Site icon Vistara News

Viral News: ಅಮ್ಮಾ ನಿನ್ನ ತೋಳಿನಲ್ಲಿ… ತಾಯಿಯ ಬೆಚ್ಚನೆ ಅಪ್ಪುಗೆಯಲ್ಲಿರುವ ಮರಿ ಆನೆಯ ಫೋಟೊ ವೈರಲ್‌

elephent

elephent

ಚೆನ್ನೈ: ಇತ್ತೀಚೆಗೆ ತಮಿಳುನಾಡು ಅರಣ್ಯ ಇಲಾಖೆ(Tamil Nadu Forest Department)ಯ ಸಿಬ್ಬಂದಿ ಆನಮಲೈ ಹುಲಿ ಮೀಸಲು ಪ್ರದೇಶದಲ್ಲಿ (Anamalai Tiger Reserve-ATR) ಸಿಕ್ಕಿಬಿದ್ದ ಆನೆ ಮರಿಯನ್ನು ಅದರ ಹಿಂಡಿನೊಂದಿಗೆ ಮತ್ತೆ ಸೇರಿಸಿದ್ದರು. ಇದೀಗ ಆ ಮರಿ ಆನೆ ತನ್ನ ತಾಯಿಯ ತೋಳಿನಲ್ಲಿ ತಲೆ ಇಟ್ಟು ಮಲಗಿರುವ ಹೃದಯಸ್ಪರ್ಶಿ ಚಿತ್ರ ವೈರಲ್‌ ಆಗಿದೆ (Viral News).

ರಾಜ್ಯ ಪರಿಸರ ಮತ್ತು ಅರಣ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ಐಎಎಸ್ ಈ ಫೋಟೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶೇರ್‌ ಮಾಡಿದ್ದಾರೆ. ಅರಣ್ಯ ಕ್ಷೇತ್ರ ಸಿಬ್ಬಂದಿ ತೆಗೆದ ಈ ಫೋಟೊದಲ್ಲಿ ಮರಿ ಆನೆ ತನ್ನ ತಾಯಿಯ ಬೆಚ್ಚಗಿನ ಅಪ್ಪುಗೆಯಲ್ಲಿ ಮಧ್ಯಾಹ್ನದ ಕಿರು ನಿದ್ದೆ ಮಾಡುತ್ತಿರುವುದು ಕಂಡು ಬಂದಿದೆ. ʼʼಕೆಲವೊಮ್ಮೆ ಒಂದು ಚಿತ್ರ ಸಾವಿರ ಪದಗಳನ್ನು ಆಡುತ್ತದೆ. ಬೇರ್ಪಟ್ಟ ಮರಿ ಆನೆ ಮರಳಿ ತನ್ನ ಕುಟುಂಬದೊಂದಿಗೆ ಸೇರಿದ ಬಳಿಕ ತನ್ನ ತಾಯಿಯ ತೋಳಿನಲ್ಲಿ ಸುರಕ್ಷಿತವಾಗಿ ವಿಶ್ರಾಂತಿ ಪಡೆಯುತ್ತಿದೆ. ಪ್ರಾಣಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಣ್ಗಾವಲು ಇಡುತ್ತಿರುವ ಅರಣ್ಯ ಕ್ಷೇತ್ರ ಸಿಬ್ಬಂದಿ ಆನಮಲೈ ಹುಲಿ ಮೀಸಲು ಪ್ರದೇಶದಲ್ಲಿ ತೆಗೆದ ಚಿತ್ರ ಇದು” ಎಂದು ಸಾಹು ಬರೆದುಕೊಂಡಿದ್ದಾರೆ.

ಆನೆ ಮರಿಯನ್ನು ರಕ್ಷಿಸಿದ್ದ ಅರಣ್ಯ ಕ್ಷೇತ್ರ ಸಿಬ್ಬಂದಿ

2023ರ ಡಿಸೆಂಬರ್‌ 30ರಂದು ಸುಮಾರು 4-5 ತಿಂಗಳ ಕಾಡಾನೆ ಮರಿಯೊಂದು ಏಕಾಂಗಿಯಾಗಿ ಆನಮಲೈ ಹುಲಿ ಮೀಸಲು ಪ್ರದೇಶದಲ್ಲಿ ಪತ್ತೆಯಾಗಿತ್ತು. ತನ್ನವರಿಂದ ಬೇರ್ಪಟ್ಟ ಆ ಆನೆ ಮರಿ ತನ್ನ ತಾಯಿಗಾಗಿ ಹುಡುಕಾಟ ನಡೆಸುತ್ತಿತ್ತು. ಬಳಿಕ ಇದು ಅರಣ್ಯ ಕ್ಷೇತ್ರ ಸಿಬ್ಬಂದಿ ಕಣ್ಣಿಗೆ ಬಿತ್ತು. ಆನೆ ಹಿಂಡನ್ನು ಪತ್ತೆಹಚ್ಚಲು ಶೋಧ ತಂಡವನ್ನು ಕಳುಹಿಸಲಾಯಿತು. ಡ್ರೋನ್‌ಗಳ ಸಹಾಯದಿಂದ ಸುಮಾರು 3 ಕಿ.ಮೀ. ದೂರದಲ್ಲಿ ಆನೆ ಹಿಂಡನ್ನು ಗುರುತಿಸಲಾಯಿತು. ನಂತರ ಆನೆ ಮರಿಯನ್ನು ಅಲ್ಲಿಗೆ ಕರೆದೊಯ್ಯಲಾಯಿತು. ಮರಿ ಆನೆಯನ್ನು ಹಿಂಡಿನ ಬಳಿ ಬಿಡುವ ಮುನ್ನ ಅದರ ಶರೀರಕ್ಕೆ ಮಣ್ಣ ಲೇಪಿಸಿ ಮಾನವ ಹಸ್ತಕ್ಷೇಪದ ಕುರುಹು ಅಳಿಸಲಾಗಿತ್ತು. ಮರಿ ಆನೆಯನ್ನು ಮತ್ತೆ ತನ್ನ ತಾಯಿಯೊಂದಿಗೆ ಸೇರಿಕೊಂಡಿತ್ತು.

ನೆಟ್ಟಿಗರಿಂದ ಮೆಚ್ಚುಗೆ

ಸದ್ಯ ತಾಯಿ-ಮರಿ ಆನೆಯ ಈ ಫೋಟೊ ವೈರಲ್‌ ಆಗಿದ್ದು, ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಹಲವರು ಭಾವುಕರಾಗಿದ್ದಾರೆ. ʼʼಮರಿ ಆನೆ ತನ್ನ ತಾಯಿಯ ತೋಳಿನಲ್ಲಿ ನೆಮ್ಮದಿಯಿಂದ ವಿಶ್ರಾಂತಿ ಪಡೆಯುತ್ತಿದೆ. ಹೃದಯಸ್ಪರ್ಶಿ ಫೋಟೊ ಇದು. ಪ್ರಾಣಿ ಪ್ರಪಂಚದ ದೃಢ ಬಾಂಧವ್ಯಕ್ಕೆ ಉತ್ತಮ ಉದಾಹರಣೆʼʼ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ.

ʼʼಮರಿ ಆನೆ ತನ್ನ ತಾಯಿಯೊಂದಿಗೆ ಸೇರಲು ಸಹಾಯ ಮಾಡಿದ ತಮಿಳುನಾಡು ಅರಣ್ಯ ಇಲಾಖೆಯ ಪ್ರತಿಯೊಬ್ಬ ಸಿಬ್ಬಂದಿ ಮತ್ತು ಸ್ವಯಂ ಸೇವಕರು ಅಭಿನಂದನೆಗೆ ಅರ್ಹರು. ಅತ್ಯುತ್ತಮ ಮಾನವೀಯ ಸಂದೇಶವನ್ನು ಈ ತಲೆಮಾರಿಗೆ ಅವರು ರವಾನಿಸಿದ್ದಾರೆʼʼ ಎಂದು ಇನ್ನೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ.

“ತಾಯಿಯ ಪ್ರೀತಿಯ, ಮೃದುವಾದ ಅಪ್ಪುಗೆಯಲ್ಲಿ ರಕ್ಷಿಸಲ್ಪಟ್ಟ ಈ ಮರಿ ಆನೆ ವಿಶ್ರಾಂತಿ ಪಡೆದುಕೊಳ್ಳುತ್ತಿದೆ. ಸಹಾನುಭೂತಿ ಮತ್ತು ರಕ್ಷಣೆಯ ಪ್ರಾಮುಖ್ಯತೆಯನ್ನು ಈ ಚಿತ್ರ ತಿಳಿಸುತ್ತದೆʼʼ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ”ತಾಯಿ ಮತ್ತು ಮರಿಯ ಸಮಾಗಮ ನೋಡಿ ಹೃದಯ ತುಂಬಿ ಬಂತು” ಎಂದು ಮಗದೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಕಣ್ಣೆದುರಿದ್ದರೂ ಬೆಕ್ಕನ್ನು ಬೇಟೆಯಾಡದ ಗಿಡುಗ; ಕಾರಣಕ್ಕಾಗಿ ವಿಡಿಯೊ ನೋಡಿ

Exit mobile version