Site icon Vistara News

Viral News: ಹಲ್ಲಿನ ಚಿಕಿತ್ಸೆಗೆಂದು ಕ್ಲಿನಿಕ್‌ಗೆ ಬಂದವಳ ತುಟಿಯನ್ನೇ ಕತ್ತರಿಸಿದರು!

dentle treatment

dentle treatment

ಹೈದರಾಬಾದ್‌: ಹಲ್ಲಿನ ಚಿಕಿತ್ಸೆಗೆಂದು ಬಂದ ಮಹಿಳೆಯ ತುಟಿಯನ್ನೇ ವೈದ್ಯರೊಬ್ಬರು ಗಾಯಗೊಳಿಸಿದ ಆಘಾತಕಾರಿ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ದಂತ ವೈದ್ಯರ ನಿರ್ಲಕ್ಷ್ಯದಿಂದಾಗಿ (Medical negligence) ಮಹಿಳೆ ‘ವಿರೂಪಗೊಂಡ’ ತುಟಿ, ಸಾಕಷ್ಟು ದೈಹಿಕ ಮತ್ತು ಮಾನಸಿಕ ನೋವನ್ನು ಅನುಭವಿಸಿದ್ದಾರೆ. ಜುಬಿಲಿ ಹಿಲ್ಸ್‌ನಲ್ಲಿರುವ ಎಫ್‌ಎಂಎಸ್ ಇಂಟರ್‌ನ್ಯಾಷನಲ್‌ ಡೆಂಟಲ್ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿದೆ. ಈ ವಿಚಾರವನ್ನು ಮಹಿಳೆಯ ಗೆಳತಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಸದ್ಯ ವೈರಲ್‌ ಆಗಿದೆ (Viral News).

ಪೋಸ್ಟ್‌ನಲ್ಲೇನಿದೆ?

“ಇತ್ತೀಚೆಗಷ್ಟೇ ಎಫ್‌ಎಂಎಸ್ ಇಂಟರ್‌ನ್ಯಾಷನಲ್‌ ಡೆಂಟಲ್ ಕ್ಲಿನಿಕ್‌ನಲ್ಲಿ ಅನಸ್ತೇಶಿಯ ಒವರ್​​ ಡೋಸ್​​ನಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಅಘಾತವನ್ನುಂಟು ಮಾಡಿದೆ. ಆದರೆ ಇಲ್ಲಿನ ದಂತ ವೈದ್ಯರ ನಿರ್ಲಕ್ಷ್ಯಗಳು ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಇಂತದ್ದೇ ಘಟನೆ ನಡೆದಿದೆ. ತನ್ನ ಗೆಳತಿಯೊಬ್ಬಳು ಇಲ್ಲಿ ಹಲ್ಲಿನ ಚಿಕಿತ್ಸೆಗೆಂದು ಹೋದಾಗ ವೈದ್ಯರು ಡೆಂಟಲ್​​​ ಬ್ಲೆಡ್​ನಿಂದ ಆಕೆಯ ತುಟಿಗಳನ್ನೇ ಕತ್ತರಿಸಿದ್ದಾರೆ” ಎಂದು ಸೌಮ್ಯಾ ಸಂಗಮ್‌ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ತನ್ನ ಸ್ನೇಹಿತೆಯ ತುಟಿಯ ಫೋಟೊವನ್ನೂ ಲಗತ್ತಿಸಿದ್ದಾರೆ. ಇದರಲ್ಲಿ ತುಟಿಯ ಒಂದು ಭಾಗಕ್ಕೆ ಗಾಯವಾಗಿರುವುದು ಸ್ಪಷ್ಟವಾಗಿ ಕಂಡು ಬಂದಿದೆ.

ಈ ಘಟನೆ ಕಳೆದ ವರ್ಷ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಹೆಚ್ಚಿನ ವಿವರ ನೀಡಿರುವ ಸೌಮ್ಯಾ, ತನ್ನ ಗೆಳತಿ ಎದುರಿಸಿದ ಮಾನಸಿಕ ಮತ್ತು ದೈಹಿಕ ಸಂಕಷ್ಟದ ಪರಿಸ್ಥಿತಿಗಳನ್ನು ತಿಳಿಸಿದ್ದಾರೆ. ʼʼಘಟನೆ ನಡೆದು ಒಂದು ವರ್ಷವಾದರೂ ಆಕೆ ಇನ್ನೂ ಶಾಕ್‌ನಿಂದ ಚೇತರಿಸಿಕೊಂಡಿಲ್ಲ. ಈಗಲೂ ಗಾಯದ ಕಲೆ ಉಳಿದುಕೊಂಡಿದೆ. ಅವಳಿಗೆ ಸರಿಯಾಗಿ ನಗಲೂ ಸಾಧ್ಯವಾಗುತ್ತಿಲ್ಲ. ಅವಳು ಇನ್ನೂ ಸ್ಟೀರಾಯ್ಡ್‌ ತೆಗೆದುಕೊಳ್ಳುತ್ತಿದ್ದಾಳೆ ಮತ್ತು ಮುಂದಿನ ದಿನಗಳಲ್ಲಿ ಶಸ್ತ್ರಚಿಕಿತ್ಸೆಗಳು ಬೇಕಾಗಬಹುದುʼʼ ಎಂದು ತಿಳಿಸಿದ್ದಾರೆ.

ತಾಯಿ ಹೇಳಿದ್ದೇನು?

ಮಹಿಳೆಯ ತಾಯಿ ಆಸ್ಪತ್ರೆಯಲ್ಲಿ ಅನುಭವಿಸಿದ ಯಾತನೆಯನ್ನು ವಿವರಿಸಿದ್ದಾರೆ. ʼʼಇಲ್ಲಿನ ವೈದ್ಯರು ನನ್ನ ಮಗಳ ತುಟಿಯನ್ನು ವಿರೂಪಗೊಳಿಸಿದರು. ಮಾತ್ರವಲ್ಲ ಕಿರುಕುಳ ನೀಡಿದರು ಹಾಗೂ ಬೆದರಿಕೆ ಹಾಕಿದರು. ಅವಳ ಹಲ್ಲು ಹೊರತೆಗೆಯುವ ಸಮಯದಲ್ಲಿ ಹಿರಿಯ ದಂತವೈದ್ಯರು (ಮ್ಯಾಕ್ಸಿಲೋಫೇಷಿಯಲ್ ಸರ್ಜನ್ ಕೂಡ) ತಮ್ಮ ಸಹಾಯಕನೊಂದಿಗೆ ತಮ್ಮ ದಂತ ಉಪಕರಣಗಳಿಂದ ಅವಳ ಬಾಯಿಯನ್ನು ಸುಟ್ಟು ಹಾಕಿದರು. ಗಾಯ ಗುಣವಾದ ನಂತರ ಅವರು ಅವಳಿಗೆ ಸಹಾಯದ ಭರವಸೆ ನೀಡಿದರು. ಇದು ಕೆಲವು ತಿಂಗಳಲ್ಲಿ ಗುಣವಾಗುತ್ತದೆ ಎಂದು ಹೇಳಿದರು. ಅದಾಗಿ ಒಂದು ವರ್ಷಕ್ಕಿಂತ ಹೆಚ್ಚಾಗಿದ್ದರೂ ಇನ್ನೂ ವಾಸಿಯಾಗಿಲ್ಲ. ನಿರಂತರ ನೋವಿನಿಂದ ಅವಳ ಬದುಕು ಶೋಚನೀಯವಾಗಿದೆ. ಎಫ್ಎಂಎಸ್ ಆಸ್ಪತ್ರೆಯನ್ನು ಸಂಪರ್ಕಿಸಿದಾಗ ಉಸ್ತುವಾರಿ ಹೊಂದಿರುವ ಶೇಖರ್ ತನ್ನ ಸಹೋದ್ಯೋಗಿಗಳೊಂದಿಗೆ ಅವಳು ಮತ್ತು ಅವಳ ತಂದೆಯನ್ನು ಅವಮಾನಿಸಿದ್ದರು. ಅಲ್ಲದೆ ಅಶ್ಲೀಲ ಕಮೆಂಟ್‌ಗಳಿಂದ ಆಕೆಗೆ ಕಿರುಕುಳ ನೀಡಿದ್ದರುʼʼ ಎಂದು ನೋವು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: Cosmetic Surgery: ನಗು ಹೆಚ್ಚಿಸಿಕೊಳ್ಳಲು ಸರ್ಜರಿಗೆ ಹೋದ ಭಾವಿ ವರನ ನಗುವನ್ನೇ ನಿಲ್ಲಿಸಿದರು

ಜೀವವನ್ನೇ ತೆಗೆದಿದ್ದ ಕಾಸ್ಮೆಟಿಕ್‌ ಸರ್ಜರಿ

ಇತ್ತೀಚೆಗೆ ತನ್ನ ಮದುವೆಗೆ ಒಂದು ತಿಂಗಳು ಮುನ್ನ, ಮುಖದ ನಗುವಿನ ಭಾವ ಹೆಚ್ಚಿಸಲೆಂದು ಕಾಸ್ಮೆಟಿಕ್‌ ಸರ್ಜರಿಗೆ ಹೋದ ವ್ಯಕ್ತಿಯೊಬ್ಬರು ಎಫ್‌ಎಂಎಸ್ ಇಂಟರ್‌ನ್ಯಾಷನಲ್‌ ಡೆಂಟಲ್ ಕ್ಲಿನಿಕ್‌ನಿಂದ ಶವವಾಗಿ ಮರಳಿದ್ದರು. ಮಿತಿ ಮೀರಿದ ಅರಿವಳಿಕೆ ನೀಡಿದ್ದರಿಂದ 28 ವರ್ಷದ ಲಕ್ಷ್ಮೀನಾರಾಯಣ ವಿಂಜಮ್ ಮೃತಪಟ್ಟಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version