ಖಾಸಗಿ ಕಂಪನಿಯಿರಲಿ, ಸರ್ಕಾರಿ ಕಚೇರಿಯೇ ಇರಲಿ ಉದ್ಯೋಗಿಗಳಿಗೆ ರಜೆ ಬೇಕೆಂದರೆ ಬಾಸ್ ಬಳಿ ಮನವಿ ಮಾಡಬೇಕು. ರಜಾ ಅರ್ಜಿಯನ್ನೂ ಸಲ್ಲಿಸಬೇಕು. ಕೆಲವು ಕಂಪನಿಗಳಲ್ಲಿ ರಜೆ ಕೇಳುವವರು ಕಡ್ಡಾಯವಾಗಿ ಕಾರಣವನ್ನೂ ತಿಳಿಸಬೇಕು ಎಂದು ನಿಯಮ ಮಾಡಿಡಲಾಗುತ್ತದೆ. ʼಮದುವೆಗೆ ಹೋಗಬೇಕು, ಆರೋಗ್ಯ ಸರಿಯಿಲ್ಲ, ಊರಿಗೆ ಹೋಗಬೇಕು, ಮನೆಯಲ್ಲಿ ಪೂಜೆಯಿದೆ..ʼ ಇತ್ಯಾದಿ ಕಾರಣಕ್ಕೆ ರಜಾ ತೆಗೆದುಕೊಳ್ಳುತ್ತಿದ್ದರೆ ಅದನ್ನು ಉಲ್ಲೇಖಿಸಿಬಿಡಬಹುದು. ಆದರೆ ಕೆಲವು ಸನ್ನಿವೇಶಗಳಲ್ಲಿ ಸುಳ್ಳು ಕಾರಣವನ್ನೇ ಕೊಡಬೇಕಾಗುತ್ತದೆ.
ಉದಾಹರಣೆಗೆ, ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿರುವಾಗ, ಇನ್ನೊಂದು ಕಂಪನಿಗೆ ಇಂಟರ್‌ವ್ಯೂಗೆ ಹೋಗಲು ರಜಾ ಕೇಳಬೇಕೆಂದರೆ, ಬಾಸ್‌ಗೆ ಅದೇ ಕಾರಣ ಹೇಳಲು ಸಾಧ್ಯವಿದೆಯೇ?-ಬಹುಶಃ ನಮ್ಮಲ್ಲಿ ಅನೇಕರಿಗೆ ಆಗೋದಿಲ್ಲ. ʼಅಯ್ಯೋ..ಇನ್ನೊಂದು ಕಂಪನಿಗೆ ಇಂಟರ್‌ವ್ಯೂಗೆ ಹೋಗುತ್ತೇನೆಂದು ಈ ಕಂಪನಿಯ ಬಾಸ್‌ಗೆ ಹೇಳಿದರೆ ಏನಾಗಬಹುದು?-ಇಲ್ಲಿಯೂ ಕೆಲಸದಿಂದ ತೆಗೆದು, ಅಲ್ಲೂ ಸಿಗದೆ ಇದ್ದರೆ ಏನು ಮಾಡುವುದು?ʼ ಎಂದೇ ಭಾವಿಸುತ್ತೇವೆ. ಹಾಗಾಗಿ ಮತ್ತೊಂದು ಸಂಸ್ಥೆಯಿಂದ ಆಫರ್ ಲೆಟರ್ ಸಿಗುವವರೆಗೂ ಗುಟ್ಟಾಗಿಯೇ ಇಡುತ್ತೇವೆ. ಆದರೆ ನಮ್ಮಂತೆ ಎಲ್ಲರೂ ಇರುತ್ತಾರಾ? ಖಂಡಿತ ಇಲ್ಲ. ಇಲ್ಲೊಬ್ಬ ಉದ್ಯೋಗಿ ತನ್ನ ಮೇಲಧಿಕಾರಿಗೆ ರಜಾ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಕಾರಣವನ್ನು ಅತ್ಯಂತ ಸ್ಪಷ್ಟವಾಗಿ ಮತ್ತು ಪ್ರಾಮಾಣಿಕವಾಗಿ ನಮೂದಿಸಿದ್ದಾರೆ. ʼಡಿಯರ್ ಸರ್, ಗುಡ್ ಮಾರ್ನಿಂಗ್. ನನಗೆ ಇಂದು ಬೇರೊಂದು ಕಂಪನಿಯಲ್ಲಿ ಇಂಟರ್‌ವ್ಯೂದಲ್ಲಿ ಪಾಲ್ಗೊಳ್ಳಬೇಕಾಗಿದೆ. ಹಾಗಾಗಿ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ರಜೆ ಕೊಡಿʼ ಎಂದು ಇ-ಮೇಲ್‌ನಲ್ಲಿ ಬರೆದಿದ್ದಾರೆ. ಉದ್ಯೋಗಿ ಮಾಡಿದ ಇ-ಮೇಲ್‌ನ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: Viral News: 6 ಮಂದಿ ಕಾಮುಕರಿಗೆ ಒಬ್ಬಳೇ ಹುಡುಗಿ ಹೆಂಗೆ ಹೊಡೀತಾಳೆ ನೋಡಿ! ಹೆಣ್ಮಕ್ಕಳೇ ಸ್ಟ್ರಾಂಗು ಗುರು!
ಸಾಹಿಲ್ ಎಂಬುವರು ಈ ಫೋಟೋ ಶೇರ್ ಮಾಡಿಕೊಂಡಿದ್ದು, ʼನನ್ನ ಜ್ಯೂನಿಯರ್ಸ್ ಎಷ್ಟು ಒಳ್ಳೆಯವರು ಎಂದರೆ, ಅವರು ಇನ್ನೊಂದು ಕಂಪನಿಗೆ ಸಂದರ್ಶನಕ್ಕೆ ಹೋಗುವುದಾಗಿ ಸತ್ಯವನ್ನೇ ಹೇಳಿ ರಜೆ ತೆಗೆದುಕೊಳ್ಳುತ್ತಾರೆʼ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಅದನ್ನು ನೋಡಿದ ನೆಟ್ಟಿಗರು ಉದ್ಯೋಗಿಯನ್ನು ತುಂಬ ಹೊಗಳಿದ್ದಾರೆ. ʼಇಂಥವರು ನಿಜಕ್ಕೂ ನಂಬಿಕಸ್ಥರುʼ, ʼಈತ ಅತ್ಯಂತ ಪ್ರಾಮಾಣಿಕʼ ಎಂಬಿತ್ಯಾದಿ ಹೊಗಳಿಕೆಯ ಕಮೆಂಟ್‌ಗಳನ್ನು ಬರೆದಿದ್ದಾರೆ.
ಇದನ್ನೂ ಓದಿ: 35 ಸಾವಿರ ಅಡಿ ಎತ್ತರದಲ್ಲಿ ನಡೆಯಬಹುದಾಗಿದ್ದ ವಿಮಾನಗಳ ಡಿಕ್ಕಿಯನ್ನು ಪೈಲಟ್ ತಪ್ಪಿಸಿದ್ದು ಹೇಗೆ?