ಹರಿಯಾಣ: ಚುನಾವಣೆ(Election) ಅಂದ್ರೆನೇ ಹಾಗೆಯೇ ಅದೊಂದು ತರಹ ಯುದ್ಧದ ರೀತಿಯೇ ಭಾಸವಾಗುತ್ತದೆ. ತಮ್ಮ ತಮ್ಮ ನೆಚ್ಚಿನ ಪಕ್ಷಗಳು, ನಾಯಕರ ಗೆಲುವಿಗೆ ನೂರಾರು ಕಾರ್ಯಕರ್ತರು, ಬೆಂಬಲಿಗರು ಹಂಬಲಿಸೋದು ಸಹಜ. ಕೆಲವೊಮ್ಮೆ ಕಾರ್ಯಕರ್ತರ ಪಕ್ಷದ ಬಗೆಗಿನ ಒಲವು ಅತಿರೇಕಕ್ಕೆ ತಿರುಗಿದಾಗ ಅನೇಕ ಅವಘಡಗಳು ಸಂಭವಿಸುತ್ತಿರುತ್ತವೆ. ಅಂತಹದ್ದೇ ಒಂದು ಘಟನೆ(Viral News) ಹರಿಯಾಣದಲ್ಲಿ ನಡೆದಿದೆ. ಇಲ್ಲಿ ಹಿಸಾರ್ ಜಿಲ್ಲೆಯ ಮಿರ್ಜಾಪುರ ರಸ್ತೆ ಕಾಲೋನಿಯಲ್ಲಿ ವ್ಯಕ್ತಿಯೊಬ್ಬ ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಕಳಪೆ ಪ್ರದರ್ಶನ ತೋರಿರುವುದಕ್ಕೆ ಬೇಸರ ವ್ಯಕ್ತಪಡಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಘಟನೆ ವಿವರ:
ಶ್ರೀನಗರ ಗ್ರಾಮದ ಸುಖ್ವಿಂದರ್ ಎಂಬಾತ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ಬಹುಮತ ಗಳಿಸುವಲ್ಲಿ ವಿಫಲರಾಗಿರುವ ಹಿನ್ನೆಲೆ ಖಿನ್ನತೆಗೊಳಗಾಗಿದ್ದ, ಜೂ.4ರಂದು ಫಲಿತಾಂಶ ಬಂದ ನಂತರ ಅವರು ಖಿನ್ನತೆಗೊಳಗಾಗಿದ್ದರು. ಕುಟುಂಬಸ್ಥರು ಆತನಿಗೆ ಎಷ್ಟೇ ಸಮಾಧಾನ ಹೇಳಿದರೂ ಆತ ಏನೂ ಹೇಳದೇ ಬರೀ ಮೌನ ವಹಿಸಿದ್ದ. ಇದೇ ಬೇಸರದಲ್ಲಿ ಆತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಇಂತಹದ್ದೇ ಒಂದು ಛತ್ತೀಸ್‌ಗಡದಲ್ಲಿ ನಡೆದಿತ್ತು. ಎನ್‌ಡಿಎ(NDA) ಬಹುಮತದೊಂದಿಗೆ ಗೆಲವು ಸಾಧಿಸಿರುವ ಹಿನ್ನೆಲೆ ವ್ಯಕ್ತಿಯೊಬ್ಬ ತನ್ನ ಬೆರಳು ಕತ್ತರಿಸಿ ಕಾಳಿ ದೇವಿಗೆ ಅರ್ಪಿಸಿದ್ದಾನೆ.ಛತ್ತೀಸ್‌ಗಡದ ಬಾಲರಾಮ್‌ಪುರದಲ್ಲಿ ಈ ಘಟನೆ ನಡೆದಿದ್ದು, ದುರ್ಗೇಶ್ ಪಾಂಡೆ ಎಂಬಾತನೇ ಬಿಜೆಪಿ ಬೆಂಬಲಿಗ. ಜೂ.4ರಂದು ಚನಾವಣಾ ಫಲಿತಾಂಶ ಹೊರಬಿದ್ದಾಗ ಆರಂಭದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುತ್ತಿದ್ದಂತೆ ತೀವ್ರ ಬೇಸರಗೊಂಡಿದ್ದನಂತೆ. ಈ ಬಾರಿ ಅಧಿಕಾರ ಎನ್‌ಡಿಎ ಕೈ ತಪ್ಪಿ ಹೋಗುತ್ತದೆ ಎಂಬ ಆತಂಕಕ್ಕೆ ಬಿದ್ದ ದುರ್ಗೇಶ್, ಕಾಳಿ ಮಂದಿರಕ್ಕೆ ತೆರಳಿ ಬಿಜೆಪಿ ಗೆಲುವಿಗೆ ಪ್ರಾರ್ಥಿಸಿದ್ದಾನೆ. ಅಲ್ಲದೇ ತನ್ನ ಒಂದು ಬೆರಳನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ್ದಾನೆ.
ಇನ್ನು ಬೆರಳು ಕತ್ತರಿಸಿಕೊಂಡ ದುರ್ಗೇಶ್ ಪಾಂಡೆ, ಬಟ್ಟೆಯನ್ನು ಕಟ್ಟಿ ಸುರಿಯುತ್ತಿದ್ದ ರಕ್ತವನ್ನು ತಡೆಯಲು ಯತ್ನಿಸಿದ್ದಾನೆ. ಆದರೆ ರಕ್ತ ಮಾತ್ರ ನಿಲ್ಲಲೇ ಇಲ್ಲ. ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ ಆತನ ಕುಟುಂಬಸ್ಥರು ಆತನನ್ನು ತಕ್ಷಣ ಸಮಾರಿಯಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಆತನನ್ನು ಅಂಬಿಕಾಪುರದ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿತ್ತು. ಬಹಳ ಹೊತ್ತಾದ ಕಾರಣ ನಜ್ಜುಗುಜ್ಜಾಗಿದ್ದ ಆತನ ಬೆರಳನ್ನು ಮತ್ತೆ ಜೋಡಿಸಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: MUDA site scandal: ಮುಡಾ ನಿವೇಶನಗಳ ಹಂಚಿಕೆ ರದ್ದು; ಬಹುಕೋಟಿ ಹಗರಣದ ತನಿಖೆಗೆ ಸರ್ಕಾರ ಆದೇಶ