ಚೆನ್ನೈ: ಬಿಸಿಲಿನ ಝಳ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಪ್ರಖರವಾಗುತ್ತಿರುವ ಸೂರ್ಯನ ತಾಪಕ್ಕೆ ಜನ ಬಸವಳಿದಿದ್ದಾರೆ. ಒಂದೆಡೆ ಮಳೆ ಕೊರತೆಯಿಂದ ನೀರಿಗೆ ಹಾಹಾಕಾರ; ಇನ್ನೊಂದೆಡೆ ಹೆಚ್ಚುತ್ತಿರುವ ಉಷ್ಣತೆ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಹೀಗಾಗಿ ಎಲ್ಲರೂ ತಂಪು ಪಾನೀಯ, ಶರಬತ್ತು, ಎಳನೀರಿನ ಮೊರೆ ಹೋಗುತ್ತಿದ್ದಾರೆ. ಅದಕ್ಕೆ ತಕ್ಕಂತೆ ಇವುಗಳ ಬೆಲೆಯಲ್ಲಿಯೂ ಏರಿಕೆ ಕಂಡು ಬಂದಿದೆ. ಇದರ ಜತೆಗೆ ಈ ಸುದ್ದಿ ಕೇಳಿ ನೀವು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಡಬಹುದು. ಯಾಕೆಂದರೆ ಲಿಂಬೆ ಹಣ್ಣೊಂದು ಬರೋಬ್ಬರಿ 35,000 ರೂ.ಗೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ. ಅರೆ ಚಿನ್ನದ ಬಣ್ಣದ ಲಿಂಬೆ ಚಿನ್ನದಷ್ಟೇ ದುಬಾರಿಯಾಯ್ತ? ಇನ್ನು ಶರಬತ್ತು ಕುಡಿಯೋದು ಕನಸಿನಲ್ಲಿ ಮಾತ್ರನಾ? ಎಂದು ಗಾಬರಿಗೊಳ್ಳಬೇಡಿ. ಏಕೈಕ ಲಿಂಬೆ ಹೇಗೆ ಇಷ್ಟೊಂದು ಅಧಿಕ ಬೆಲೆಗೆ ಮಾರಾಟವಾಯ್ತು ಎನ್ನುವ ವಿವರ ಇಲ್ಲಿದೆ (Viral News).
ಯಾವುದಿದು ದುಬಾರಿ ತಳಿಯ ಲಿಂಬೆ?
ಇದು ಯಾವುದೇ ದುಬಾರಿ ತಳಿಯ ಲಿಂಬೆ ಹಣ್ಣಲ್ಲ. ಸಾಮಾನ್ಯ ಲಿಂಬೆಯೇ. ಬೇಡಿಕೆ ವೃದ್ಧಿಸಿ ಬೆಲೆ ಗಗನಕ್ಕೇರಿದ್ದೂ ಅಲ್ಲ. ಬದಲಾಗಿ ದೇವಸ್ಥಾನವೊಂದರ ಹರಾಜಿನಲ್ಲಿ ಈ ಲಿಂಬೆ 35,000 ರೂ. ಮಾರಾಟವಾಗಿ ಗಮನ ಸೆಳೆದಿದೆ. ಈರೋಡ್‌ನ ಗ್ರಾಮವೊಂದರ ಖಾಸಗಿ ದೇವಸ್ಥಾನದಲ್ಲಿ ಈ ಹರಾಜು ಪ್ರಕ್ರಿಯೆ ನಡೆದಿದೆ.
ವಿವರ
ಈರೋಡ್‌ನಿಂದ 35 ಕಿ.ಮೀ. ದೂರದಲ್ಲಿರುವ ಶಿವಗಿರಿ ಗ್ರಾಮದ ಬಳಿಯ ಪಳಪೂಸಾಯನ್ (Pazhapoosaian) ಶಿವ ದೇವಸ್ಥಾನದಲ್ಲಿ ಹರಾಜು ಪ್ರಕ್ರಿಯೆಯನ್ನು ಅಯೋಜಿಸಲಾಗಿತ್ತು. ಇಲ್ಲಿ ಶುಕ್ರವಾರ (ಮಾರ್ಚ್ 8) ಅದ್ಧೂರಿಯಾಗಿ ಮಹಾ ಶಿವರಾತ್ರಿಯಲ್ಲಿ ನಡೆದಿತ್ತು. ಈ ವೇಳೆ ಶಿವನಿಗೆ ಅರ್ಪಿಸಿದ ಲಿಂಬೆ, ಹಣ್ಣುಗಳು ಸೇರಿದಂತೆ ಇತರ ವಸ್ತುಗಳನ್ನು ಹರಾಜು ಹಾಕಲಾಯಿತು. ʼʼಹರಾಜಿನಲ್ಲಿ 15 ಭಕ್ತರು ಭಾಗವಹಿಸಿದ್ದರು ಮತ್ತು ಈ ವೇಳೆ ಈರೋಡ್‌ನ ಭಕ್ತರೊಬ್ಬರಿಗೆ ಲಿಂಬೆ ಹಣ್ಣನ್ನು 35,000 ರೂ.ಗೆ ಮಾರಾಟ ಮಾಡಲಾಗಿದೆʼʼ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ದೇವಾಲಯದ ಅರ್ಚಕರು ಹರಾಜು ಮಾಡಿದ ಲಿಂಬೆ ಹಣ್ಣನ್ನು ಪ್ರಧಾನ ದೇವರ ಮುಂದೆ ಇರಿಸಿ ಪೂಜೆ ನೆರವೇರಿಸಿ ನೂರಾರು ಭಕ್ತರ ಸಮ್ಮುಖದಲ್ಲಿ ಅತಿ ಹೆಚ್ಚು ಬಿಡ್ ಮಾಡಿದ ವ್ಯಕ್ತಿಗೆ ಹಸ್ತಾಂತರಿಸಿದರು.
ನಂಬಿಕೆ
ಯಾರು ಅತಿ ಹೆಚ್ಚು ಬಿಡ್ ಮಾಡಿ ಲಿಂಬೆ ಹಣ್ಣನ್ನು ಪಡೆಯುತ್ತಾರೋ ಅವರ ಸಂಪತ್ತು ಮುಂಬರುವ ವರ್ಷಗಳಲ್ಲಿ ವೃದ್ಧಿಸುತ್ತದೆ ಮತ್ತು ಉತ್ತಮ ಆರೋಗ್ಯ ಲಭಿಸುತ್ತದೆ ಎನ್ನುವ ನಂಬಿಕೆ ಇಲ್ಲಿದೆ. ಹೀಗಾಗಿಯೇ ಹರಾಜಿನಲ್ಲಿ ದುಬಾರಿ ಮೊತ್ತವನ್ನು ಕೂಗಲಾಯಿತು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Viral News: ಇನ್ನು ಮುಂದೆ ಕುರ್ತಾ ಧರಿಸಲಿದ್ದಾರೆ ಝೊಮಾಟೋ ಮಹಿಳಾ ಸಿಬ್ಬಂದಿ; ಹೊಸ ಸಮವಸ್ತ್ರ ಹೇಗಿದೆ ನೋಡಿ
430 ಕೋಟಿ ರೂ.ಗೆ ಮಾರಾಟವಾಯ್ತು ಫೆರಾರಿ 250 ಜಿಟಿಒ ಕಾರು!
ಕಳೆದ ವರ್ಷ ಅಮೆರಿಕದಲ್ಲಿ ನಡೆದ ಹರಾಜಿನಲ್ಲಿ ಕಾರೊಂದು 430 ಕೋಟಿ ರೂ.ಗೆ ಮಾರಾಟವಾಗಿ ದಾಖಲೆ ನಿರ್ಮಿಸಿತ್ತು. 1962ರಲ್ಲಿ ತಯಾರಾದ ಕೆಂಪು ಬಣ್ಣದ ಫೆರಾರಿ 250 ಜಿಟಿಒ (Ferrari 250 GTO) ಕಾರು ಹರಾಜಿನಲ್ಲಿ ಬರೋಬ್ಬರಿ 51.7 ಮಿಲಿಯನ್ ಡಾಲರ್ ಅಂದರೆ ಸುಮಾರು 430 ಕೋಟಿ ರೂ.ಗೆ ಮಾರಾಟವಾಗಿತ್ತು. ನ್ಯೂಯಾರ್ಕ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಇಷ್ಟು ದುಬಾರಿ ಮೊತ್ತ ಕೂಗುವ ಮೂಲಕ ಅಪರೂಪದ ಕಾರನ್ನು ತಮ್ಮದಾಗಿಸಿಕೊಂಡಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ