ಪುಣೆ: ಆನಂದದಿಂದ ಸಮೋಸಾ (Samosa) ತಿನ್ನಲೆಂದು ಬಾಯಿ ಹಾಕಿದಾಗ ಅದರೊಳಗೆ ಕಾಂಡೋಮ್ (Condom), ಗುಟ್ಕಾ (Gutka) ಅಥವಾ ಕಲ್ಲು ಸಿಕ್ಕಿದರೆ ನಿಮ್ಮ ಪರಿಸ್ಥಿತಿ ಏನಾಗಬೇಡ! ಪುಣೆಯಲ್ಲಿ (Pune) ಇಂಥದೊಂದು ಘಟನೆ ನಡೆದಿದೆ. ಇಲ್ಲಿನ ಪಿಂಪರಿ ಚಿಂಚ್‌ವಾಡ್ ಮೂಲದ ಪ್ರಮುಖ ಆಟೋಮೊಬೈಲ್ (Automobile) ಕಂಪನಿಗೆ ಸರಬರಾಜು ಮಾಡಿದ ಸಮೋಸಾಗಳಲ್ಲಿ ಕಾಂಡೋಮ್, ಗುಟ್ಕಾ ಮತ್ತು ಕಲ್ಲುಗಳು ಪತ್ತೆಯಾಗಿವೆ. ಇದಾದ ನಂತರ ಐದು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಈ ಸುದ್ದಿ ವೈರಲ್ (Viral News) ಆಗಿದೆ.
ಆರೋಪಿಗಳನ್ನು ರಹೀಮ್ ಶೇಖ್, ಅಜರ್ ಶೇಖ್, ಮಝರ್ ಶೇಖ್, ಫಿರೋಜ್ ಶೇಖ್ ಮತ್ತು ವಿಕ್ಕಿ ಶೇಖ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಬಂಧಿತರಲ್ಲಿ ಸಮೋಸಾಗಳನ್ನು ಸರಬರಾಜು ಮಾಡಲು ಒಪ್ಪಂದ ಮಾಡಿಕೊಳ್ಳಲಾದ ಉಪಗುತ್ತಿಗೆ ಸಂಸ್ಥೆಯ ಇಬ್ಬರು ಕಾರ್ಮಿಕರು, ಮತ್ತು ಈ ಹಿಂದೆ ಸಮೋಸಾ ಪೂರೈಸುತ್ತಿದ್ದ ಸಂಸ್ಥೆಯ ಮತ್ತೊಂದು ಸಂಸ್ಥೆಯ ಮೂವರು ಪಾಲುದಾರರೂ ಸೇರಿದ್ದಾರೆ. ಹೊಸ ಸಂಸ್ಥೆಯ ಹೆಸರು ಕೆಡಿಸುವುದಕ್ಕಾಗಿಯೇ ಹೀಗೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.
ಪೊಲೀಸರ ಪ್ರಕಾರ, ಆಟೋಮೊಬೈಲ್ ಸಂಸ್ಥೆಯ ಕ್ಯಾಂಟೀನ್‌ಗೆ ತಿಂಡಿಗಳನ್ನು ಒದಗಿಸುವ ಜವಾಬ್ದಾರಿಯನ್ನು ಕ್ಯಾಟಲಿಸ್ಟ್ ಸರ್ವೀಸ್ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್ ಹೊಂದಿತ್ತು. ಈ ಸಂಸ್ಥೆಯು ಮನೋಹರ್ ಎಂಟರ್‌ಪ್ರೈಸ್ ಹೆಸರಿನ ಮತ್ತೊಂದು ಉಪಗುತ್ತಿಗೆ ಸಂಸ್ಥೆಗೆ ಸಮೋಸಾ ನೀಡುವ ಉಪಗುತ್ತಿಗೆಯನ್ನು ನೀಡಿತ್ತು.
ಇದಕ್ಕೂ ಮುನ್ನ ಸಮೋಸಾ ಒದಗಿಸುವ ಗುತ್ತಿಗೆಯನ್ನು ಪುಣೆ ಮೂಲದ ಎಸ್‌ಆರ್‌ಎ ಎಂಟರ್‌ಪ್ರೈಸಸ್ ಹೊಂದಿತ್ತು. ಆದರೆ, ತಿಂಡಿಯಲ್ಲಿ ಕಲಬೆರಕೆ ಮಾಡಿದ್ದಕ್ಕಾಗಿ ಈ ಸಂಸ್ಥೆಯ ಜೊತೆಗಿನ ಒಪ್ಪಂದ ರದ್ದುಪಡಿಸಲಾಗಿತ್ತು. ಇವರು ಒದಗಿಸಿದ ಸಮೋಸಾಗಳನ್ನು ಫಸ್ಟ್ ಏಯ್ಡ್ ಬ್ಯಾಂಡೇಜ್‌ಗಳು ಕಂಡುಬಂದ ನಂತರ ಒಪ್ಪಂದ ರದ್ದುಪಡಿಸಲಾಗಿತ್ತು.
ಇದರಿಂದ ರೊಚ್ಚಿಗೆದ್ದ ಎಸ್‌ಆರ್‌ಎ ಎಂಟರ್‌ಪ್ರೈಸಸ್‌ನ ಮೂವರು ಪಾಲುದಾರರಾದ ರಹೀಮ್ ಶೇಖ್, ಅಜರ್ ಶೇಖ್, ಮಝರ್ ಶೇಖ್ ಎಂಬವರು ಒಳಸಂಚು ಹೂಡಿ, ತನ್ನ ಇಬ್ಬರು ಉದ್ಯೋಗಿಗಳಾದ ಫಿರೋಜ್ ಶೇಖ್ ಮತ್ತು ವಿಕ್ಕಿ ಶೇಖ್ ಎಂಬವರನ್ನು ಮಹೋಹರ್ ಎಂಟರ್‌ಪ್ರೈಸ್‌ಗೆ ಕಳಿಸಿದ್ದರು. ಇವರು ಸಮೋಸಾಗಳಲ್ಲಿ ಕಾಂಡೋಮ್, ಗುಟ್ಕಾ ಮತ್ತು ಕಲ್ಲುಗಳನ್ನು ತುಂಬಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿಷದ ಮೂಲಕ ಹಾನಿ ಮಾಡುವ ಸಂಚು, ಕ್ರಿಮಿನಲ್ ಪಿತೂರಿ, ಕಲಬೆರಕೆ ಸೇರಿದಂತೆ ಕಾನೂನಿನ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಇವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Viral News: ರಿಕ್ಷಾದ ಟಾಪ್‌ಗೆ ಹತ್ತಿ ಸ್ಟೆಪ್ ಹಾಕಿದ ಯುವಕ; ವಿಡಿಯೊ ಕೊನೆಯಲ್ಲಿರುವ ರೋಚಕ ಟ್ವಿಸ್ಟ್ ಮಿಸ್ ಮಾಡದೆ ನೋಡಿ