ಭಾರತದಲ್ಲಿ ಲೋಕಲ್ ರೈಲುಗಳಲ್ಲಿ ಸೀಟು ದಕ್ಕಿಸಿಕೊಳ್ಳುವುದು ಎಂಥಾ ಬ್ರಹ್ಮವಿದ್ಯೆ ಎಂಬುದು ಎಲ್ಲರಿಗೂ ಗೊತ್ತು. ಮುಂಬೈಯ ಲೋಕಲ್ ರೈಲುಗಳಂತೂ ಗಿಜಿಗುಡುವ ಜನರಿಗೇ ಬಹಳ ಫೇಮಸ್ಸು. ಅಲ್ಲಿ ರೈಲುಗಳಲ್ಲಿ ಕೂರುವುದು ಬಿಡಿ, ನಿಲ್ಲಲು ಜಾಗ ಸಿಕ್ಕಿದರೂ ಅದೊಂದು ಮಹಾನ್ ಸಾಧನೆ. ಎಷ್ಟೋ ಮಂದಿ ತಮ್ಮ ದಿನನಿತ್ಯದ ಕೆಲಸಕ್ಕೆ ಇಂಥ ರೈಲುಗಳನ್ನೇ ಆಶ್ರಯಿಸಿದ್ದಾರೆ ಕೂಡಾ. ಯಾವುದೇ ಟ್ರಾಫಿಕ್ ಜಾಮ್ ಭಯವಿಲ್ಲದೆ, ನಿಗದಿತ ಸಮಯಕ್ಕೆ ಸೇರಿಕೊಳ್ಳಬಹುದಾದ ಹಾಗೂ ಅತ್ಯಂತ ಅಗ್ಗದ ಬೆಲೆಯಲ್ಲಿ ಪ್ರಯಾಣ ಮಾಡಬಹುದಾದ ಸಾರಿಗೆ ಇದಾಗಿರುವುದರಿಂದ ಬಡವರ ಕೈಗೂ ಎಟಕುವ ಸಾರಿಗೆ ಇದೇ ಆಗಿದೆ.
ಇಂತಹ ರೈಲಿನಲ್ಲಿ ಸೀಟು ಗಿಟ್ಟಿಸುವುದು ಹೇಗೆ ಎಂಬುದನ್ನು ಈತನ ಬಳಿ ಕಲಿತುಕೊಳ್ಳಬೇಕಿದೆ. ಸಾಮಾಜಿಕ ಜಾಲತಾಣದಲ್ಲಿ ಈಗ ವಿಡಿಯೋ ಒಂದು ವೈರಲ್ ಆಗಿದ್ದು, ಈತನ ಸೀಟು ಹಿಡಿಯುವ ತಂತ್ರವೀಗ ಎಲ್ಲರ ಮನಗೆದ್ದಿದೆ. ಈತ ಸದ್ಯ ಭಾರತದ ಸ್ಪೈಡರ್‌ಮ್ಯಾನ್ ಎಂದೇ ಕರೆಯಲ್ಪಡುತ್ತಿದ್ದಾರೆ!
ಭಾರತೀಯರು ತುಂಬಿ ತುಳುಕುವ ರೈಲಿನಲ್ಲಿ ಸೀಟು ಹಿಡಿಯುವಲ್ಲಿ ಅತ್ಯಂತ ಕ್ರಿಯಾಶೀಲರು. ಜನರಿಂದ ತುಳುಕುವ ರೈಲಿನಲ್ಲೂ, ಸೀಟು ಸಿಗದಿದ್ದರೂ, ನಡೆದುಹೋಗುವ ದಾರಿಯನ್ನೇ ಸೀಟಿನಂತೆ ಮಾಡಿಕೊಂಡು ತಮಗೆ ಹೋಗಬೇಕಾದಲ್ಲಿಗೆ ಆರಾಮವಾಗಿ ಹೋಗುವಂತೆ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಈ ವಿಡಿಯದಲ್ಲೂ ಕೂಡಾ, ನೂರಾರು ಜನರು ರೈಲಿನಲ್ಲಿ ಸೀಟಿಲ್ಲವೆಂದು ನೇರವಾಗ ನಡೆದುಹೋಗುವ ಹಾದಿಯನ್ನೇ ಸೀಟನ್ನಾಗಿ ಮಾಡಿಕೊಂಡು, ಕೂತಿರುವುದು ಬಿದ್ದುಕೊಂಡಿರುವುದು ಕಾಣುತ್ತದೆ. ನೆಮ್ಮದಿಯಿಂದ ಕೆಳಗೇ ಕೂತಿರುವ ಇವರನ್ನು ತುಳಿದು ಸಾಗುವುದಂತೂ ದೂರದ ಮಾತು. ಹಾಗಾದರೆ ದಾಟಿಕೊಂಡು ಹೋಗುವುದಾದರೂ, ಹೇಗೆ ಸಾಧ್ಯ. ಅದಕ್ಕಾಗಿಯೇ ಈತ ಯಾರಿಗೇನೂ ತೊಂದರೆ ಕೊಡದೆ, ಹಿಡಿದುಕೊಳ್ಳಲು ಸಹಾಯವಾಗುವ ಸರಳಿನಲ್ಲಿರುವ ಕೊಂಡಿಗಳ ಸಹಾಯದಿಂದ ನೇತಾಡಿಕೊಂಡು ರೈಲಿನೊಳಗೆ ವೇಗವಾಗಿ ಮುಂದೆ ನೆಗೆಯುತ್ತಾ ಹೋಗಿರುವುದು ಈಗ ಎಲ್ಲೆಡೆ ಸುದ್ದಿಯಾಗಿದೆ.
ಆತ ತನ್ನ ಸೀಟನ್ನು ಹಿಡಿಯಲು ಸರಳಿನಲ್ಲಿ ಒಂದಾದ ಮೇಲೊಂದರಂತೆ ನೆಗೆಯುತ್ತ, ಬಹಳ ಮುಂದಿದ್ದ ತನ್ನ ಸೀಟನ್ನು ಪಡೆಯಲು ಸಾಗುತ್ತಾನೆ. ಇದರ ವಿಡಿಯೋ ಈಗ ವೈರಲ್ ಆಗಿದ್ದು, ಗೌರಂಗ್ ಭರ್ದ್‌ವಾ ಎಂಬವರಿಂದ ಪೋಸ್ಟ್ ಮಾಡಲಾಗಿದೆ. ಅವರು ತಮ್ಮ ಈ ಪೋಸ್ಟ್‌ಗೆ ಸ್ಪೈಡರ್ ಮ್ಯಾನ್ ಆಫ್ ಇಂಡಿಯಾ ಎಂಬ ಟೈಟಲ್ ಕೊಟ್ಟಿದ್ದು, ಈಗಾಗಲೇ ಹಲವರು ಈತನ ಐಡಿಯಾಕ್ಕೆ ಮರುಳಾಗಿದ್ದಾರೆ. ಬಹಳಷ್ಟು ಮಂದಿ, ನಿಜವಾಗಿಯೂ ಸ್ಪೈಡರ್ ಮ್ಯಾನ್ ಈತ ಎಂದು ಕಾಮೆಂಟ್ ಹಾಕಿದ್ದಾರೆ. ಇನ್ನೂ ಕೆಲವರು, ಜನರಲ್ ಬೋಗಿಯ ಮಂದಿಯ ಸಾಹಸಗಳು ಎಂದು ಕಾಮೆಂಟ್ ಮಾಡಿದ್ದರೆ ಇನ್ನೂ ಒಬ್ಬರು ಸ್ವಲ್ಪ ಭಾವುಕರಾಗಿ, ತಮಾಷೆಯಾಗಿದೆ, ಆದರೆ ಬೇಸರದ ವಿಷಯ. ಭಾರತೀಯ ರೈಲ್ವೆಯಲ್ಲಿನ ಇಂತಹ ಸ್ಥಿತಿ ಸುಧಾರಿಸುವುದು ಯಾವಾಗ ಎಂದು ಬರೆದಿದ್ದಾರೆ. ಒಟ್ಟಾರೆ, ಕಷ್ಟದಲ್ಲೂ ಇಂತಹ ಸಮಯಪ್ರಜ್ಞೆ ಹಾಗೂ ಕ್ರಿಯಾಶೀಲತೆಯಿಂದಿರುವ ಮೂಲಕ ಇದು ಉತ್ತಮ ಸಂದೇಶ ಸಾರುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.
ಈ ವಿಡಿಯೋ ನೋಡಿ ಇನ್ಮುಂದೆ ಹಲವರು ಈ ಬ್ರಹ್ಮವಿದ್ಯೆಯನ್ನು, ಮೆಟ್ರೋನಲ್ಲೋ, ಲೋಕಲ್ ರೈಲಿನಲ್ಲೋ ಪ್ರಯೋಗಿಸಿ ಉಪಯೋಗ ಪಡೆದುಕೊಳ್ಳುವ ಸಂಭವ ಹೆಚ್ಚಿದೆ!
ಇದನ್ನೂ ಓದಿ | Baby Bump | ಹಾರ್ಲೇ ಡೇವಿಡ್ಸನ್ ಬೈಕ್ ರೈಡ್ ಮಾಡಿದ ಗರ್ಭಿಣಿ; ಬೇಬಿ ಬಂಪ್ ಫೋಟೊ ಶೂಟ್ ವೈರಲ್