Site icon Vistara News

Viral News: ಕಾಯಿಲೆ ಗುರುತು ಹಿಡಿಯಲು ಖ್ಯಾತ ವೈದ್ಯರ ತಿಣುಕಾಟ; ಹತ್ತೇ ಸೆಕೆಂಡ್ ನಲ್ಲಿ ಪತ್ತೆಹಚ್ಚಿದ ಕೆಲಸದ ಮಹಿಳೆ!

Viral news

ತಿರುವನಂತಪುರಂ: ಕುಟುಂಬದ ಸದಸ್ಯರಿಗೆ ಇದ್ದ ರೋಗವನ್ನು ಗುರುತಿಸಲು ಮನೆಯ ಹಿರಿಯರು ಹೇಗೆ ಸಹಾಯ ಮಾಡಿದ್ದಾರೆ ಎಂಬುದನ್ನು ಕೇರಳದ (kerala) ಹೆಪಟಾಲಜಿಸ್ಟ್ (hepatologist) ಒಬ್ಬರು ಎಕ್ಸ್ ನಲ್ಲಿ (x) ಹಂಚಿಕೊಂಡಿದ್ದು, ಭಾರಿ ವೈರಲ್ (Viral News) ಆಗಿದೆ. ಈ ರೋಗ ನಿರ್ಣಯ (identify a disease) ಮಾಡಲು ಸ್ವತಃ ವೈದ್ಯರು ಹೆಣಗಾಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.

ಲಿವರ್ ಡಾಕ್ (Liver Doc) ಎಂದು ಜನಪ್ರಿಯವಾಗಿರುವ ಸಿರಿಯಾಕ್ ಅಬ್ಬಿ ಫಿಲಿಪ್ಸ್ ಅವರು ವಯಸ್ಕರೊಬ್ಬರಿಗೆ ಬಿಟ್ಟು ಬಿಟ್ಟು ಬರುತ್ತಿದ್ದ ಜ್ವರ, ಶೀತ, ಆಯಾಸ, ಸಂಧಿವಾತದಂತಹ ಲಕ್ಷಣಗಳನ್ನು ಕಂಡು ಎಲ್ಲ ಪರೀಕ್ಷೆಗಳನ್ನು ನಡೆಸಿದರು. ಆದರೆ ಎಲ್ಲವೂ ನಕಾರಾತ್ಮಕ ಫಲಿತಾಂಶ ನೀಡಿತ್ತು. ವೈರಲ್ ಹೆಪಟೈಟಿಸ್‌, ಕೋವಿಡ್ -19, ಇನ್ ಫ್ಲೂ ಯೆನ್ಸ್, ಡೆಂಗ್ಯೂ, ಎಬ್‌ಸ್ಟೈನ್ ಬಾರ್ ವೈರಸ್‌ ಎಲ್ಲವನ್ನೂ ಪರೀಕ್ಷಿಸಿದರು. ಆದರೆ ಎಲ್ಲವೂ ನೆಗೆಟಿವ್ ವರದಿ ನೀಡಿತ್ತು. ಇದರಿಂದ ಸ್ವತಃ ವೈದ್ಯರಿಗೆ ಹತಾಶೆ ಉಂಟಾಯಿತು. ಎಲ್ಲ ವೈದ್ಯಕೀಯ ಪುಸ್ತಕಗಳನ್ನು ನೋಡಿದರು. ಯಾವುದೇ ಪ್ರಯೋಜನವಾಗಲಿಲ್ಲ.

ಒಂದು ದಿನ ಮನೆಯ ಕೆಲಸದವಳು ಬಂದು ತಮ್ಮ ಮೊಮ್ಮಕ್ಕಳಲ್ಲಿ ಈ ದದ್ದು ಕಾಣಿಸಿಕೊಂಡಿದೆ. ಇದನ್ನು ಸ್ಥಳೀಯ ಭಾಷೆಯಲ್ಲಿ ‘ಅಂಜಂಪಣಿ’ ಎಂದು ಕರೆಯಲಾಗುತ್ತದೆ. ಈ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದಳು. ಬಳಿಕ ಪಾರ್ವೊವೈರಸ್ ಬಿ 19 ಗಾಗಿ ಪರಿಶೀಲಿಸಿದಾಗ ಅದು ಪಾಸಿಟಿವ್ ಬಂದಿದೆ ಎಂದು ಡಾ. ಫಿಲಿಪ್ಸ್ ಹೇಳಿದ್ದಾರೆ.

17 ವರ್ಷಗಳ ವೈದ್ಯಕೀಯ ವೃತ್ತಿಯಲ್ಲಿ ವಯಸ್ಸಾದ ಸೇವಕಿಯೊಬ್ಬರು 10 ಸೆಕೆಂಡುಗಳಲ್ಲಿ ರೋಗವನ್ನು ಗುರುತಿಸಿದ್ದು ಇದೇ ಮೊದಲು ಎಂದು ಅವರು ತಿಳಿಸಿದ್ದಾರೆ.

ಇದನ್ನು ಐದನೇ ರೋಗ ಎಂದು ಕರೆಯಲಾಗುತ್ತದೆ. ಇದು ಪಾರ್ವೊವೈರಸ್ B19 ನಿಂದ ಉಂಟಾಗುತ್ತದೆ. ಇದು ವಯಸ್ಕರಿಗಿಂತ ಮಕ್ಕಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಯಾರಾದರೂ ಕೆಮ್ಮಿದಾಗ ಅಥವಾ ಸೀನಿದಾಗ ಮೂಗು ಮತ್ತು ಬಾಯಿಯಲ್ಲಿರುವ ದ್ರವಗಳ ಮೂಲಕ ರೋಗ ಹರಡುತ್ತದೆ. ಕೆನ್ನೆಗಳ ಮೇಲೆ ಕೆಂಪು ದದ್ದುಗಳನ್ನು ಹೊಂದಿರುತ್ತದೆ. ದೇಹಕ್ಕೂ ಹರಡುತ್ತದೆ ಮತ್ತು ಇತರ ರೋಗಲಕ್ಷಣಗಳನ್ನು ಉಂಟುಮಾಡಬಹುದು.


ವೈರಲ್ ಆದ ಟ್ವೀಟ್

ಡಾ. ಫಿಲಿಪ್ ಅವರ ಈ ಟ್ವಿಟ್ ಭಾರೀ ವೈರಲ್ ಆಗಿದೆ. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಇದು 4.18 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಸಾಕಷ್ಟು ಮಂದಿ ಇದಕ್ಕೆ ಕಾಮೆಂಟ್ ಕೂಡ ಮಾಡಿದ್ದಾರೆ.

ಒಬ್ಬರು ಕೆಲವೊಮ್ಮೆ ಪ್ರಯೋಗಿಕ ಜ್ಞಾನವನ್ನು ಸಾಂಪ್ರದಾಯಿಕ ಜ್ಞಾನ ಸೋಲಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಕಾಮೆಂಟ್ ನಲ್ಲಿ ಕೆಲವು ಸಂದರ್ಭದಲ್ಲಿ ವೈದ್ಯರಿಗಿಂತ ಹಿರಿಯರ ನಂಬಿಕೆಯೇ ನಿಜವಾಗುತ್ತದೆ ಎಂದು ತಿಳಿಸಿದ್ದಾರೆ.

Exit mobile version