ಲಕ್ನೋ: ಉತ್ತರ ಪ್ರದೇಶದ ದೇವಸ್ಥಾನವೊಂದರ ಎದುರಿನಲ್ಲಿ ವ್ಯಕ್ತಿಯೊಬ್ಬ ತನ್ನ ತಾಯಿಯನ್ನು ಬೆನ್ನಟ್ಟಿ ಹೊಡೆಯುತ್ತಿರುವ ವಿಡಿಯೊ ವೈರಲ್ ಆಗಿತ್ತು. ಈ ಶಾಕ್‌ನಿಂದ ನೆಟ್ಟಿಗರು ಹೊರ ಬರುವ ಮುನ್ನವೇ ಅಂತಹದ್ದೇ ಇನ್ನೊಂದು ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸೆಕ್ಯೂರಿಟಿ ಗಾರ್ಡ್‌ಗಳು ರೋಗಿಯೊಬ್ಬರನ್ನು ಒದೆಯತ್ತಿರುವ ದೃಶ್ಯ ಇದಾಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ (Viral News). ಇದೂ ಕೂಡ ಉತ್ತರ ಪ್ರದೇಶದಲ್ಲಿಯೇ ನಡೆದಿರುವುದು ಕಾಕತಾಳೀಯ.
ಉತ್ತರ ಪ್ರದೇಶದ ರಾಯ್‌ಬರೇಲಿಯ ಏಮ್ಸ್ (AIIMS Raebareli)ನಲ್ಲಿ ಈ ಘಟನೆ ನಡೆದಿದೆ. ಏಮ್ಸ್‌ನ ಭದ್ರತಾ ಸಿಬ್ಬಂದಿ ರೋಗಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಘಟನೆಯನ್ನು ಸ್ಥಳದಲ್ಲಿದ್ದ ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಹರಿಯ ಬಿಟ್ಟಿದ್ದಾರೆ.
UP : रायबरेली एम्स में बाउंसरों ने एक मरीज को जूतों की ठोकर, लात-घूंसों से पीटा। वजह जो भी हो, पर ये गुंडई सरासर गलत है। pic.twitter.com/jZi1DX7VZK
— Sachin Gupta (@SachinGuptaUP) April 2, 2024
ಲಿಫ್ಟ್‌ಗೆ ಪ್ರವೇಶಿಸುವ ಬಗ್ಗೆ ನಡೆಯುವ ವಾಗ್ವಾದವನ್ನು ತೋರಿಸುವ ಮೂಲಕ ವಿಡಿಯೊ ಆರಂಭವಾಗುತ್ತದೆ. ನಂತರ ಭದ್ರತಾ ಸಿಬ್ಬಂದಿ ರೋಗಿಯನ್ನು ಎಳೆದೊಯ್ದು ನಿರ್ದಯವಾಗಿ ಥಳಿಸುತ್ತಿರುವುದನ್ನು ಕಂಡು ಬಂದಿದೆ. ಬಿಟ್ಟು ಬಿಡುವಂತೆ ಆ ರೋಗಿ ಅಂಗಲಾಚಿ ಬೇಡಿಕೊಂಡರು ಕರುಣೆ ತೋರದ ಸೆಕ್ಯುರಿಟಿ ಸರಿಯಾಗಿಯೇ ಒದೆಯುತ್ತಾರೆ. ಸದ್ಯ ಈ ಭದ್ರತಾ ಸಿಬ್ಬಂದಿ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಕ್ರಮದ ಭರವಸೆ
ಸಾರ್ವಜನಿಕರ ಆಕ್ರೋಶದ ನಂತರ ಸ್ಥಳೀಯ ಅಧಿಕಾರಿಗಳು ಮತ್ತು ಏಮ್ಸ್ ಆಡಳಿತವು ಸೆಕ್ಯುರಿಟಿ ಗಾರ್ಡ್‌ಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಸದ್ಯ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಒಂದು ವೇಳೆ ಇಂತಹ ಯಾವುದೇ ದೂರು ಬಂದರೂ ತ್ವರಿತವಾಗಿ ಪರಿಹರಿಸಲಾಗುವುದು ಎಂದು ಭದೋಹಿ ಪೊಲೀಸ್ ಠಾಣೆಯ ಉಸ್ತುವಾರಿ ಶಿವಕಾಂತ್ ಪಾಂಡೆ ತಿಳಿಸಿದ್ದಾರೆ. ಏಮ್ಸ್ ಉಪ ವೈದ್ಯಕೀಯ ಅಧೀಕ್ಷಕ ಡಾ.ಸುಯಾಶ್ ಸಿಂಗ್ ಅವರೂ ಘಟನೆಯನ್ನು ಖಂಡಿಸಿದ್ದು, ಈ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ನೆಟ್ಟಿಗರು ಏನಂದ್ರು?
ಈಗಾಗಲೇ ವಿಡಿಯೊವನ್ನು 15 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಭದ್ರತಾ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒಕ್ಕೊರಳಿಂದ ಆಗ್ರಹಿಸಿದ್ದಾರೆ. ʼʼನಾಚಿಗೆಗೇಡಿನ ಸಂಗತಿʼʼ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ʼʼಹಿಂದೆ ಬ್ರಿಟಿಷರು ಜನ ಸಾಮಾನ್ಯರನ್ನು ಶೋಷಣೆ ಮಾಡುತ್ತಿದ್ದರು. ಈಗ ರಾಜಕಾರಣಿಗಳು, ಭದ್ರತಾ ಸಿಬ್ಬಂದಿ, ಪೊಲೀಸರು ದಬ್ಬಾಳಿಕ ನಡೆಸುತ್ತಿದ್ದಾರೆʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಈ ದೇಶದಲ್ಲಿ ಜನ ಸಾಮಾನ್ಯರ ಪಾಡು ಯಾರಿಗೂ ಬೇಡʼʼ ಎನ್ನುವ ಅಭಿಪ್ರಾಯ ಮತ್ತೊಬ್ಬರದ್ದು. ʼʼಶೀಘ್ರ ಕಠಿಣ ಕ್ರಮ ಕೈಗೊಳ್ಳಿʼʼ ಎಂದು ಮಗದೊಬ್ಬರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Viral News: ತಾಯಿಯನ್ನೇ ದೇವಸ್ಥಾನದ ಸುತ್ತ ಅಟ್ಟಾಡಿಸಿ ಹಲ್ಲೆ ನಡೆಸಿದ ಪಾಪಿ ಪುತ್ರ; ಭಯಾನಕ ವಿಡಿಯೊ ಇಲ್ಲಿದೆ
ಹಿಂದೆಯೂ ನಡೆದಿತ್ತು
ರಾಯ್‌ಬರೇಲಿಯ ಏಮ್ಸ್‌ನಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದು ಮೊದಲ ಸಲವೇನಲ್ಲ ಎಂದು ಅನೇಕರು ಆರೋಪಿಸಿದ್ದಾರೆ. ರೋಗಿಗಳ ವಿರುದ್ಧ ದಬ್ಬಾಳಿಕೆ ನಡೆಸುವ ಇಂತಹ ವರ್ತನೆ ಪದೇ ಪದೆ ನಡೆಯುತ್ತಲೇ ಇರುತ್ತದೆ. ಸಿಬ್ಬಂದಿ ಆಗಾಗ ರೋಗಿಗಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಾರೆ ಅಥವಾ ಕೆಟ್ಟ ಪದಗಳಿಂದ ನಿಂದಿಸುತ್ತಿರುತ್ತಾರೆ. ದೂರು ನೀಡಿದರೂ ಆಡಳಿತ ಸಿಬ್ಬಂದಿ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ದೂರು ಕೇಳಿ ಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ