್ತಿದ ತಕ್ಷಣ ಆ ಪ್ರಯಾಣಿಕನಿಗೆ ನೀರು ಕೊಡುತ್ತಾರೆ. ನಂತರ ಟಿಕೆಟ್ ನೀಡುತ್ತಾರೆ. ಇದನ್ನು ನೋಡಿದ ಸೋಷಿಯಲ್ ಮೀಡಿಯಾ ಬಳಕೆದಾರರು ಧಾರ್ಮಿಕ ಪದ್ಧತಿಯ ಆಚರಣೆ ಜತೆ, ಪ್ರಯಾಣಿಕನ ಸುಸ್ತು ನೀಗಿಸದಂತೆಯೂ ಆಯಿತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ʼಇವರೆಲ್ಲ ಭಾರತದ ನಿಜವಾದ ಹಿರೋಗಳುʼ ಎಂದು ಒಬ್ಬರು ಹೇಳಿದ್ದರೆ, ಇನ್ನೊಬ್ಬರು, ʼಹೌದು, ಈ ಕಂಡಕ್ಟರ್ ಬಗ್ಗೆ ನನಗೂ ಗೊತ್ತು. ನಾನವರನ್ನು ನೋಡಿದ್ದೇನೆʼ ಎಂದು ತಿಳಿಸಿದ್ದಾರೆ. ʼದಯೆ ಯಾವಾಗಲೂ ಗೆಲ್ಲುತ್ತದೆ, ದೇವರು ಅವರಿಗೆ ಒಳೆಯದು ಮಾಡಲಿʼ ಎಂದು ಹಲವರು ಹಾರೈಸಿದ್ದಾರೆ.
ಇದನ್ನೂ ಓದಿ: ಪುಟ್ಟ ಮಗನಿಗೆ ಈಜು ಕಲಿಸಲು ಯತ್ನಿಸಿದ ತಾಯಿಗೆ ಏನಾಯ್ತು?-ಫನ್ನಿ ವಿಡಿಯೋ ವೈರಲ್