ಹೈದರಾಬಾದ್: ಕಿಡ್ನಿ ಸ್ಟೋನ್ (Kidney Stone) ಇಂದು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆ. ಬದಲಾದ ಜೀವನ ಶೈಲಿ, ಅಸಮರ್ಪಕ ಆಹಾರ ಪದ್ಧತಿಯ ಬಳುವಳಿ ಈ ಕಿಡ್ನಿ ಸ್ಟೋನ್. ಆಗಾಗ ಕೆಳಹೊಟ್ಟೆಯಲ್ಲಿ ಸಹಿಸಲಸಾಧ್ಯ ನೋವು, ತಲೆನೋವು, ಸುಸ್ತು, ತಲೆಸುತ್ತು, ವಾಂತಿ ಇತ್ಯಾದಿ ಕಾಣಿಸಿಕೊಳ್ಳುವುದು ಕಿಡ್ನಿಯಲ್ಲಿ ಕಲ್ಲು ರೂಪುಗೊಂಡ ಲಕ್ಷಣಗಳು. ಕಿಡ್ನಿಯ ಈ ಕಲ್ಲುಗಳು ಕಿಡ್ನಿಯಿಂದ ಮೂತ್ರನಾಳಕ್ಕೆ ಪ್ರವಹಿಸುವಾಗ ತಡೆಯಲಾಗದ ನೋವನ್ನು ಕೊಡುತ್ತದೆ. ಇನ್ನು ಕಿಡ್ನಿಯಲ್ಲಿ ಬರೋಬ್ಬರಿ 418 ಕಲ್ಲು ರೂಪುಗೊಂಡರೆ ಹೇಗಾಗಬೇಡ? ಒಂದು ಕಲ್ಲಿದ್ದರೆ ಸಹಿಸಲಸಾಧ್ಯ ನೋವು ಉಂಟಾಗುತ್ತದೆ. ಅಂತಹದ್ದರಲ್ಲಿ 418 ಕಿಡ್ನಿಯ ಕಲ್ಲು ಹೊಂದಿದ್ದ ವ್ಯಕ್ತಿಯ ಪರಿಸ್ಥಿತಿ ಬಗ್ಗೆ ಒಮ್ಮೆ ಯೋಚಿಸಿ ನೋಡಿ. ಆ ನೋವು ಊಹೆಗೂ ನಿಲುಕದು. ಇದೀಗ ಹೈದರಾಬಾದ್‌ನ ವೈದ್ಯರು ಆ ವ್ಯಕ್ತಿಯ ಕಿಡ್ನಿಯಲ್ಲಿದ್ದ 418 ಕಲ್ಲನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಸದ್ಯ ಆ ವ್ಯಕ್ತಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ (Viral News).
ಹೈದರಾಬಾದ್‌ನ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ನೆಫ್ರಾಲಜಿ ಆ್ಯಂಡ್ ಯುರಾಲಜಿ (Asian Institute of Nephrology and Urology)ಯ ವೈದ್ಯರು 60 ವರ್ಷದ ಈ ವ್ಯಕ್ತಿಯ ಕಿಡ್ನಿಯಲ್ಲಿನ ಕಲ್ಲು ಹೊರ ತೆಗೆದು ಅಪರೂಪದ ಸಾಧನೆ ಮಾಡಿದ್ದಾರೆ. ಇದು ಮೂತ್ರಪಿಂಡದ ಕಲ್ಲು ತೆಗೆದು ಹಾಕುವ ಶಸ್ತ್ರಚಿಕಿತ್ಸೆಯಲ್ಲಿನ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ.
ಘಟನೆಯ ಹಿನ್ನೆಲೆ
ಅನಾರೋಗ್ಯ ಪೀಡಿತರಾಗಿ ಹೈದರಾಬಾದ್‌ನ ಎಐಎನ್‌ಯು ಆಸ್ಪತ್ರೆಗೆ ಆಗಮಿಸಿದ 60 ವರ್ಷದ ವ್ಯಕ್ತಿಯನ್ನು ಪರೀಕ್ಷಿಸಿದಾಗ ಅವರ ಕಿಡ್ನಿಯು ಶೇ. 27ರಷ್ಟು ಮಾತ್ರ ಕಾರ್ಯನಿರ್ವಹಿಸುವುದಾಗಿಯೂ, ಅಪಾರ ಸಂಖ್ಯೆಯ ಕಲ್ಲುಗಳು ಇರುವುದಾಗಿಯೂ ಪತ್ತೆಯಾಗಿತ್ತು. ಈ ವೇಳೆ ಡಾ.ಕೆ.ಪೂರ್ಣ ಚಂದ್ರ ರೆಡ್ಡಿ, ಡಾ.ಗೋಪಾಲ್ ಆರ್. ಮತ್ತು ಡಾ. ದಿನೇಶ್ ಎಂ. ನೇತೃತ್ವದ ತಂಡವು ಪರ್ಕ್ಯುಟೇನಿಯಸ್ ನೆಫ್ರೋಲಿಥೊಟೊಮಿ (Percutaneous Nephrolithotomy-PCNL) ವಿಧಾನದ ಮೂಲಕ ಶಸ್ತ್ರ ಚಿಕಿತ್ಸೆ ನಡೆಸಲು ತೀರ್ಮಾನಿಸಿತು.
ಪಿಸಿಎನ್‌ಎಲ್ ವಿಧಾನದಲ್ಲಿ ಮಿನಿಯೇಚರ್ ಕ್ಯಾಮೆರಾ ಮತ್ತು ಲೇಸರ್ ಪ್ರೋಬ್ಸ್ ಒಳಗೊಂಡ ವಿಶೇಷ ಉಪಕರಣಗಳನ್ನು ಮೂತ್ರಪಿಂಡಕ್ಕೆ ಸೇರಿಸಲಾಗುತ್ತದೆ. ಇದು ದೊಡ್ಡ ಮಟ್ಟದ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆ ಕಿಡ್ನಿಯಲ್ಲಿನ ಕಲ್ಲುಗಳನ್ನು ನಿಖರವಾಗಿ ಗುರುತಿಸಿ ತೆಗೆದುಹಾಕಲು ಅನುವು ಮಾಡಿಕೊಡುತ್ತದೆ. ಜತೆಗೆ ರೋಗಿಯು ವೇಗವಾಗಿ ಚೇತರಿಸಿಕೊಳ್ಳುವಂತೆ ಮಾಡುತ್ತದೆ. ಇದಕ್ಕಾಗಿ ಹೈದರಾಬಾದ್‌ನ ವೈದ್ಯರು ಈ ವಿಧಾನವನ್ನು ಕೈಗೊಂಡಿದ್ದರು.
ಇದನ್ನೂ ಓದಿ: Bilateral Hand Transplant: ದೆಹಲಿ ವೈದ್ಯರ ಅಪರೂಪದ ಸಾಧನೆ; ವ್ಯಕ್ತಿಯೊಬ್ಬರಿಗೆ ದಾನಿಯ ಎರಡೂ ಕೈಗಳ ಯಶಸ್ವಿ ಜೋಡಣೆ
ಅಸಾಧಾರಣ ಕೌಶಲ್ಯ ಮತ್ತು ನಿಖರತೆಯ ಅಗತ್ಯವಿರುವ ಈ ಸಂಕೀರ್ಣ ಕಾರ್ಯವಿಧಾನವು ಎರಡು ಗಂಟೆಗಳ ಕಾಲ ನಡೆಯಿತು. ಶಸ್ತ್ರಚಿಕಿತ್ಸಾ ತಂಡವು ಪ್ರತಿ ಕಲ್ಲನ್ನು ಸೂಕ್ಷ್ಮವಾಗಿ ತೆಗೆದು ಹಾಕಿತು. ಸದ್ಯ ವ್ಯಕ್ತಿ ಚೇತರಿಸಿಕೊಳ್ಳುತ್ತಿದ್ದಾರೆ. ʼʼಸುಧಾರಿತ ಇಮೇಜಿಂಗ್ ತಂತ್ರಜ್ಞಾನ ಮತ್ತು ಅತ್ಯಾಧುನಿಕ ಉಪಕರಣಗಳ ಸಹಾಯದಿಂದ ನಾವು ಈ ಕಾರ್ಯದಲ್ಲಿ ಯಶಸ್ಸು ದಾಖಲಿಸಿದ್ದೇವೆʼʼ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ʼʼಈ ಗಮನಾರ್ಹ ಯಶಸ್ಸು ಕಿಡ್ನಿ ಕಲ್ಲಿನಿಂದ ತೊಂದರೆ ಅನುಭವಿಸುತ್ತಿರುವ ರೋಗಿಗಳಿಗೆ ಭರವಸೆಯ, ನಿರೀಕ್ಷೆಯ ಬೆಳಕು ನೀಡುತ್ತದೆʼʼ ಎಂದು ಅವರು ಹೇಳಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ