Site icon Vistara News

Viral News: ಬೆಂಗಳೂರಲ್ಲಿ ಫ್ಲೈಟ್‌ ಚಾರ್ಜ್‌ಗೆ ಸಮವಾಯ್ತೇ ಪಾರ್ಕಿಂಗ್‌ ಶುಲ್ಕ? ಯುಬಿ ಮಾಲ್‌ನಲ್ಲಿ ಗಂಟೆಗೆ 1000 ರೂ.!

parking charge at bengaluru UB mall

ಬೆಂಗಳೂರು: ವಾರೆವ್ಹಾ ಬೆಂಗಳೂರು..! ಒಂದು ಗಂಟೆ ಪಾರ್ಕಿಂಗ್‌ಗೆ ಅಬ್ಬಬ್ಬಾ ಎಂದರೆ ಎಷ್ಟು ಚಾರ್ಜ್‌ ಮಾಡಬಹುದು? 50 ರೂ.?, 100 ರೂ.? ಹೋಗಲಿ 200 ರೂ.? ಜಾಸ್ತಿ ಚಿಂತೆ ಮಾಡಬೇಡಿ. ಬೆಂಗಳೂರಿನ ಈ ಮಾಲ್‌ವೊಂದರಲ್ಲಿ ಬರೋಬ್ಬರಿ 1000 ರೂಪಾಯಿ ಪಾರ್ಕಿಂಗ್‌ ಚಾರ್ಜ್‌ ಅನ್ನು ನಿಗದಿ ಮಾಡಿದೆ. ಈ ಫೋಟೊ ಈಗ ಸಖತ್‌ ವೈರಲ್‌ ಆಗಿದೆ. ಭಾರತದಲ್ಲಿ ಮಾತ್ರ ಇಂಥ ಅಪರೂಪದ ಸಂಗತಿಗಳನ್ನು ಕಾಣಬಹುದು ಎಂದು ನೆಟ್ಟಿಗರೊಬ್ಬರು ಕಾಲೆಳೆದು ಫೋಟೊವನ್ನು ಅಪ್ಲೋಡ್‌ ಮಾಡಿದ್ದು, ಈಗ ವೈರಲ್‌ (Viral News) ಆಗಿದೆ. ಅಲ್ಲದೆ, ಇದು ಫ್ಲೈಟ್‌ ಚಾರ್ಜ್‌ನಂತೆ ಆಗಲಿಲ್ಲವೇ? ಎಂಬ ಪ್ರಶ್ನೆಯನ್ನೂ ಹಲವರು ಮುಂದಿಟ್ಟಿದ್ದಾರೆ.

ವಿಜಯ್‌ ಮಲ್ಯ ಒಡೆತನದ ಯುಬಿ ಸಿಟಿಯ ಶಾಂಪಿಂಗ್‌ ಮಾಲ್‌ನಲ್ಲಿ ‘ಪ್ರೀಮಿಯಂ ಪಾರ್ಕಿಂಗ್’ಗೆ ಪ್ರತಿ ಗಂಟೆಗೆ 1,000 ರೂಪಾಯಿ ಶುಲ್ಕವನ್ನು ನಿಗದಿ ಮಾಡಲಾಗಿದೆ. ಇದನ್ನು ನೋಡಿದ ಎಂಥವರಿಗಾದರೂ ಒಮ್ಮೆ ಎದೆ ಧಸಕ್ಕೆನ್ನಬಹುದು. ಇಶಾನ್ ವೈಶ್ ಎಂಬುವವರಿಗೂ ಹಾಗೇ ಆಗಿದೆ. ಅವರು ನೋಡಿಕೊಂಡು ಸುಮ್ಮನೆ ಹೋಗಲಿಲ್ಲ. ಬದಲಾಗಿ ಅದರ ಒಂದು ಫೋಟೊವನ್ನು ತೆಗೆದು ತಮ್ಮ ಟ್ವಿಟರ್‌ ಖಾತೆಯಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಇದೀಗ ಸಖತ್‌ ಸದ್ದು ಮಾಡುತ್ತಿದೆ. ನೆಟ್ಟಿಗರಿಂದ ತರಹೇವಾರು ಕಮೆಂಟ್‌ಗಳು ಸಹ ಬರುತ್ತಿವೆ.

ಇಶಾನ್‌ ವೈಶ್‌ ಟ್ವೀಟ್‌ನಲ್ಲೇನಿದೆ?

ಇಶಾನ್ ವೈಶ್ ಎಂಬುವವರು ಯುಬಿ ಸಿಟಿಯ ಪ್ರೀಮಿಯಂ ಪಾರ್ಕಿಂಗ್ ಶುಲ್ಕವುಳ್ಳ ಸೈನ್ ಬೋರ್ಡ್ ಫೋಟೊವನ್ನು ತಮ್ಮ ಟ್ವಿಟರ್‌ನಲ್ಲಿ ಅಪ್ಲೋಡ್‌ ಮಾಡಿ, ‘ಇಂಥ ಸಂಗತಿಗಳು ಭಾರತದಲ್ಲಿ ಮಾತ್ರವೇ ನಮಗೆ ಕಾಣಸಿಗುತ್ತವೆ!! ಮತ್ತೆ ಇದು ವಿಮಾನ ನಿಲ್ದಾಣವಲ್ಲ’ ಎಂದು ಬರೆದುಕೊಂಡಿದ್ದಾರೆ. ಈಗ ಈ ಫೋಟೊ ಬಗ್ಗೆ ಟ್ವಿಟರ್‌ನಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಕೆಲವರು ಇದನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಬಹುತೇಕ ಮಂದಿ ವ್ಯಂಗ್ಯ ಮಿಶ್ರಿತವಾಗಿ ಕಿಡಿಕಾರಿದ್ದಾರೆ.

ಟ್ವಿಟರ್‌ನಲ್ಲಿ ತರಹೇವಾರು ಕಮೆಂಟ್‌

ಟ್ವಿಟರ್‌ನಲ್ಲಿ ಇಶಾನ್‌ ಪೋಸ್ಟ್‌ಗೆ ತರಹೇವಾರು ಕಮೆಂಟ್‌ಗಳು ಬರುತ್ತಿವೆ. ಆ ಕಮೆಂಟ್‌ಗಳನ್ನು ಈ ಕೆಳಗೆ ನೀಡಲಾಗಿದೆ.

“ಬೆಂಗಳೂರು ಸ್ಯಾನ್ ಫ್ರಾನ್ಸಿಸ್ಕೋ ಆಗಲು ಪ್ರಯತ್ನಿಸುತ್ತಿದೆ” ಎಂದು ಒಬ್ಬರು ಕಮೆಂಟ್ ಮಾಡಿದರೆ, “ಬೆಂಗಳೂರು ಎಂದರೆ ಸಿಂಗಾಪುರ, ಹಾಂಗ್‌ಕಾಂಗ್, ಲಂಡನ್, ದುಬೈ ಮಾದರಿ ಅಲ್ಲವೇ?” ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

‘ಪ್ರೀಮಿಯಂ ಪಾರ್ಕಿಂಗ್’ ಎಂದರೆ ಏನು ಎಂದು ಹಲವರು ಆಶ್ಚರ್ಯಪಟ್ಟರೆ, ಇನ್ನು ಕೆಲವರು, ಇದೇನು ಇಲ್ಲಿ ಕಾರಿಗೆ ಸ್ನಾನವನ್ನೇ ಮಾಡಿಸುತ್ತಾರೋ ಅಥವಾ ‘ಡೈಮಂಡ್ ಫೇಶಿಯಲ್’ ಏನಾದರೂ ಮಾಡುತ್ತಾರೋ? ಅದಕ್ಕೆ ಇಷ್ಟು ಹಣವನ್ನು ಚಾರ್ಜ್‌ ಮಾಡುತ್ತಿದ್ದಾರಾ ಎಂದು ಕಾಲೆಳೆದಿದ್ದಾರೆ. ಇನ್ನು ಕೆಲವರು ಟ್ವಿಟರ್‌ನಲ್ಲಿ ಮೂಡುವಂತೆ 1 ಸಾವಿರ ರೂಪಾಯಿ ಕೊಟ್ಟರೆ ಕಾರಿಗೆ ‘ಬ್ಲೂ ಟಿಕ್’ ಸಿಗುತ್ತದೆಯೇ ಎಂದು ವ್ಯಂಗ್ಯವಾಡಿದ್ದಾರೆ.

“ಕಾರ್ ಪಾರ್ಕಿಂಗ್ ಜತೆಗೆ 1 ತಿಂಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಲು ನೀವೇನಾದರೂ ಅಲ್ಲಿ ಸ್ಟಾಕ್ ಟಿಪ್ ಅನ್ನು ಪಡೆಯುತ್ತೀರಾ? ಹೌದು ಎಂದಾದರೆ, ನೀವು ಕಟ್ಟುವ ಹಣ ಸರಿಯಾಗಿಯೇ ಇದೆ” ಎಂದು ಮತ್ತೊಬ್ಬ ಟ್ವಿಟರ್‌ ಬಳಕೆದಾರರು ಬರೆದಿದ್ದಾರೆ.

ಪಾರ್ಕಿಂಗ್‌ ಚಾರ್ಜ್‌ನಿಂದ ಭೂಮಿಯ ಬೆಲೆವರೆಗೆ ಮಹಾ ಚರ್ಚೆ!

ದಿನಕ್ಕೆ ಸರಾಸರಿ 10 ಗಂಟೆಗಳಿಗೆ 1000 ರೂಪಾಯಿ ಎಂದು ಲೆಕ್ಕ ಹಾಕಿಕೊಂಡರೂ ತಿಂಗಳಿಗೆ 3 ಲಕ್ಷ ರೂಪಾಯಿ ಆಗುತ್ತದೆ. ಅಂದರೆ ವರ್ಷಕ್ಕೆ 36 ಲಕ್ಷ ರೂಪಾಯಿ ಆಗುತ್ತದೆ. ಹೂಡಿಕೆಯ ಮೇಲೆ ನಿರೀಕ್ಷಿತ ಆದಾಯವು ವರ್ಷಕ್ಕೆ 20% ಆಗಿದ್ದರೆ, ಆ ಭೂಮಿಯ ಬೆಲೆ 1.8 ಕೋಟಿ ರೂಪಾಯಿ ಆಗಿರಬೇಕು ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

“ಒಂದು ಜಗ್ವಾರ್, ಫೆರಾರಿ ಮಾಲೀಕರಾದರೆ ಗಂಟೆಗೆ 1000 ರೂಪಾಯಿಯನ್ನು ಆರಾಮದಲ್ಲಿ ಪಾವತಿ ಮಾಡುತ್ತಾರೆ ಆದರೆ, ಆಲ್ಟೋ, ಮಾರುತಿ 800, ವ್ಯಾಗನಾರ್ ಇತ್ಯಾದಿ ವಾಹನಗಳನ್ನು ಹೊಂದಿರುವವರು ಮನೆಯಲ್ಲಿಯೇ ಕಾರನು ಪಾರ್ಕ್‌ ಮಾಡಿ ಬೇರಬೇಕು. ಮೆಟ್ರೋ, ಬಸ್‌ನಲ್ಲಿ ಬರಬೇಕು” ಎಂದು ಮಗದೊಬ್ಬರು ಹೇಳಿದ್ದಾರೆ.

ಸುರಕ್ಷತೆ ನೋಡುವವನು ಪಾವತಿ ಮಾಡುತ್ತಾನೆ

1 ಕೋಟಿ ಅಥವಾ ಅದಕ್ಕಿಂತಲೂ ಹೆಚ್ಚಿನ ಬೆಲೆಯುಳ್ಳ ವಾಹನವನ್ನು ಹೊಂದಿರುವ ವ್ಯಕ್ತಿಗೆ 1,000 ರೂಪಾಯಿ ಹೆಚ್ಚಿನ ಮೊತ್ತವೇನೂ ಅಲ್ಲ. ಬದಲಿಗೆ, ಅವನು ತನ್ನ ವಾಹನದ ಸುರಕ್ಷತೆಯನ್ನು ನೋಡುತ್ತಾನೆ” ಎಂದು ಟ್ವಿಟರ್‌ ಖಾತೆದಾರರೊಬ್ಬರು ಹೇಳೀದ್ದಾರೆ.

Exit mobile version