Site icon Vistara News

Viral News: ಸರ ಕದ್ದು ಪರಾರಿಯಾಗಲು ಬೈಕ್‌ ಏರಿದವರಿಗೆ ಕಾದಿತ್ತು ಶಾಕ್‌; ವಿಡಿಯೊ ಇಲ್ಲಿದೆ

Viral News

Viral News

ಚಂಡೀಗಢ: ಸರ ಕಳ್ಳತನ-ಸಾಮಾನ್ಯವಾಗಿ ನಾವು ಆಗಾಗ ಕೇಳುವ ಕ್ರೈಂ ಸುದ್ದಿ ಇದು. ರಸ್ತೆಯಲ್ಲಿ ಓಡಾಡುವ ಮಹಿಳೆಯರು, ವೃದ್ಧೆಯರು, ಮಕ್ಕಳ ಕುತ್ತಿಗೆಯಿಂದ ಚಿನ್ನದ ಸರ ಕಸಿಯುವ ಚಾಲಾಕಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರ ಇರಲಿ, ಗ್ರಾಮಾಂತರ ಪ್ರದೇಶವೇ ಇರಲಿ ಈ ಕಳ್ಳರ ಕೃತ್ಯಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಅದರಲ್ಲಿಯೂ ದ್ವಿಚಕ್ರ ವಾಹನದಲ್ಲಿ ಬರುವ ಖದೀಮರಿಗೆ ಒಂಟಿ ಮಹಿಳೆಯರೇ ಟಾರ್ಗೆಟ್‌. ಕೆಲವೊಮ್ಮೆ ಈ ಕೃತ್ಯ ಸಂತ್ರಸ್ತರಿಗೆ ಮಾರಣಾಂತಿಕವಾಗಿಯೂ ಪರಿಣಮಿಸುತ್ತದೆ. ಈಗ ಇಷ್ಟೆಲ್ಲ ಪೀಠಿಕೆ ಹಾಕಲೂ ಕಾರಣವಿದೆ. ಸದ್ಯ ಇಂತಹ ಚಾಲಕಿ ಕಳ್ಳರ ಕೈ ಚಳಕ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಫಾರ್‌ ಎ ಚೇಂಜ್‌ ಎಂಬಂತೆ ಈ ಘಟನೆಯ ಕೊನೆಯಲ್ಲಿ ಸಖತ್‌ ಟ್ವಿಸ್ಟ್‌ ಎದುರಾಗುತ್ತದೆ. ಅದು ಏನು ಎನ್ನುವುದನ್ನು ತಿಳಿಯಲು ಈ ವಿಡಿಯೊ ನೋಡಿ (Viral News).

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಿಂದ ಸರ ಕಸಿದ ಕಳ್ಳರು ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸುತ್ತಾರೆ. ಇದನ್ನು ಗಮನಿಸಿದ ಬಸ್‌ ಡ್ರೈವರ್‌ ಎದುರಿನಿಂದ ಬಂದು ಬೈಕ್‌ಗೆ ಡಿಕ್ಕಿ ಹೊಡೆದು ಕಳ್ಳರಿಬ್ಬರನ್ನು ಬೀಳಿಸುತ್ತಾನೆ. ಅನಿರೀಕ್ಷಿತ ಆಘಾತದಿಂದ ಕಳ್ಳರು ತತ್ತರಿಸುತ್ತಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದ್ದು, ಬಸ್‌ ಚಾಲಕನ ಸಮಯ ಪ್ರಜ್ಞೆಗೆ ನೆಟ್ಟಿಗರು ಶಹಬ್ಬಾಸ್‌ಗಿರಿ ನೀಡಿದ್ದಾರೆ.

ಘಟನೆಯ ವಿವರ

ನಡು ರಸ್ತೆಯಲ್ಲಿ ವ್ಯಕ್ತಿಯೊಬ್ಬ ಬೈಕ್‌ ನಿಲ್ಲಿಸಿಕೊಂಡಿರುವ ದೃಶ್ಯವನ್ನು ತೋರಿಸುವ ಮೂಲಕ ವಿಡಿಯೊ ಆರಂಭವಾಗುತ್ತಿದೆ. ಆತನ ʼಕ್ರೈಂ ಪಾರ್ಟನರ್‌ʼ ಮಹಿಳೆಯ ಕುತ್ತಿಗೆಯಿಂದ ಸರವನ್ನು ಎಗರಿಸುವ ದೃಶ್ಯ ಹಿನ್ನಲೆಯಲ್ಲಿ ಅಸ್ಪಷ್ಟವಾಗಿ ಕಾಣಿಸುತ್ತದೆ. ಬಳಿಕ ಆತ ಓಡಿ ಬಂದು ಬೈಕ್‌ ಏರುತ್ತಾನೆ. ಮೊದಲೇ ಬೈಕ್‌ ಸ್ಟಾರ್ಟ್‌ ಮಾಡಿ ಕಾದುಕೊಂಡಿದ್ದ ಇನ್ನೊಬ್ಬ ತಮ್ಮ ʼಮಿಷನ್‌ ಸಕ್ಸಸ್‌ʼ ಆದ ಖುಷಿಯಲ್ಲಿ ಬೈಕ್‌ ಓಡಿಸುತ್ತಾನೆ. ಆದರೆ ಅಷ್ಟರಲ್ಲಿ ʼರಿಯಲ್‌ ಹೀರೋʼನ ಎಂಟ್ರಿಯಾಗುತ್ತದೆ. ಇದನ್ನೆಲ್ಲ ಗಮನಿಸುತ್ತಿದ್ದ ಬಸ್‌ ಚಾಲಕ ಬೇಕಂತಲೇ ಮುಂದಕ್ಕೆ ಬಂದು ಬೈಕ್‌ಗೆ ಮೆಲ್ಲನೆ ಡಿಕ್ಕಿ ಹೊಡೆಯುತ್ತಾನೆ.

ಇದರಿಂದ ಕಳ್ಳರಿಬ್ಬರು ಬೈಕ್‌ ಸಮೇತ ರಸ್ತೆಗೆ ಬಿದ್ದು ಬಿಡುತ್ತಾರೆ. ಬಸ್‌ ಚಾಲಕ ಉದ್ದೇಶ ಪೂರ್ವಕವಾಗಿ ಡಿಕ್ಕಿ ಹೊಡೆದಿದ್ದರಿಂದ ಇಬ್ಬರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಬೈಕ್‌ ನೆಲಕ್ಕೆ ಉರುಳುತ್ತಿದ್ದಂತೆ ಇಬ್ಬರೂ ʼಬದುಕಿದರೆ ಬೇಡಿಯಾದರೂ ತಿನ್ನಬಹುದುʼ ಎನ್ನುವಂತೆ ಅಲ್ಲಿಂದ ಓಡಿ ಹೋಗುತ್ತಾರೆ. ಬಳಿಕ ಅವರು ಸಿಕ್ಕಿ ಬಿದ್ದಿದ್ದಾರಾ ಅಥವಾ ಪರಾರಿಯಾಗಿದ್ದಾರಾ ಎನ್ನುವುದು ತಿಳಿದು ಬಂದಿಲ್ಲ.

ಇದನ್ನೂ ಓದಿ: Viral News: 10 ಅಡಿಯ ದೈತ್ಯ ಮೊಸಳೆಯಿಂದ ಕಬ್ಬಿಣದ ಗೇಟು ಹಾರಲು ಯತ್ನ; ಮೈ ಜುಮ್ಮೆನ್ನಿಸುವ ವಿಡಿಯೊ ಇಲ್ಲಿದೆ

ಅದೇನೇ ಇರಲಿ ಸದ್ಯ ಬಸ್‌ ಚಾಲಕನ ಸಮಯ ಪ್ರಜ್ಞೆಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಆತನೇ ನಿಜವಾದ ಹೀರೋ ಎಂದೆಲ್ಲ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಖದೀಮರಿಗೆ ತಕ್ಕ ಪಾಠ ಕಲಿಸಲು ಇಂತಹ ಧೈರ್ಯವಂತರ ಅಗತ್ಯ ವಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಕಳ್ಳರ ಅಹಂಕಾರಕ್ಕೆ ತಕ್ಕ ಶಾಸ್ತಿಯಾಗಿದೆ. ಒಂದೊಳ್ಳೆ ಆ್ಯಕ್ಷನ್‌ ಸಿನಿಮಾ ನೋಡಿದ ಅನುಭವವಾಯಿತು ಎಂದು ಇನ್ನು ಕೆಲವರು ಕಮೆಂಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಸರ ಕಳ್ಳರಿಗೆ ನಡುಕ ಹುಟ್ಟಿಸಿದ್ದು ಸುಳ್ಳಲ್ಲ.

Exit mobile version