Site icon Vistara News

Viral News: ಗೂಗಲ್‌ ಉದ್ಯೋಗ ತೊರೆದು ಉಬರ್‌ ಚಾಲಕನಾದ; ಇದರ ಹಿಂದಿದೆ ಅಚ್ಚರಿಯ ಕಾರಣ

uber

uber

ಬೆಂಗಳೂರು: ಸಿಲಿಕಾನ್‌ ಸಿಟಿ (Silicon City) ಬೆಂಗಳೂರು ತನ್ನ ಒಡಲಲ್ಲಿ ಅನೇಕ ಅಚ್ಚರಿಗಳನ್ನು ಹುದುಗಿಟ್ಟಿದೆ. ಇಲ್ಲಿ ದಿನಕ್ಕೊಂದು ಆಸಕ್ತಿದಾಯಕ ಕಥೆ, ಅಚ್ಚರಿಯ ಘಟನೆ ಹುಟ್ಟಿಕೊಳ್ಳುತ್ತದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದ ಇಂತಹ ಅಪರೂಪದ ಘಟನೆ ನಿಮ್ಮನ್ನೂ ಆಶ್ಚರ್ಯಚಕಿತಗೊಳಿಸಲಿದೆ. ಪ್ರತಿಷ್ಠಿತ ಗೂಗಲ್‌ (Google) ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ವ್ಯಕ್ತಿಯೊಬ್ಬ ಉಬರ್ ಮೋಟೋ ಡ್ರೈವರ್​ ಆಗಿರುವ ಘಟನೆ ಇದು. ರಾಘವ್ ದುವಾ ಎನ್ನುವವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡ ಈ ಪೋಸ್ಟ್‌ ಇದೀಗ ವೈರಲ್‌ (Viral news) ಆಗಿದೆ.

ಗೂಗಲ್‌ ಉದ್ಯೋಗಿ ಡ್ರೈವರ್‌ ಆಗಿದ್ದು ಯಾಕೆ?

ಆ ಡ್ರೈವರ್‌ ಗೂಗಲ್‌ನಂತಹ ಪ್ರತಿಷ್ಠಿತ ಸಂಸ್ಥೆಯ ಉದ್ಯೋಗ ತೊರೆದಿದ್ಯಾಕೆ ಎನ್ನುವುದರ ಕಾರಣ ತಿಳಿದರೆ ನೀವು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಡುವುದು ಖಚಿತ. ಆತ ಬೆಂಗಳೂರು ನಗರವನ್ನು ಸುತ್ತಾಡಬೇಕು ಎನ್ನುವ ಉದ್ದೇಶದಿಂದ ಗೂಗಲ್‌ನ ಕೆಲಸವನ್ನು ತೊರೆದಿದ್ದಾನಂತೆ. ʼʼನನ್ನ ಉಬರ್‌ ಮೋಟೊ ಚಾಲಕ ಗೂಗಲ್‌ನ ಮಾಜಿ ಉದ್ಯೋಗಿ. ಆತ ಹೈದರಾಬಾದ್‌ನಿಂದ 20 ದಿನಗಳ ಹಿಂದೆ ನಗರಕ್ಕೆ ಬಂದಿದ್ದಾನೆ. ಬೆಂಗಳೂರನ್ನು ಸುತ್ತಾಡುವ ಉದ್ದೇಶದಿಂದ ಹಿಂದಿನ ಕೆಲಸವನ್ನು ತೊರೆದಿದ್ದಾಗಿ ತಿಳಿಸಿದ್ದಾನೆʼʼ ಎಂದು ರಾಘವ್ ಬರೆದಿದ್ದಾರೆ. ಜತೆಗೆ ರೈಡಿಂಗ್‌ ವಿಡಿಯೊ ಪೋಸ್ಟ್‌ ಮಾಡಿದ್ದಾರೆ.‌

ನೆಟ್ಟಿಗರು ಏನಂದ್ರು?

ಸದ್ಯ ಈ ಪೋಸ್ಟ್‌ ಹಲವರ ಗಮನ ಸೆಳೆದಿದೆ. ಈಗಾಗಲೇ 67 ಸಾವಿರಕ್ಕಿಂತ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ. ಕೆಲವರು ಇದನ್ನು ‘ಪೀಕ್ ಬೆಂಗಳೂರು’ ಕ್ಷಣ ಎಂದು ಕರೆದಿದ್ದಾರೆ. ಒಬ್ಬರು ಕಮೆಂಟ್‌ ಮಾಡಿ, “ಇದು ನಿಜವಾಗಿಯೂ ಗಮನ ಸೆಳೆಯುವಂತಿದೆ. ಪಯಣದ ಸಮಯದಲ್ಲಿ ನೀವು ಆಸಕ್ತಿದಾಯಕ ಸಂಭಾಷಣೆ ನಡೆಸಿದ್ದೀರಿ ಎಂದು ನಾನು ಭಾವಿಸುತ್ತೇನೆ!” ಎಂದಿದ್ದಾರೆ. ಇನ್ನೊಬ್ಬರು ಇದೇ ರೀತಿಯ ಅನುಭವ ತಮಗಾಗಿರುವ ಕುರಿತು ಮಾಹಿತಿ ನೀಡಿದ್ದಾರೆ. “ನಿಜ, ನಾನು ವಿಶಾಖಪಟ್ಟಣಂನ 53 ವರ್ಷದ ಮಾಜಿ ಬ್ಯಾಂಕ್ ವ್ಯವಸ್ಥಾಪಕರನ್ನು ಭೇಟಿಯಾದೆ. ಅವರು ಈಗ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ರ್‍ಯಾಪಿಡೊ ಸವಾರಿ ಮಾಡುವ ಮೂಲಕ ಅವರು ವಿವಿಧ ಜನರನ್ನು ಭೇಟಿಯಾಗಲು ಮತ್ತು ನಗರದ ಎಲ್ಲ ಸ್ಥಳಗಳನ್ನು ನೋಡಲು ಬಯಸುತ್ತಾರೆ. ಮಾತ್ರವಲ್ಲ ಆ ಬಗ್ಗೆ ಸಾಕ್ಷ್ಯಚಿತ್ರವನ್ನು ಮಾಡುವ ಯೋಜನೆಯಲ್ಲಿದ್ದಾರೆʼʼ ಎಂದು ತಿಳಿಸಿದ್ದಾರೆ. ʼʼಹೌದು ನಾನು ಕೂಡ ಹೀಗೆ ಡ್ರೈವರ್​ಗಳೊಂದಿಗೆ ಮಾತನಾಡುತ್ತ ಹೋಗುತ್ತೇನೆ. ಕೆಲವೊಮ್ಮೆ ಅವರು ತಮ್ಮ ಕಥೆಗಳನ್ನು ಹೇಳಿಕೊಳ್ಳುತ್ತಾರೆʼʼ ಎಂದಿದ್ದಾರೆ ಇನ್ನೊಬ್ಬರು. ಒಟ್ಟಿನಲ್ಲಿ ಬೆಂಗಳೂರು ನಗರದೆಡೆಗಿನ ಚಾಲಕನ ಕುತೂಹಲ, ಆಸಕ್ತಿ ಹಲವರ ಗಮನ ಸೆಳೆದಿದೆ.

ಇದನ್ನೂ ಓದಿ: Viral News: ಮ್ಯಾನ್ಮಾರ್‌ನಲ್ಲಿ ಹೊಸ ಪ್ರಭೇದದ ಹಾವು ಪತ್ತೆ; ಏನಿದರ ವೈಶಿಷ್ಟ್ಯ?

ಇದೇ ಮೊದಲ ಸಲವಲ್ಲ

ಇಂತಹ ಅಚ್ಚರಿಯ ಘಟನೆ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಇದು ಮೊದಲನೆಯ ಸಲವಲ್ಲ. ನಿಶಿತ್ ಪಟೇಲ್ ಕೆಲವು ತಿಂಗಳ ಹಿಂದೆ ತಮಗಾದ ಅನುಭವವನ್ನು ಎಕ್ಸ್‌ ಮೂಲಕ ಹಂಚಿಕೊಂಡಿದ್ದರು. ʼʼನಾನು ಕುಬೇರ್ನೆಟ್ಸ್ ಮೀಟಪ್‌ಗೆ ಹೋಗಲು ರ್‍ಯಾಪಿಡೊ ಬುಕ್‌ ಮಾಡಿದ್ದೆ. ಡ್ರೈವರ್‌ ರಾಯಲ್ ಎನ್‌ಫೀಲ್ಡ್‌ ಬೈಕ್‌ನಲ್ಲಿ ಆಗಮಿಸಿದ್ದರು. ಅವರು ಕುಬರ್ನೆಟ್ಸ್ ಕಂಪೆನಿಯಲ್ಲಿ ಎಂಜಿನಿಯರ್ ಎಂದು ಆಮೇಲೆ ತಿಳಿಯಿತು. ಇದು ಟೆಕ್‌ ರಾಜಧಾನಿಯ ವೈಶಿಷ್ಟ್ಯʼʼ ಎಂದು ಬರೆದುಕೊಂಡಿದ್ದರು.

Exit mobile version