Site icon Vistara News

Viral News: ಇಂಡಿಗೋ ವಿಮಾನದಲ್ಲಿ ಕಿತ್ತೋಗಿರೋ ಕುಶನ್‌ !; ನೆಟ್ಟಿಗರ ತೀವ್ರ ಗೇಲಿ

indigo

indigo

ಬೆಂಗಳೂರು: ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ಇಂಡಿಗೋ ವಿಮಾನ (IndiGo Flights) ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಇತ್ತೀಚೆಗೆ ಇಂಡಿಗೊ ವಿಮಾನದಲ್ಲಿ ಬೆಂಗಳೂರಿನಿಂದ ಭೋಪಾಲ್‌ಗೆ ತೆರಳಿದ್ದ ಯವನಿಕಾ ರಾಜ್ ಶಾ ಎನ್ನುವ ಪ್ರಯಾಣಿಕರೊಬ್ಬರು ತಮ್ಮ ಸೀಟಿನಲ್ಲಿ ಕುಶನ್‌ (ಮೆತ್ತೆ) ಇಲ್ಲದಿರುವ ವಿಚಾರವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. ಜತೆಗೆ ಸೀಟ್‌ನ ಫೋಟೊವನ್ನೂ ಪೋಸ್ಟ್‌ ಮಾಡಿದ್ದರು. ಇದು ನೆಟ್ಟಿಗರ ಗಮನ ಸೆಳೆದು ಸಾಕಷ್ಟು ವೈರಲ್‌ ಆಗಿತ್ತು (Viral News). ಇದೀಗ ವಿಮಾನಯಾನ ಸಂಸ್ಥೆ ಇದಕ್ಕೆ ಪ್ರತಿಕ್ರಿಯಿಸಿದೆ. ಸ್ವಚ್ಛಗೊಳಿಸುವ ಉದ್ದೇಶದಿಂದ ಕುಶನ್‌ ತೆಗೆಯಲಾಗಿತ್ತು ಎಂದು ಸ್ಪಷ್ಟನೆ ನೀಡಿದೆ.

ವೈರಲ್‌ ಪೋಸ್ಟ್‌ನಲ್ಲಿ ಏನಿದೆ?

ʼʼಸುಂದರ IndiGo6E. ಈ ವಿಮಾನದ ಮೂಲಕ ಸುರಕ್ಷಿತವಾಗಿ ಇಳಿಯುತ್ತೇನೆ ಎಂದು ಭಾವಿಸುತ್ತೇನೆ. ಇದು ಬೆಂಗಳೂರಿನಿಂದ ಭೋಪಾಲ್‌ಗೆ ತೆರಳುವ ನಿಮ್ಮ 6ಇ 6465 ವಿಮಾನ” ಎಂದು ಯವನಿಕಾ ಬರೆದುಕೊಂಡು ಕುಶನ್ ಇಲ್ಲಿದಿರುವ ಸೀಟುಗಳ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದರು. ಇದು ಕೆಲವೇ ಕ್ಷಣಗಳಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿ ನೆಟ್ಟಿಗರ ಗಮನ ಸೆಳೆದಿತ್ತು. 7 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದರು.

ಇಂಡಿಗೋ ಅಧಿಕಾರಿಗಳು ಹೇಳಿದ್ದೇನು?

ಇದೀಗ ಈ ಬಗ್ಗೆ ಇಂಡಿಗೋ ವಿಮಾನ ಯಾನ ಸಂಸ್ಥೆ ಪ್ರತಿಕ್ರಿಯೆ ನೀಡಿದೆ. ಸ್ವಚ್ಛಗೊಳಿಸುವ ಉದ್ದೇಶದಿಂದ ಸೀಟ್‌ಗಳ ಕುಶನ್ ಅನ್ನು ತೆಗೆಯಲಾಗಿತ್ತು ಎಂದು ವಿವರಿಸಿದೆ. ವಿಮಾನ ಹೊರಡುವ ಮೊದಲು ಸೀಟ್‌ ಅನ್ನು ಶುಚಿಗೊಳಿಸಲು ಕುಶನ್ ತೆಗೆದುಹಾಕಲಾಗಿತ್ತು. ಕೂಡಲೇ ನಮ್ಮ ಸಿಬ್ಬಂದಿ ಈ ಬಗ್ಗೆ ಗ್ರಾಹಕರ ಗಮನಕ್ಕೆ ತಂದಿದ್ದರು ಎಂದು ಸ್ಪಷ್ಟಪಡಿಸಿದೆ.

“ನಮ್ಮೊಂದಿಗೆ ಮಾತನಾಡಿದ್ದಕ್ಕೆ ಧನ್ಯವಾದಗಳು ಮೇಡಂ. ಶುಚಿಗೊಳಿಸುವ ಉದ್ದೇಶಗಳಿಗಾಗಿ ವಿಮಾನದ ಹಾರಾಟಕ್ಕೆ ಮುಂಚಿತವಾಗಿ ಸೀಟ್ ಕುಶನ್‌ಗಳನ್ನು ಬದಲಾಯಿಸಲಾಯಿತು. ನಮ್ಮ ಕ್ಯಾಬಿನ್ ಸಿಬ್ಬಂದಿ ತಕ್ಷಣ ಸಮಸ್ಯೆ ಬಗೆಹರಿಸಿದರು. ಅಗತ್ಯವಿದ್ದಾಗ ಕುಶನ್‌ ತೆಗೆದು ಸ್ವಚ್ಛಗೊಳಿಸುತ್ತೇವೆ. ನಮ್ಮ ಗ್ರಾಹಕರಿಗೆ ಸ್ವಚ್ಛತೆ ಮತ್ತು ನೈರ್ಮಲ್ಯದ ಅತ್ಯುನ್ನತ ಮಾನದಂಡಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ” ಎಂದು ಅವರು ಬರೆದುಕೊಂಡಿದೆ.

ನೆಟ್ಟಿಗರ ಪ್ರತಿಕ್ರಿಯೆ

“ಕಳೆದ ವಾರ ಮುಂಬೈನಿಂದ ಇಂದೋರ್‌ಗೆ ತೆರಳುವ ಇಂಡಿಗೊ ವಿಮಾನದಲ್ಲಿಯೂ ಇಂತಹದ್ದೇ ಘಟನೆ ನಡೆದಿದೆ. ಪ್ರಯಾಣಿಕರು ಬಂದ ನಂತರವೇ ಸಿಬ್ಬಂದಿ ಕುಶನ್ ಸರಿಪಡಿಸಿದರು. ಬಹುಶಃ ಇಂಡಿಗೋ ಸಿಬ್ಬಂದಿ ಕುಶನ್ ಕೊರತೆಯನ್ನು ಎದುರಿಸುತ್ತಿದ್ದಾರೆ ಮತ್ತು ಬೇಡಿಕೆಗೆ ಅನುಗುಣವಾಗಿ ಅದನ್ನು ಬಳಸುತ್ತಿದ್ದಾರೆ!” ಎಂದು ಒಬ್ಬರು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: IndiGo Flight: ವಿಮಾನದೊಳಗೆ ಬೀಡಿ ಸೇದಿದ; ಬಳಿಕ ಜೈಲು ಕಂಬಿ ಎಣಿಸಿದ!

ಇನ್ನೊಬ್ಬರು ತಮಾಷೆ ಮಾಡಿ, “ಆಕ್ಯುಪ್ರೆಷರ್ ಸೌಲಭ್ಯದೊಂದಿಗೆ ಇರುವ ಇಂತಹ ಸೀಟ್‌ ಬುಕ್‌ ಮಾಡಲು ಎಷ್ಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ?ʼʼ ಎಂದು ಪ್ರಶ್ನಿಸಿದ್ದಾರೆ. “ನೀವು ಇನ್ನು ನಿಮ್ಮ ಸೀಟ್ ಬೆಲ್ಟ್‌ ಬಿಗಿಗೊಳಿಸಬೇಕಾಗಿಲ್ಲʼʼ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. “ಕಳೆದ ಎರಡು ವರ್ಷಗಳಲ್ಲಿ ಇಂಡಿಗೊ ಸೇವೆ ನಿಜವಾಗಿಯೂ ಕುಸಿತ ಕಂಡಿದೆ” ಎಂದು ಮಗದೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಈ ವಿಚಾರ ಗಮನ ಸೆಳೆದು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version